ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ / ೧೨೧

ಶ್ರೀಯುತರು ತಮ್ಮ ಅರ್ಥಗಾರಿಕೆಯಲ್ಲಿ ಪಾತ್ರದ ಮನಸ್ಸಿನ ಜೀವನಾದರ್ಶ ವೈವಿಧ್ಯದ ಚಿತ್ರಣದ ಪ್ರಯೋಗ ಮಾಡಿದ್ದಾರೆ. ಅವರ ಪ್ರತಿಕ್ರಿಯೆ ಬಹು ಅಂಶ ನನಗೆ ಒಪ್ಪಿಗೆಯಾಗಿದೆ.

ಮಾತಿನ ವಿಶಿಷ್ಟತೆಯ ಬಗೆಗೆ ತೋಳ್ಳಾಡಿಯವರು ಹೇಳಿರುವಂತಹದು ಸಹ, ಮಾತು ಮಾಧ್ಯಮವಾಗಿರುವ ಈ ರಂಗದಲ್ಲಿ, ಅರ್ಥಗಾರಿಕೆಯ ವಿವೇಚನೆಗೆ ಒ೦ದು ಕೊಡುಗೆ: ಮಾತು, ಮನಃ ಶಾಸ್ತ್ರೀಯವಾಗಿ, ಭಾಷಾಶಾಸ್ತ್ರೀಯವಾಗಿ ಹೊಂದಿರುವ ಇತಿಹಾಸ, ಹಿನ್ನೆಲೆ, ಅರ್ಥವ್ಯಾಪ್ತಿಗಳು ಮಾತಿನ ಅರ್ಥವ್ಯಂಜ ಕತೆಯನ್ನು ನಿರ್ಧರಿಸಿ, ನಿಯಂತ್ರಿಸುತ್ತದೆ. ಪದ್ಯದ ಅರ್ಥ ಹೇಳುವಾಗ, ಪ್ರಸಂಗದಲ್ಲಿ ಇಲ್ಲದ ಸ್ವಾತಂತ್ರ್ಯವನ್ನು ಕಲಾವಿದ ಪಡೆದುಕೊಳ್ಳುವ ವಿಚಾರ - ಅನುಭವಸಿದ್ದ. (ಈ ವಾದವನ್ನು ಔಚಿತ್ಯ ಭಂಗಕ್ಕೆ ಸಮರ್ಥನೆಯಾಗಿ ಬಳಸಕೂಡದು) ಅಂತಹ ಒಂದು ಸ್ವಾತಂತ್ರ್ಯದ ಉದಾಹರಣೆ: 'ಕರ್ಣಪರ್ವ'ದ ಕರ್ಣನ ಪಾತ್ರದ್ದು, ನಾವು ಮಾತಿನಲ್ಲಿ ಚಿತ್ರಿಸುವ ಕರ್ಣನ ದ್ವಂದ್ವ ದುರಂತ ಪ್ರಜ್ಞೆ, ಸ್ವಾಮಿಭಕ್ತಿ, ಜಾತಿಯ ಬಗೆಗಿನ ಕೀಳನದ ತುಮುಲ, ಯಾವುದೂ ಕರ್ಣಪರ್ವದಲ್ಲಿ ಇಲ್ಲ. (ಕೊನೆಯ ಶಿವ ಶಿವ ಸಮರದೊಳು ಪದ್ಯಗಳ ಹೊರತು) ಕರ್ಣಪರ್ವದ ಕರ್ಣ ಒಬ್ಬ ಧೀರ, ಉದ್ಧತ, ಸರಳ ಪಾತ್ರ-ಖಳನಾಯಕ, (ಬೇಕಾದರೆ ಆ ಪ್ರಸಂಗದ ನಾಯಕನನ್ನಿ) ಅದರಾಚೆ ನಾವು ಮಾಡುವ ಸೃಷ್ಟಿ 'ರಹಸ್ಯಂಚ' ಅದು ನಾವು ಪಡೆಯುವ ಸ್ವಾತಂತ್ರ್ಯದಿಂದ ಮೂಡುವಂತಹದು ಮತ್ತು ಉಚಿತವಾದದ್ದೆ.

ಬಯಲಾಟದ ವೇಷಗಳು ಮತ್ತು ರಂಗವು ನಿರ್ಮಿಸುವ ಸರಳ, ಮುಗ್ಧ ಲೋಕದಲ್ಲಿ ಪಾತ್ರಗಳ ಒಳತೋಟಿ, ವೈಚಾರಿಕ ಅಂಶ ಅನಾವಶ್ಯಕ, ಅಸಾಧ್ಯ - ಎಂಬ ವಾದ, ಪ್ರಶ್ನಾರ್ಹ ಮತ್ತು ನಮ್ಮ ಅನುಭವಕ್ಕೆ ವಿರುದ್ಧವಾದುದು. ಒಂದು ದೃಷ್ಟಿಯಿಂದ ಸಂಕೀರ್ಣವಾದ ಭಾವಗಳ ಚಿತ್ರಣಕ್ಕೆ ಅಲ್ಲಿ (ಅಭಿನಯವೂ ಸೇರಿದಂತೆ) ಹೆಚ್ಚಿನ ಸೌಲಭ್ಯ ಇದೆ. ಆಟದಲ್ಲಿ ಪ್ರಸಂಗದ ಹೆಚ್ಚಿನ ಎಲ್ಲ ಚಿಕ್ಕ ದೊಡ್ಡ ಪಾತ್ರಗಳು ಬರುತ್ತವೆ. ಮುಕ್ತವಾಗಿ ಮಾತಾಡಲು ಹೆಚ್ಚಿನ ಸ್ವಾತಂತ್ರ್ಯ ಇರುವ ಹಾಸ್ಯಗಾರನಿದ್ದಾನೆ. ಸನ್ನಿವೇಶಗಳ ರೂಪ ಹೆಚ್ಚು ದಟ್ಟವಾಗಿ, ಜೀವಂತವಾಗಿ ಬರುತ್ತವೆ. ಕತೆ, ಪಾತ್ರದ ಸ್ಥಿತಿ, ಅವಸ್ಥಾಂತರಗಳೆಲ್ಲ ಸ್ಪುಟವಾಗಿ ಬರುತ್ತವೆ.

ಮನುಷ್ಯ ಸ್ವಭಾವದ ಸಂಕೀರ್ಣತೆಯನ್ನು ಯಕ್ಷಗಾನ ರಂಗದ ರೂಪಕ್ಕೆ ಬಾಧಕವಾಗದಂತೆ ತೋರಿಸಿ, ಆಧುನಿಕ ಚಿಂತನಾಂಶಗಳನ್ನು ಆ ಪಾತ್ರಗಳ ಪ್ರಪಂಚಕ್ಕೆ ಹೇಗೆ ಹೊಂದಿಸಲು ಸಾಧ್ಯ ಎಂಬುದನ್ನು ಹಲವು ಸಮರ್ಥ ಕಲಾವಿದರು ಆಟದಲ್ಲಿ ತೋರಿಸಿದ್ದಾರೆ. ತನ್ನ ಬಹಳಷ್ಟು ಪಾತ್ರಗಳಲ್ಲಿ ಶೇಣಿಯವರು ಈ ಕೆಲಸದಲ್ಲಿ ಆಶ್ಚರ್ಯಕರ ಯಶಸ್ಸು ಪಡೆದಿದ್ದಾರೆ. ಶ್ರೀ ಸಾಮಗರು (ದಶರಥ, ಕೌರವ)