ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ಪರಂಪರೆ / ೧೧

ಇಲ್ಲಿ ಗಮನಿಸಬೇಕಾದ ಬಹು ಮುಖ್ಯ ಅಂಶ ಒಂದುಂಟು. ಯಕ್ಷಗಾನದಲ್ಲಿ ಅಂತೇ ಯಾವುದೇ ಪ್ರದರ್ಶನ, ನಾಟಕಗಳಲ್ಲಿ ಎರಡು ಮುಖ್ಯ ಅಂಗಗಳಿವೆ - ಒಂದು ಆ ಕಲೆಯ ರೂಪ ವಿಧಾನ, ಇನ್ನೊಂದು ಅದು ಆರಿಸಿಕೊಂಡಿರುವ ಕಥೆ, ಕಥಾವಸ್ತು ಮತ್ತು ಆಶಯ. ಇಲ್ಲಿ ಸ್ವಚ್ಛ ಕಲಾದೃಷ್ಟಿಯುಳ್ಳ ಪರಂಪರಾವಾದಿಯ ಲಕ್ಷ್ಮ ಇರುವುದು, ರೂಪ (Form) ಕೈ ಸಂಬಂಧಿಸಿ, ಹೊರತು ವಸ್ತುವಿನ ಬಗೆಗೆ ಅಲ್ಲ-ಎಂದರೆ, ವಸ್ತುವಿನ ಬಗೆಗೂ ಲಕ್ಷ ಬೇಕು ನಿಜ, ಆದರೆ ಅದು ಗೌಣ. (ಯಕ್ಷಗಾನಕ್ಕೆ ವಸ್ತು ಅಪ್ರಧಾನ ಎಂದು ಇಲ್ಲಿ ತಪ್ಪಾಗಿ ಅರ್ಥವಿಸಬಾರದು, ಎರಡೂ ಮುಖ್ಯವೇ. ಆದರೆ, ಪರಂಪರಾವಾದದ ಸಂದರ್ಭದಲ್ಲಿ 'ರೂಪ' ವಿಚಾರವೇ ಮುಖ್ಯ ಎಂದರ್ಥ)

