ವಿಷಯಕ್ಕೆ ಹೋಗು

ಪುಟ:ಜಾಗರ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೦ / ಜಾಗರ

ಅಭಿನಯಿಸಿದ ಅನುಭವ ನನ್ನದು. ಅಲ್ಲಿ ಅದೊಂದು ಸಂಪ್ರದಾಯ. ಜನ ಅದನ್ನು ಒಪ್ಪಿ ಮೆಚ್ಚಿಕೊಂಡು ಬಂದಿದ್ದಾರೆ. ಆದರೆ ಈ ಪದ್ಧತಿ ಈಗ ಮರೆಯಾಗುತ್ತಿದೆ. ಅಭಿರುಚಿ ಬದಲಾಗಿದೆ. ಉತ್ತರ ಕನ್ನಡದಲ್ಲಿ ಪಾತ್ರಧಾರಿಗಳು ವೇದಿಕೆಯ ಮೇಲೆ ಕುರ್ಚಿಗಳಲ್ಲಿ ಕುಳ್ಳಿರುವ ಕ್ರಮವೂ ಇದೆ. ವೇದಿಕೆಯಲ್ಲಿ ಕಲಾವಿದರು ಸಭೆಗಿಂತ ಪ್ರತ್ಯೇಕವಾಗಿ ಕುಳಿತಿರುವ ಕ್ರಮವೇ ಈಚೆಗಿನದಿರಬೇಕು. ಹಳ್ಳಿಗಳಲ್ಲಿ, ಮನೆಗಳಲ್ಲಿ ನಡೆಯುವ ಕೂಟಗಳಲ್ಲಿ ಇಂದಿಗೂ ಪ್ರತ್ಯೇಕ ವೇದಿಕೆ ಇಲ್ಲ. ಸಭೆಯಲ್ಲೇ ಒಂದು ಕಡೆ ಭಾಗವತರು, ಹಿಮ್ಮೇಳ ಸುತ್ತ ಅರ್ಥಗಾರರು ಕುಳ್ಳಿರುತ್ತಾರೆ.

ತಾಳಮದ್ದಳೆ ಪ್ರದರ್ಶನದಲ್ಲಿ ಪ್ರಾದೇಶಿಕ ಬಯಲಾಟದ ಪದ್ದತಿಗಳ ಪ್ರಭಾವ ಕಾಣುತ್ತದೆ. “ಭಲರೇ ಪರಾಕ್ರಮ ಕಂಠೀರವ ಇರುವಂತಹ ಸ್ಥಳ ಮುಂತಾಗಿ ಆಟದಂತೆ ಪಾತ್ರಗಳನ್ನು ಭಾಗವತರು ಮಾತಾಡಿಸುವ ಕ್ರಮ ಕೆಲವೆಡೆ ರೂಢಿಯಲ್ಲಿದೆ. ಪಾತ್ರಗಳ ಪ್ರವೇಶಕ್ಕೆ ಆಟದಂತಹ ಚೆಂಡೆಯ 'ಧೀಂಗಣ' ಬಾರಿಸುವಿಕೆಯೂ ಇದೆ.

ಹಿಂದೆ ತಾಳಮದ್ದಳೆಯನ್ನು ಬಯಲಾಟದ ನಿಕಟ ಅನುಕರಣೆಯ ರೂಪದಲ್ಲಿ ನಡೆಸುವ ಕ್ರಮವೂ ಇತ್ತು. ರಾಕ್ಷಸನ ಪ್ರವೇಶದ ಆರ್ಭಟ, ಅಟ್ಟಹಾಸ, ಕುಂಭಕರ್ಣ, ವೀರಭದ್ರ, ಇತ್ಯಾದಿ ಪಾತ್ರಗಳಿಗೆ ಅರಳು, ಹಣ್ಣು, ಎಳೆನೀರುಗಳ ಪಾರಣೆ, ವಾಲಿ-ಸುಗ್ರೀವರ ಮಾವಿನ ಸೊಪ್ಪಿನ ಯುದ್ಧ, ವೀರಮಣಿ ಕಾಳಗದಲ್ಲಿ ಹನುಮಂತ ಕೋಟೆ ಹುಡಿ ಮಾಡುವುದು, ಕು೦ಭಕರ್ಣನ ಗೊರಕೆ ಇವೆಲ್ಲ ತಾಳಮದ್ದಳೆಯಲ್ಲೂ ಇದ್ದವು ಅಂದರೆ ಬೆರಗಾಗಬೇಕಾಗಿಲ್ಲ. ಇಂತಹ 'ಹಳೇ ಕ್ರಮದ ತಾಳಮದ್ದಳೆಗಳು ಈಗಲೂ ಕುಂಬಳೆ ಸೀಮೆಯಲ್ಲಿ ಅಪರೂಪಕ್ಕೆ ಜರಗುತ್ತವೆ. ರಣವೀಳ್ಯಕ್ಕೆ ತಟ್ಟೆ, ಕೃಷ್ಣನಿಗೆ ವಿದುರನ ಆತಿಥ್ಯದಲ್ಲಿ ಹಾಲು ತುಂಬಿದ ಪಾತ್ರೆ ನಿಜವಾಗಿಯೂ ಕೊಡುವವರುಂಟು. ಈಗ ಇದೆಲ್ಲ ಅಪರೂಪ.

ಪ್ರತಿದಿನವೂ ಆಗ ವರ್ಷದ ಉದ್ದಕ್ಕೂ ತಾಳಮದ್ದಳೆಗಳು ಜರಗುತ್ತವೆ. ಕನ್ನಡ ಜಿಲ್ಲೆಗಳೆರಡರ ಪೈಕಿ ಒಂದು ಕಡೆಯಾದರೂ ತಾಳಮದ್ದಳೆ ನಡೆಯುತ್ತದೆ. ಆದರೆ ಮಳೆಗಾಲದ ಉತ್ತರಾರ್ಧದಲ್ಲಿ ತಾಳಮದ್ದಳೆಗಳ ಭರತ ಕಾಲ. ಮಳೆ ಇಳಿಮುಖವಾಗಿದ್ದು, ಕೃಷಿಕರ ಕೆಲಸಗಳಿಗೂ ಬಿಡುವಿರುತ್ತದೆ. ಆಟಗಳ ಮೇಳಗಳೂ ಇರುವುದಿಲ್ಲ. ದೇವಾಲಯ, ಪಾಳು ಕಟ್ಟಡ, ಶಾಲೆ, ವ್ಯವಸ್ಥಾಪಕನ ಮನೆ, ಭಜನಾಮಂದಿರ, ಊರ ಬಯಲು, ಈಗ ಸಭಾಭವನ, ಕಾಲೇಜು ಕಲ್ಯಾಣ