ವಿಷಯಕ್ಕೆ ಹೋಗು

ಪುಟ:ಜಾಗರ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೪ / ಜಾಗರ

ನಿರೀಕ್ಷಿಸುವುದುಂಟು, ಹಾಗೆಯೇ ಕಲಾವಿದ (ಪಾತ್ರಧಾರಿ)ರೂ ವಾದಕ್ಕೆ ತೊಡಗುವುದುಂಟು.

ಯಕ್ಷಗಾನದ ಅರ್ಥಗಾರಿಕೆಯ ನಾಟಕ ಹತ್ತಾರು ಜನ ಸೇರಿ ನಿರ್ಮಿಸುವ ಸಾಹಿತ್ಯ, ಒಬ್ಬೊಬ್ಬನ ದೃಷ್ಟಿ ಒಂದೊಂದು. ಪಾಂಡಿತ್ಯ ಹಾಗೂ ಬುದ್ಧಿವಂತಿಕೆಯ ಮಟ್ಟವೂ ಎಲ್ಲರಲ್ಲಿಯೂ ಒಂದೇ ರೀತಿ ಇಲ್ಲ. ಇರುವುದು ಸಾಧ್ಯವೂ ಇಲ್ಲ. ಹೀಗಿರುವಾಗ “ಪ್ರಸಂಗದ ಪದ್ಯಗಳು ಹಾಗೂ ಧೋರಣೆ ಎಲ್ಲರನ್ನೂ ಏಕಸೂತ್ರದಲ್ಲಿ ಹಿಡಿದಿಡುವ ಕೇಂದ್ರವಾಗಿದೆ.

ಪ್ರಸಂಗ ಕೊಡುವ ಅವಕಾಶವನ್ನೂ ಔಚಿತ್ಯದ ಮಿತಿಯನ್ನೂ ಮೀರಿ ವಾದಿಸತೊಡಗಿದರೆ ಅರ್ಥಗಾರಿಕೆಯಲ್ಲಿ ವಾದಕ್ಕೆ, ಗೊಂದಲಕ್ಕೆ ಅಂತ್ಯವಿಲ್ಲದೆ ಹೋದೀತು. ಉದಾಹರಣೆಗೆ ಹೇಳುವುದಾದರೆ, ಮೂಲವ್ಯಾಸಭಾರತದ ಕಥೆಯ ದಾರಿ, ಕುಮಾರವ್ಯಾಸನಕಥೆ, ಪ್ರಸಂಗಗಳಲ್ಲಿರುವ ಮಹಾಭಾರತದ ಕಥೆ - ಇವು ಹಲವೆಡೆ ತೀರಭಿನ್ನವಾಗಿಯೂ, ಪರಸ್ಪರ ವಿರುದ್ಧವಾಗಿಯೂ ಇದೆ. ಒಬ್ಬೊಬ್ಬನು ಒಂದೊಂದು ವಾದವನ್ನು ಹಿಡಿದರೆ ವಾದಕ್ಕೆ ಕೊನೆಯಿಲ್ಲ - ಅವುಗಳಲ್ಲಿ ಸಂಯಮದಿಂದ ಸಮನ್ವಯ ಸಾಧಿಸುವುದೂ, ಇದಿರಾಳಿಯ ಧೋರಣೆಯನ್ನು ಅರ್ಥವಿಸಿಕೊಂಡು ಸಾಗುವುದೂ ಅರ್ಥಗಾರಿಕೆಯಲ್ಲಿ ಔಚಿತ್ಯಪ್ರಜ್ಞೆ ಇರುವವನ ಮಾರ್ಗವಾಗಬೇಕು.

ಒಂದೊಂದು ಪುರಾಣವೂ ಒಂದೊಂದು ರೀತಿಯ ಕಥೆ ಹೇಳುತ್ತದೆ. ಬೇರೆ ಬೇರೆ ಕೇಸುಗಳನ್ನೂ ದಸ್ತಾವೇಜುಗಳನ್ನೂ ಹಿಡಿದು ಹಿಂಜಿ ವಾದಿಸುವ ವಕೀಲನಂತೆ ಅರ್ಥಧಾರಿ ಮಾತಾಡಬಹುದು. ಆದರೆ ಹಾಗೆ ಮಾತಾಡುವುದು ಸರಿಯಲ್ಲ. ಪ್ರಸಂಗದ ಒಟ್ಟಂದವೂ, ಪ್ರಬಂಧಧ್ವನಿಯೂ ಸದಾ ಅರ್ಥಧಾರಿಯ ಪ್ರಜ್ಞೆಯಲ್ಲಿರಬೇಕು.

ತತ್ವಕ್ಕೆ ಹಾಗೂ ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ಬಿಡಿಸಲಿಕ್ಕಾಗದ ಹಲವಾರು ಸಮಸ್ಯೆಗಳಿವೆ, ದರ್ಶನಗಳಲ್ಲಿಯೂ ತೀವ್ರ ಭಿನ್ನಾಭಿಪ್ರಾಯವಿದೆ. ಆಚಾರ್ಯತ್ರಯರೂ, ತತ್ವವೇತ್ತರೂ ಹಲವು ಪ್ರಶ್ನೆಗಳಿಗೆ ಕೊನೆಯ ತೀರ್ಮಾನ ಹೇಳಲಿಲ್ಲ. ಅಂತಹ ಸಮಸ್ಯೆಗಳಿಗೆ ಯಕ್ಷಗಾನದ ಮಾತಿನಲ್ಲಿ ಉತ್ತರ ಕಂಡುಹಿಡಿಯಲು ಯತ್ನಿಸಬೇಕಾಗಿಲ್ಲ. ಇದು ಅರ್ಥಧಾರಿಯ ಕೆಲಸವಲ್ಲವೆಂಬುದು ನನ್ನ ಎಣಿಕೆ. ಪುರಾಣಗಳೂ ಅವನ್ನಾಧರಿಸಿರುವ ಯಕ್ಷಗಾನದ ಅರ್ಥ - ಸಂವಾದಗಳೂ ಕೆಲವೊಂದು ಸಾಂಪ್ರದಾಯಿಕ ಚೌಕಟ್ಟುಗಳನ್ನು ಹೊಂದಿವೆ. ಪುರಾಣಗಳಲ್ಲಿ ಎಂತಹ ಬುದ್ಧಿವಂತನಿಗೂ ಉತ್ತರಿಸಲಸಾಧ್ಯವೆನಿಸಬಹುದಾದ ಪ್ರಶ್ನೆಗಳೂ, ವಿರೋಧಾಭಾಸ