ವಿಷಯಕ್ಕೆ ಹೋಗು

ಪುಟ:ಜಾಗರ.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨ / ಜಾಗರ

ಕಥೆಯನ್ನು ಯಕ್ಷಗಾನದ ವೇಷ, ತಂತ್ರ, ಪದ್ಧತಿಗಳಿಂದ ಆಡುವಂತಿರಬೇಕಾದುದು ಮುಖ್ಯ - ಉಳಿದಂತೆ ರಂಗಭೂಮಿಯ ಅಪೇಕ್ಷಿತ ಗುಣಗಳು ಅದರಲ್ಲಿರಬೇಕೆಂಬುದನ್ನು ಹೇಳಬೇಕಿಲ್ಲವಷ್ಟೆ. ಕಥೆ ಕಲ್ಪಿತವೋ, ಪರಿವರ್ತಿತವೋ ರೂಪಾಂತರವೊ ಆದರೆ ತೊಂದರೆ ಏನೂ ಇಲ್ಲ. ಪುರಾಣಗಳೂ ಕಲ್ಪಿತ ಕಥೆಗಳು ತಾನೆ? ನಮಗೆ ಪುರಾಣ ರೂಪ ಬೇಕಿರುವುದು ಅದರ ಮತೀಯ ಆಶಯಕ್ಕಲ್ಲ. ಯಕ್ಷಗಾನದ ಕಲಾ ರೂಪಕ್ಕೆ ಅನಿವಾರ್ಯವೆಂಬುದರಿಂದ ಬೇಕೆಂಬುದಕ್ಕಾಗಿ ಸದ್ಯ ಯಕ್ಷಗಾನದ ರೂಪ ವಿಘಟನ ಆಗುವ (deformulate) ರೀತಿ, ಮತ್ತು ವೇಗಗಳನ್ನು ಕಂಡಾಗ ಅದರ ಸ್ವಸ್ವರೂಪ (ವಿಶೇಷವಾಗಿ ತೆಂಕುತಿಟ್ಟು) ಪೂರ್ತಿನಾಶವಾಗಿ, ಅದು ದೊಡ್ಡಾಟ, ಯಕ್ಷಗಾನ ಕಂಪೆನಿನಾಟಕ ಮಿಶ್ರಣಗಳ ಒಂದು ರೂಪದ ಹಂತವನ್ನು ತಲುಪಲು ದಶಕಗಳು ಸಾಕು. ಈ ಅತ್ಯಂತ ಕಳವಳಕಾರಿಯಾದ ಸಂಗತಿಯು, ನಮ್ಮ ಹೆಚ್ಚಿನ ಕಲಾವಿದರನ್ನಾಗಲಿ, ವ್ಯವಸಾಯೀ ಮೇಳಗಳನ್ನಾಗಲಿ ಕಾಡುತ್ತಲಿಲ್ಲ ಎ೦ಬುದ೦ತೂ ಕರುಳು ಕತ್ತರಿಸುವ ದುಸ್ಸಹ ಸನ್ನಿವೇಶ. ಯಕ್ಷಗಾನದ ಶೈಲಿಯ ಬಗೆಗೆ ವ್ಯವಸ್ಥಿತವಾದ ಜ್ಞಾನವಾಗಲಿ, ಅದನ್ನುಳಿಸಬೇಕೆಂಬ ಕಾರಣವಾಗಲಿ ಕಾಣುತ್ತಿಲ್ಲ. ಕಲಾವಿದರು ಗತಾನುಗತಿಕವಾಗಿ ಕಲಿತ, ಹೆಚ್ಚಿನ ಕಲಾವಿಮರ್ಶಾತ್ಮಕ ಹಿನ್ನಲೆ ಇಲ್ಲದವರು, ಅವರಲ್ಲಿ ಪರಂಪರೆಯ ಬಗೆಗೆ ಮೂಲಭೂತವಾದ ಜಾಗೃತಿ ಮೂಡಿಸುವುದು ತುರ್ತಿನ ಕೆಲಸ. ಅದಕ್ಕಾಗಿ ಅವಶ್ಯವಾದಮಾಹಿತಿ, ಬೋಧನ ಸಾಮರ್ಥ್ಯವಿರುವವರಿಂದ ಕಲಾವಿದರಿಗೆ 'ಕಮ್ಮಟ'ಗಳನ್ನು ಏರ್ಪಡಿಸುವ ಕೆಲಸ, ಮೇಳಗಳಿಂದಲೇ ಆದರೊಳಿತು. ಯಕ್ಷಗಾನದ ಸಾಹಿತ್ಯ ವಿಭಾಗ, ಅರ್ಥಗಾರಿಕೆ, ಪ್ರಸಂಗರಚನೆಗೆ - ಇದನ್ನು ಬಿಟ್ಟರೆ ಉಳಿದ ಎಲ್ಲ ಅಂಶಗಳು, ರಂಗಕ್ರಮ, ಸಂಗೀತ, ವೇಷ, ಬಣ್ಣಗಾರಿಕೆ - ಎಲ್ಲವೂ ದಿಕ್ಕಾಪಾಲಾಗುವ ಸ್ಥಿತಿಯಲ್ಲಿವೆ, ಹಿಂದೆ ಇದೆಲ್ಲ ಉತ್ಕೃಷ್ಟವಾಗಿತ್ತು ಎಂದು ಇದರರ್ಥವಲ್ಲ - ಹಿಂದಿನದರಲ್ಲಿ ಇರುವ ಮೂಲ ಸಾಮಾಗ್ರಿ - ಅರ್ಥಾತ್ ಕಲಾವ್ಯಾಕರಣವೇ ನಾಶದ ಅಂಚಿಗೆ ಬಂದಿದೆ ಎಂಬುದಷ್ಟೇ-

