ವಿಷಯಕ್ಕೆ ಹೋಗು

ಪುಟ:ಜಾಗರ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೨ | ಜಾಗರ
'ದೊಡ್ಡ' 'ಸೈಜಿನವೊ ಹಾಗೇ ಅದರ ಅಭಿನಯವೂ, ಲಘುವಾದ ಕೈ, ಮೈಚಲನೆ ಗಳು, ಅದರ ವೇಷಗಳಿಗೆ ಹೊಂದುವುದಿಲ್ಲ. ಅಂದರೆ ಯಕ್ಷಗಾನದ ಅಭಿನಯವನ್ನು ಅದರ ವೇಷ, ಮಾತು, ಹಿಮ್ಮೇಳಗಳು ನಿಯಂತ್ರಿಸುತ್ತವೆ. ಹಾಸ್ಯಗಾರನ ಪಾತ್ರಕ್ಕೆ ಅಭಿನಯದಲ್ಲಿ ಹೆಚ್ಚು ಮುಕ್ತತೆ ಇರಲು ಕಾರಣ, ಅದು ಹಾಸ್ಯ ಪಾತ್ರ ಎಂಬುದು ಮಾತ್ರವಲ್ಲ, ಅವನ ವೇಷವೂ ಬಹಳ ಸರಳ, ಮಿತವಾದದ್ದು ಎಂಬುದೂ ಹೌದು- ಎಂಬುದನ್ನು ಇಲ್ಲಿ ಗಮನಿಸಬೇಕು. ನಾಟಕದ ರೀತಿಯ ಅಭಿನಯ, ಮಾತಿನ ರೀತಿ ಯಕ್ಷಗಾನದಲ್ಲಿ ತಟ್ಟನೆ ಬೇರೆಯಾಗಿ, ಕೃತಕವಾಗಿ ಕಾಣುತ್ತದೆ. ಏಕೆಂದರೆ ಯಕ್ಷ ಗಾನವೆಂಬುದು ಒಂದು ಸಮಗ್ರ ರಂಗಭೂಮಿ (Total Theatre). ಅದರ ನಾಲ್ಕು ಅಂಗಗಳು ಸ್ವರೂಪ ಸ್ವಭಾವಗಳಿಗೆ ಪರಸ್ಪರ ಸಂಬಂಧವಿದೆ. ಒಂದು ದೃಷ್ಟಾಂತ ದಿಂದ ಈ ಮಾತು ಸ್ಪಷ್ಟವಾಗಬಹುದು. ತೆಂಕುತಿಟ್ಟಿನ ನೃತ್ಯಕ್ಕೂ ಬಡಗುತಿಟ್ಟಿನ ನೃತ್ಯಕ್ಕೂ ಇರುವ ವ್ಯತ್ಯಾಸದ ಮೂಲ - ವೇಷಭೂಷಣಗಳ ಅಂತರದಲ್ಲಿದೆ. ತೆಂಕಣ ವೇಷಗಳು ಹೆಚ್ಚು ಭರ್ಜರಿ, ಆದುದರಿಂದ ಇಲ್ಲಿನ ನೃತ್ಯದ ಚಲನೆಗಳ ಬೀಸು, ಆಯ, ದೊಡ್ಡದು, ಹಾಗೇ ಇಲ್ಲಿನ ಗಿರ್ಕಿ - (-ಧೀಂಗಿಣ-) ಅಥವಾ ಗುತ್ತು ಶೋಭಿಸುವುದು. ಸೊಂಟದ ಸುತ್ತ ಕಟ್ಟುವ ಬಾಲಮುಂಡು' ಇರುವುದರಿಂದ ಇಲ್ಲಿನ ವೇಷಭೂಷಣಗಳು, ಬಡಗಿನ ಪದ್ಧತಿಯಷ್ಟು ಬಾಗು, ಬಳುಕುಗಳಿಗೆ ಅವಕಾಶ ನೀಡುವುದಿಲ್ಲ.