ಯಕ್ಷಗಾನವೆಂಬುದು ಒಂದು ಬಗೆಯ 'ಅವಾಸ್ತವ' ಯಾ 'ಭ್ರಮಾತ್ಮಕ' ರಂಗಪ್ರಕಾರ. ಅದರ ವೇಷ ಭೂಷಣ ವಿವರಗಳು, ಗಾನ, ಹಿಮ್ಮೇಳ, ರಂಗತಂತ್ರ, ಅಭಿವ್ಯಕ್ತಿ ವಿಧಾನ - ಇವಕ್ಕೆಲ್ಲ ಸಾಕಷ್ಟು ಪರಿಷ್ಕೃತವಾದ ಪದ್ಧತಿಗಳಿರುವುದರಿಂದ, ಒಂದು ಬಗೆಯ 'ಶಾಸ್ತ್ರ'ವಿದೆ. ಯಕ್ಷಗಾನದ ರೂಪ ರಚನಾ ವಿಧಾನವನ್ನು ಗಮನಿಸಿದರೆ, ಅವುಗಳ ಎಲ್ಲ ಅಂಗಗಳೂ ಸಾಕಷ್ಟು ಬೆಳವಣಿಗೆ ಹೊಂದಿದ ಒಂದು ಹಂತಕ್ಕೆ ಬಂದಿರುವುದು ಗಮನಕ್ಕೆ ಬರುತ್ತದೆ. ಯಕ್ಷಗಾನದ ರಂಗಭೂಮಿಯು 'ಅವಾಸ್ತವ' ಸ್ವರೂಪದ್ದು ಮತ್ತು ಅಂಗಗಳು ಸಾಕಷ್ಟು ಬೆಳೆದಿವೆ - ಎಂಬ ಎರಡು ಅಂಶಗಳ ಪ್ರಜ್ಞೆ ಇಲ್ಲದೆ ಮಾಡುವ ಯಾವುದೇ ಬದಲಾವಣೆಯು ಆಭಾಸಕರವೂ, ಯಕ್ಷಗಾನದ ಸೌಂದರ್ಯಕ್ಕೆ ಮಾರಕವೂ ಆಗುವುದು ಅನಿವಾರ್ಯ. ಸಾಂಪ್ರದಾಯಿಕ ಕಲೆಯು ಪ್ರಸಕ್ತ ರೂಪ (Form)ದ ಸರಿಯಾದ ಸಮಗ್ರವಾದ ತಿಳಿವು ಇಲ್ಲದವನಿಂದ ಅದಕ್ಕೆ ಅರ್ಥಪೂರ್ಣವಾದ ಕೊಡುಗೆ ಸಾಧ್ಯವಿಲ್ಲದ ಮಾತು. ಈ ಕಲೆಯಲ್ಲಿರುವ ಸಾಮಾಗ್ರಿಗಳ ಸಾಧ್ಯತೆಗಳನ್ನೂ ಮಿತಿಗಳನ್ನೂ - ಅರಿತಾಗ ಮಾತ್ರ ಪರಿಷ್ಕಾರ ಸಾಧ್ಯ. ಅಂತಹ ಅರಿವಿಲ್ಲದೆ, ಬಂದು ಇಂದು ರಂಗಭೂಮಿಯನ್ನು ವ್ಯಾಪಿಸಿರುವ ಅಂಶಗಳ ಬಿರುಗಾಳಿಗೆ ಸಿಕ್ಕಿ ಯಕ್ಷಗಾನದ ರೂಪದ ಮೂಲ ಚೌಕಟ್ಟು ಇಂದು ಅಲುಗಾಡುತ್ತಿದೆ. ಆದುದರಿಂದ ಇಂದು ಪ್ರಜ್ಞಾವಂತ ವಿಮರ್ಶಕ ಯಕ್ಷಗಾನದ ಸಾಂಪ್ರದಾಯಿಕ ರೂಪ ರಕ್ಷಣೆಯ ಬಗೆಗೆ ಸರ್ವಶಕ್ತಿಯಿಂದ ದನಿ ಎತ್ತರಿಸಬೇಕಾದುದು ಮುಖ್ಯವಿದೆ. ಹಾಗಾಗಿ, ಇಂದು ಯಕ್ಷಗಾನ ರಂಗಭೂಮಿ ಇರುವ ಘಟ್ಟದಲ್ಲಿ, ವಿಮರ್ಶೆಯ ಒತ್ತು ರೂಪ ರಕ್ಷಣೆಗೆ ಇರುವುದು ಅನಿವಾರ್ಯ ಅವಶ್ಯಕತೆಯಾಗಿದೆ.

ಈ ನೆಲೆಯಲ್ಲಿ 'ಪೌರಾಣಿಕ ಕತೆಗಳನ್ನೇ ಆಡಬೇಕು' ಎಂದು ಹೇಳುವವರ ಮಾತನ್ನು ಯಕ್ಷಗಾನದ ಒಟ್ಟು ಸ್ವರೂಪಕ್ಕೆ ಹೊಂದುವ ಕತೆಗಳನ್ನೇ, ಆಡಬೇಕು ಎಂದು ಅರ್ಥವಿಸಬೇಕು. ಪೌರಾಣಿಕ ಕತೆಯೇ ಆಗಿದ್ದರೂ, ಯಕ್ಷಗಾನದ ರೂಪಕ್ಕೂ, 'ನಾಟಕೀಯ' ಅವಶ್ಯಕತೆಗಳಿಗೂ ಹೊಂದಿಕೆ ಆಗದಿದ್ದರೆ, ಗ್ರಾಹ್ಯವಲ್ಲವೆಂಬ ಅರ್ಥವೂ ಅಲ್ಲೇ ಇದೆ.