ರೂಪ ಸಂರಕ್ಷಣೆಯೇ ಯಕ್ಷಗಾನದ ಮುಂದಿರುವ ಏಕೈಕ ಕಾವ್ಯವೆಂದಲ್ಲ. ಅದು ಮೊದಲಿನದು ಮತ್ತು ಬಹು ಮುಖ್ಯವಾದದ್ದು. ಯಕ್ಷಗಾನದ 'Form'ನ್ನುಳಿಸಿಕೊಂಡು, ಪ್ರಯೋಗ, ಪರಿಷ್ಕಾರ, ರಚನೆಗಳಿಗೆ ಅಮಿತ ಅವಕಾಶಗಳಿವೆ. ರೂಪದಲ್ಲೇ ಸಮಸ್ಯೆಗಳೂ ಇವೆ. ಅದು ಎಲ್ಲ ಕಲೆ, ಸಾಹಿತ್ಯ ಪ್ರಕಾರಗಳಲ್ಲಿ ಇದ್ದುದೇ. ಆದರೆ ಸಮಕಾಲೀನ ಸಮಾಜವನ್ನು ಆಧರಿಸಿ, ಆಶಯ ಪ್ರಧಾನ (ವಿಷಯ ಪ್ರಧಾನ)ವಾಗಿ ರಚಿಸುವ, ನಾಟಕ, ಕವಿತೆ, ಕತೆ ಇವುಗಳ ಕರ್ತೃವಾಗಿರುವ ಸ್ವಾತಂತ್ರ್ಯ ಪಾರಂಪರಿಕ ಕಲೆಗೆ ಇರುವುದು ಅಪೇಕ್ಷಣೀಯವೂ ಅಲ್ಲ, ಶಕ್ಯವೂ ಅಲ್ಲ.

ಯಕ್ಷಗಾನದ ಸೌಂದರ್‍ಯಾಂಶಗಳನ್ನು ಅದರ ಪ್ರೌಢ ಸ್ವತಂತ್ರ ಶೈಲಿ