ವಿಷಯಕ್ಕೆ ಹೋಗು

ಪುಟ:ಜಾಗರ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೦ | ಜಾಗರ
ವಾದರೆ ಯಕ್ಷಗಾನವೆಂಬ ಗಾನಶೈಲಿ ಆಗಲೇ ಪ್ರಚಾರದಲ್ಲಿ ಇತ್ತೆನ್ನಬಹುದು. ಯಕ್ಷಗಾನವೆಂಬ ಗಾನಶೈಲಿಯೊಂದು ದಕ್ಷಿಣ ಭಾರತದ ಹಲವೆಡೆ, ಶತಮಾನಗಳ ಕಾಲ ರೂಢಿಯಲ್ಲಿ ಇತ್ತು ಎನ್ನಲಾಗಿದೆ. ಶಾರ್ಙ್ಗದೇವನ 'ಸಂಗೀತ ರತ್ನಾಕರ ಗ್ರಂಥ ಯಕ್ಷಗಾನ ವನ್ನು “ಸಂಗೀತ ಪದ್ಧತಿ” ಯೆಂದು ಹೇಳುತ್ತದೆ, ಎಂದು ಡಾ ಕಾರಂತರು ಸೂಚಿಸಿದ್ದಾರೆ. ಆಂಧ್ರದ ಕೂಚಿಪುಡಿ, ಮೇಲಟ್ಟೂರಿನ ಭಾಗವತ ಮೇಳಗಳಿಗೂ ಯಕ್ಷಗಾನವೆಂಬ ಹೆಸರಿದೆ. ಕರ್ನಾಟಕದಲ್ಲಿ ಯಕ್ಷಗಾನ ಹಲವು ರೂಪಗಳಲ್ಲಿ ಬಳಕೆಯಲ್ಲಿದೆ.
ನಮ್ಮಲ್ಲಿ ಯಕ್ಷಗಾನದ ಬಗ್ಗೆ ಕಾಲನಿರ್ಣಯದಲ್ಲಿ ನಮಗೆ ಖಚಿತ ನಿರ್ಧಾರಕ್ಕೆ ಒದಗುವ ಪುರಾವೆಗಳು ಇವು:
1. ಕುಮಾರ ವ್ಯಾಸ (ಸುಮಾರು ಕ್ರಿ ಶ.1450)ನ ಭಾರತ, ಕುಮಾರ ವಾಲ್ಮೀಕಿಯ (ಸುಮಾರು 1500) ರಾಮಾಯಣ, ಲಕ್ಷ್ಮೀಶನ ಜೈಮಿನಿ ಭಾರತ-ಗಳು ಯಕ್ಷಗಾನದ ಅನೇಕ ಹಳೆಯ ಪ್ರಸಂಗಗಳಿಗೆ ಆಕರಗಳಾಗಿರುವುದು ಸ್ಪಷ್ಟ. ' (ಕುಮಾರ ವ್ಯಾಸ, ತೊರವೆ ನರಹರಿಗಳ ಕಾಲವನ್ನು ಡಾ| ಎಚ್ ಸೀತಾರಾಮಾಚಾರ್ಯರು ತುಸು ಹಿಂದೆ ಒಯ್ದಿರುವುದು ಯಕ್ಷಗಾನದ ಪ್ರಸಂಗಗಳ ಕಾಲನಿರ್ಣಯದಲ್ಲಿ ಹೊಸತೊಂದು ಮುಖ ನೀಡಿದೆ.)
2. ಕ್ರಿ.ಶ. 1550ರ ಸುಮಾರಿನ ರತ್ನಾಕರ ವರ್ಣಿಯ ಭರತೇಶ ವೈಭವದಲ್ಲಿ ಬರುವ “ತಾಳ” “ಮದ್ದಲೆ ತೆರೆ ಇಳಿಸಿದ ಎತ್ತಿದ ವರ್ಣನೆಗಳು.
3. ಬಳ್ಳಾರಿ ಜಿಲ್ಲೆಯ ಕುರುಗೋಡಿನ ಶಾಸನವೊಂದರಲ್ಲಿ ಬರುವ ತಾಳ ಮದ್ದಳೆ ಸೇವೆ” ಯ ಉಕ್ತಿ. ತಾಳ ಮದ್ದಲೆ ಸೇವೆ ಮೇಳದ ಆಟದ ದಿನ ನಡೆಯುತ್ತಿದ್ದ ಸಾಂಪ್ರ ದಾಯಿಕ ಕ್ರಮವೂ ಹೌದಾದುದರಿಂದ ಇಲ್ಲಿ ಮೇಳದ ಅಸ್ತಿತ್ವದ ಊಹನೆಗೆ ಎಡೆ ಇದೆ. ಕುರುಗೋಡು ಶಾಸನದ ಕಾಲ ಕ್ರಿ.ಶ. 1566.
4. ಕೂಚಿಪುಡಿಯಲ್ಲಿ ಬಳಕೆಯಲ್ಲಿರುವ “ಭಾಮಾ ಕಲಾಪಂ' ಎಂಬ ಯಕ್ಷಗಾನ ಕೃತಿ. ಇದರ ಕಾಲ ಸುಮಾರು 1620.
5. ಸಿದ್ಧಂದ್ರಯತಿ ಎಂಬವನು ಉಡುಪಿಯಲ್ಲಿ ಶಿಕ್ಷಣ ಪಡೆದನೆಂದೂ, ಅವನು ಉಡುಪಿಯಿಂದ ಯಕ್ಷಗಾನವನ್ನು ಆಂಧ್ರಕ್ಕೆ ಕೊಂಡುಹೋದನೆಂದೂ ಇರುವ ಪ್ರತೀತಿ.