ನಾವು ಕೊಟ್ಟೆವು”, “ಸಾಂಪ್ರದಾಯಿಕ ಪದ್ಧತಿಯ ಆಟ ಯಾರಿಗೆ ಬೇಕು?"- ಎಂಬ ವಾದವನ್ನು ನಾನು ಹಲವು ಬಾರಿ ಕೇಳಿದ್ದೇನೆ.
ಇದಕ್ಕೆ ಪ್ರತಿಯಾಗಿ ಸಂಬಂಧಿತರು ಈ ಪ್ರಶ್ನೆಗಳನ್ನೂ ಉತ್ತರಿಸಬೇಕಾಗುತ್ತದೆ-
1 'ಜನ' ಅಂದರೆ ಯಾರು? ಈ 'ಜನ' ಕಲಾಭಿಜ್ಞರೆ? ಕೇವಲ ಬಹುಮತದ ಡೆಮಾಕ್ರಸಿಯಿಂದ ಕಲಾ ಮೌಲ್ಯಗಳ ನಿರ್ಧಾರ ಸಾಧ್ಯವೆ?
2 ಕೇವಲ ಮನೋರಂಜನಾ ದೃಷ್ಟಿ ಇರುವ, ಯಕ್ಷಗಾನದ ಚೌಕಟ್ಟಿನ ಉಲ್ಲಂಘನೆ ಮಾಡುವ ಪ್ರದರ್ಶನಗಳನ್ನು ಜನರು ತಾವಾಗಿ ಕೇಳಿದರೆ? ಅಲ್ಲ ವ್ಯವಸಾಯಿಗಳು ಈ ಕಲಬೆರಕೆ ಪಾಕದ ರುಚಿಯನ್ನು ಜನರಿಗೆ ಉಣಿಸಿ ಅದರ ರುಚಿ ಕೆಡಿಸಿದರೆ?
3 ಸಾ೦ಪ್ರದಾಯಿಕ ಪದ್ಧತಿಯ ಕ್ರಮದಲ್ಲೇ ಬೇಕಾದ ಸುಧಾರಣೆ ಮಾಡಿ ವ್ಯವಸ್ಥಿತವಾದ ಆಟಗಳನ್ನು ಜನರ ಮುಂದಿಡುವ ಯತ್ನಗಳನ್ನು ವ್ಯವಸಾಯ ಮಂಡಳಿಗಳು ಮಾಡಿವೆಯೆ?
4 ಸಾಂಪ್ರದಾಯಿಕ ರೀತಿಯ ಭಾಗವತಿಕೆ, ವೇಷಭೂಷಣ ತೊಟ್ಟು ಆಟ ಆಡಿದ ಮಾತ್ರಕ್ಕೆ ಆಟಕ್ಕೆ ಆರ್ಥಿಕ ಅಡಚಣೆ ಬರುತ್ತದೆಯೆ? ಅಂದರೆ, ಇವುಗಳಿಂದಲೇ ಕಲೆಕ್ಷನ್ ಕಡಿಮೆ ಆದೀತೆ? ಅರ್ಥಾತ್, ಸಾಂಪ್ರದಾಯಿಕ ರೀತಿ, ತಂತ್ರದಿಂದಲೇ ಹೊಸ ಕತೆಗಳನ್ನು ರಂಗಕ್ಕೆ ತರಲು ಸಾಧ್ಯವಿಲ್ಲವೆ?
5 ಪರಂಪರೆ ಮತ್ತು ಅದಕ್ಕೆ ವ್ಯತಿರಿಕ್ತ ಅನಿಸದ ಸುಧಾರಣೆಗಳಿಂದ ಆಟಗಳು ಆರ್ಥಿಕ ಯಶಸ್ಸು ಕಾಣಲು ಸಾಧ್ಯವಿದೆ ಎಂಬ ಸತ್ಯ ಕೆಲವು ಮ೦ಡಳಿಗಳ ಪ್ರದರ್ಶನಗಳಿಂದ ಅನುಭವಕ್ಕೆ ಬಂದಿವೆಯಲ್ಲವೆ? (ಉದಾ : ಇಡಗು೦ಜಿ, ಸಾಲಿಗ್ರಾಮ, ಅಮೃತೇಶ್ವರಿ ಮೇಳಗಳು)
ಇನ್ನೊಂದು ಕಾರಣ: ಹಿಮ್ಮೇಳದಲ್ಲಿ ನಮ್ಮ ಶೈಲಿಯನ್ನು ನಾವು ಕಡೆಗಣಿಸಲು ಕಾರಣ ಅಂದರೆ, ಇತ್ತ ದಕ್ಷಿಣಾದಿ ಅತ್ತ ಹಿಂದುಸ್ಥಾನಿ ಎಂಬೆರಡು ಗಾನಶೈಲಿಗಳು ವ್ಯವಸ್ಥಿತವಾಗಿ ಬೆಳೆದು ನಿಂತಿದ್ದು, “ಅವು ಮಾತ್ರ ಶೈಲಿಗಳು; ಸಂಗೀತವೆಂದರೆ ದಕ್ಷಿಣಾದಿ ಯಾ ಹಿಂದುಸ್ಥಾನಿ - ಉಳಿದದ್ದೆಲ್ಲಾ ವಿಕೃತ ರೂಪ, ಅದು ಕಸ" ಎಂಬ ಭ್ರಮೆ.