ಯಕ್ಷಗಾನದ ಮಾತಿನ ಜತೆ ಬರುವ ಹಾವ ಭಾವಗಳು, ನೋಟ ನಿಲುವು ಗಳು, ವಿಶಿಷ್ಟವಾದುವು. ಅವುಗಳ ವಿಶಿಷ್ಟ ಸ್ವರೂಪ ಮತ್ತು ಸ್ವಂತಿಕೆ- ಆಟವನ್ನು ನೋಡಿದಾಗಲೇ ಸ್ಪಷ್ಟವಾಗುವಂತಹದ್ದು - ಇಲ್ಲಿ ಮಾತಿನ ಜತೆ ಬರುವ ಸ್ವರದ ಏರಿಳಿತ, ವಿವಿಧ ಭಾವಗಳ ಪ್ರಕಟನೆಯ ರೀತಿ - ಇವುಗಳಲ್ಲಿ, ಹಲವು ಕಲಾವಿದರು, ಚೆನ್ನಾಗಿ ಕೃಷಿ ಮಾಡಿರುವರಾದರೂ - ನಾಟಕ ರಂಗದಲ್ಲಿ ಕಂಡು ಬರುವ ಸೂಕ್ಷ್ಮ ವೈವಿಧ್ಯಗಳು ಕಾಣಿಸುವುದಿಲ್ಲ. ಇದಕ್ಕೆ ಕಾರಣ - ಒಟ್ಟು ಯಕ್ಷಗಾನ ಪ್ರದರ್ಶನದ ಅವಧಿ ದೀರ್ಘವಾದುದು, ಅಷ್ಟು ದೀರ್ಘವಾದ ಒಂದು ಪ್ರದರ್ಶನದಲ್ಲಿ ಅದು ಸಾಧ್ಯವಲ್ಲ. ಎರಡನೆಯದಾಗಿ, ಯಕ್ಷಗಾನದ ಮಾತು ಆಶುಭಾಷಣ, - ಅಲ್ಲಲ್ಲಿ ತಯಾರಾಗಿ ಬೆಳೆಯುವಂತಹದ್ದು ಹಾಗಾಗಿ ಅದು ನಾಟಕೀಯವಾದ ಸಂಭಾಷಣೆ ಗಿಂತ ಹೆಚ್ಚಾಗಿ ಸಹಜವಾದ ಮಾತಿನಂತೆ ಬರುವುದು ಸ್ವಾಭಾವಿಕ. ಅಲ್ಲೂ ಹಾಗೇ ಮಾತು ಸಾಕಷ್ಟು ದೀರ್ಘವಾದದ್ದು. ಮೇಲಾಗಿ, ಯಕ್ಷಗಾನಕ್ಕೆ ದಿಗ್ದರ್ಶನ ವ್ಯವಸ್ಥೆ ಇಲ್ಲದಿರುವುದರಿಂದ, ಕಲಾವಿದನ ವೈಯಕ್ತಿಕ ಮಿತಿಯಾಚೆ, ಅದು ಮುಂದರಿಯ ಲಾರದು. ಹಾಗಾಗಿ ಮಾತನ್ನು ಹೇಗೆ ಆಡಬೇಕೆಂಬ ಬಗ್ಗೆ, ಯಕ್ಷಗಾನ ಕಲಾವಿದನಿಗೆ ತಜ್ಞ ಮಾರ್ಗದರ್ಶನವಿಲ್ಲ. ಇದರ ಜತೆ ಯಕ್ಷಗಾನದ ಮಾತು, ಗಟ್ಟಿಯಾಗಿ ಶ್ರುತಿಬದ್ಧವಾಗಿ ಇರಬೇಕಾದದ್ದು. ಅಲ್ಲದೆ, ನಾನು ಆಗಲೇ ಹೇಳಿದಂತೆ ಹಿಮ್ಮೇಳ ಮತ್ತು ವೇಷಗಳು ಹೊರಿಸುವ ಮಿತಿ ಇಷ್ಟೆಲ್ಲ ಇದ್ದರೂ, ಯಕ್ಷಗಾನದ ಮಾತಿನ
-