ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆ

ಅರ್ಥಧಾರಿಯ ವಿದ್ವತ್ತು, ಪ್ರಸಂಗದ ಸೀಮೆಯಲ್ಲಿ, ಔಚಿತ್ಯ ಮತ್ತು ಕಲಾಧರ್ಮದ, ಆವರಣದಲ್ಲಿ, ಇತರ ಅರ್ಥಧಾರಿಗಳೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕಾ ಗುತ್ತದೆ.
ಅರ್ಥಗಾರಿಕೆ ಯೊ೦ದಿಗೆ ಹಿತಮಿತವಾದ ಹಸ್ತಭಾವ ದೇಹ ಚಲನವೂ ಅಗತ್ಯ. ಅದು ಅರ್ಥಕ್ಕೆ ಜೀವ ತುಂಬುತ್ತದೆ. ಕಥಾ ಸಂದರ್ಭದಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡು ತೊಡಗಿಸಬಲ್ಲ ಮಾತುಗಾರಿಕೆಯ ಸಿದ್ದಿ, ಚಿಂತನೆಯಿಂದ ದೊರಕುವ ತಪಸ್ಸಿದ್ಧಿ, ಸನ್ನಿವೇಶ ಚಿತ್ರಣದಲ್ಲಿ ಕಾವ್ಯದ ತಿರುಳನ್ನು ಅರಿತು ಹೊರಗೆಡಹಬೇಕು, ಇತರರ ದೃಷ್ಟಿಯನ್ನು ಅರಿತು ಅವರಿಗೆ ಅನುಕೂಲಿಸಿ ಮಾತಾಡುವ ಲಿಬರಲ್ ದೃಷ್ಟಿ ಕೋನ (ಉದಾರಭಾವ), ವಿಷಯಗಳ ಮಂಡನೆಯ ವ್ಯವಸ್ಥೆಯ ತಂತ್ರ( Strategy ) ಹೊಂದಿಕೊಂಡು ಹೋಗುವ ಸೌಜನ್ಯ - ಇವು ಇಲ್ಲದ ಅರ್ಥಗಾರಿಕೆ ವ್ಯರ್ಥ.
ಮಾತಿನ ಶಕ್ತಿ, ಮಿತಿ - ಎರಡರ ಅರಿವೂ ಅರ್ಥಧಾರಿಗಿರಬೇಕು. ಹಲವು ಸಲ ಒಂದು ಹುಂಕಾರ, ಒಂದು ತಿರಸ್ಕಾರ, ಸ್ವರಭೇದ, ಛೇ! ಅರೆರೆ, ಆಹಾ! ಒಹೋ - ಇವು ನೂರು ಮಾತು ಹೇಳಲಾರದ್ದನ್ನು ಹೇಳಬಲ್ಲವು. 'ಮಾತು ಬೆಳ್ಳಿ, ಮೌನ ಬಂಗಾರ' ಎಂಬುದು ಮಾತಿನ ಈ ರಂಗದಲ್ಲಿ ಜೀವಂತ ಸತ್ಯ ಕೆಲವೊಮ್ಮೆ,
ಮಾತಿನ ರೀತಿ, ಭಾಷೆ, ವಿಷಯಗಳಲ್ಲಿ ನಾವೀನ್ಯದ ಅವಶ್ಯಕತೆ ಖಂಡಿತ ಇದೆ, ಅವಕಾಶವೂ ಇದೆ. ಹೀಗೆ ಮಾಡುವಾಗ ಪುರಾಣದ ಆವರಣವೂ, ತಾಳ ಮದ್ದಳೆ ರಂಗಭೂಮಿಯ ಸ್ವರೂಪವೂ ಕೆಡದಂತೆ ಎಚ್ಚರಬೇಕು. ಹೇಳಿದ ಮಾತು ಆ ಪಾತ್ರದ ಮಾತಾಗಿ ಕಾಣಬೇಕು. ಎಲ್ಲಿಂದಲೋ ಎಳೆದು ತಂದು ಜೋಡಿಸಿದಂತಿ ರಬಾರದು. ಅತ್ಯಾಧುನಿಕ ವಿಚಾರಗಳು, ಸಾಹಿತ್ಯದ ನವೀನ ಚಿಂತನೆಗಳನ್ನು ಕಲಾ ಶಿಲ್ಪ ಕೆಡದಂತೆ ಎರಕಗೊಳಿಸಬೇಕಾದರೆ, ಅಸಾಮಾನ್ಯ ಅಂತರ್ದೃಷ್ಟಿ, ಸಂಯಮ ಮತ್ತು ಕೌಶಲ ಅವಶ್ಯ.
ಸಾರ್ವಕಾಲಿಕವಾದ ವಿಚಾರಕ್ಕೆ ಸಮಕಾಲೀನ ಅನುಭವವನ್ನು ಹೊಂದಿಸಿ ಅಥವಾ ಹೊಸ ಬಗೆಯ ಪ್ರತಿಮೆಗಳನ್ನೊ, ವಿವೇಚನೆಗಳನ್ನೊ ತರುವಾಗ ಅದನ್ನು ಆಧುನಿಕ' ಶಬ್ದಾವಳಿಯಿಂದಲೋ, ಪೇಪರಿನ ರೀತಿಯ ಭಾಷೆಯಿ೦ದಲೋ ಮಾಡಿದರೆ ತಾಳಮದ್ದಳೆ ಕೆಡುತ್ತದೆ. ನಾವೀನ್ಯವನ್ನು ತರಬಲ್ಲವನಿಗೆ ಪುರಾಣದಲ್ಲಿ ವಿಪುಲ ಅವಕಾಶವಿದೆ, ಹೊಸ ಯೋಜನೆಗಳಿಗೆ ಅವಕಾಶವಿದೆ.ಭೀಷ್ಮ, ಅಹಲ್ಯೆ ಕೌರವ, ಬಲರಾಮ, ಕೃಷ್ಣ, ಭೀಮ, ಲಕ್ಷ್ಮಣ, ಸುಗ್ರೀವ ಇವು (ಇವೇ ಎಂದಲ್ಲ, ಎಲ್ಲ ಪಾತ್ರಗಳೂ ಹೌದು) ಒಂದಲ್ಲ ಒಂದು ರೀತಿಯಿಂದ ಆಧುನಿಕ ಮಾನವನಿಗೆ ಹತ್ತಿರವಾಗಿವೆ. ಒಂದು ಪಾತಳಿಯಲ್ಲಿ, ಆ ಪಾತಳಿಯ ಮಿಡಿತವನ್ನು ಹಿಡಿಯುವ ಶಕ್ತಿ ಅರ್ಥಧಾರಿಗಿರಬೇಕು, ಕೇವಲ ಹಳೇ ಕ್ರಮದಲ್ಲಿ ಯೋಚಿಸುವುದನ್ನು ಬಿಟ್ಟು ಪಾತ್ರದ ಅಂತರ್ದೃಷ್ಟಿಯನ್ನೂ, ವಾಸ್ತವ ಮನೋಸ್ಥಿತಿಯನ್ನೂ ಚಿತ್ರಿಸಬಹುದು.