ವಿಷಯಕ್ಕೆ ಹೋಗು

ಪುಟ:ಮುಡಿ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
18
ಮುಡಿ

ಅವು ಆಯುಧಗಳ ಪ್ರತಿರೂಪಗಳಲ್ಲ, copyಗಳಲ್ಲ. ಸಾಂಕೇತಿಕ ಆಯುಧಗಳು.Symbolಗಳು. ಅವು ಹಾಗಿರುವುದೆ ಸರಿ. ನೃತ್ಯಕ್ಕೂ ಚಲನೆಗೂ ಅನುಕೂಲಕರ.

ಯಕ್ಷಗಾನದ ಹನುಮಂತನನ್ನು ಗಮನಿಸಿ ನೋಡಿ, ಮೈತುಂಬ ಬಟ್ಟೆ, ತಲೆಗೆ ಶಿಖರದ ಕಿರೀಟ (ಮುಡಿ), ಮೈಗೆ ಆಭರಣ, ಮುಖದಲ್ಲಿ ಕಪಿಯ ವೈಭವೀಕೃತ ವಲಿ (ಸುಳಿ)ಗಳಿಂದ ಮಂಗನೆಂಬುದರ ಸಂಕೇತ. ಈ ವೇಷ, ಕಾಡಿನ ಮಂಗನ ವೇಷ ಅಲ್ಲ. ಬದಲಾಗಿ ಕಪಿಗಳೆಂಬ ಜನಾಂಗದಲ್ಲಿದ್ದ ವ್ಯಕ್ತಿತ್ವದ ವೈಭವೀಕೃತ ಕಲಾರೂಪ. ಉಳಿದ ಯಕ್ಷಗಾನ ವೇಷಗಳಿಗೆ ಹೊಂದಿಕೆ ಆಗಿ Matching ಆಗಿ ಇರುವ ವೇಷ ಕಲ್ಪನೆ. ಇದು ಕಲಾಭಾಷೆಯೊಳಗಿನ ಸುಂದರವಾದ ಕಲ್ಪನಾತ್ಮಕ ರಚನೆ. ಅದನ್ನು ಬಿಟ್ಟು ಹಸುರು ರೋಮದ ಅಂಗಿ ತೊಟ್ಟು ಕೆಂಪು ಚಡ್ಡಿ ಹಾಕಿದ ಹನುಮಂತನೆಂದರೆ ಮಂಗನ ವೇಷವೇ ಆಗಿದ್ದು, ರಂಗದ ಹನುಮಂತನಾಗದೆ ಹೋಗುತ್ತದೆ.

ಯಕ್ಷಗಾನದಲ್ಲಿ ಪಾತ್ರಕ್ಕೊಂದು ವೇಷ ವಿಧಾನವಿಲ್ಲ. ಅರ್ಥಾತ್ ಜನಕ್ಕೊಂದು ವೇಷವಿಲ್ಲ. ಅರ್ಜುನ ಬೇರೆ, ರಾಮ ಬೇರೆ, ಚಂದ್ರಗುಪ್ತ ಬೇರೆ ಎಂಬಂತೆ ಚಾರಿತ್ರಿಕ, ವ್ಯಕ್ತಿ ಪ್ರತ್ಯೇಕತೆಗಳಿಲ್ಲ. ಪೀಠಿಕೆ ವೇಷ, ಇದಿರುವೇಷ (ಎರಡನೇ ವೇಷ), ಬಣ್ಣದ ವೇಷ, ಪುಂಡುವೇಷ, ಹಾಸ್ಯವೇಷ, ಋಷಿವೇಷ — ಹೀಗೆ ವರ್ಗಗಳಿವೆ. ಎಲ್ಲ ವೇಷಗಳೂ ಹೀಗೆ ಆರೆಂಟು 'ವೇಷವರ್ಗ'ಯಾ 'ಜಾತಿ'ಗಳಲ್ಲಿ ಬರುತ್ತವೆ. ಮುಗಿಯಿತು. ಇದೊಂದು ನಿಶ್ಚಿತ 'ಭಾಷೆ', ಅಂದರೆ ವರ್ಗಿಕೃತ ವಿಭಾಗ ವ್ಯವಸ್ಥೆ. ಯಾವುದೇ ಪಾತ್ರವಾದರೂ ಅದರೊಳಗೆ ಬರಬೇಕು, ಬರುತ್ತದೆ. ರಾವಣನೂ, ನರಕಾಸುರನೂ, ಮಾಗಧನೂ, ಕಂಸನೂ, ಬಕಾಸುರನೂ, ಹಿಡಿಂಬಾಸುರನೂ ಬಣ್ಣದ ವೇಷಗಳು, ಅಂದರೆ ರಾಕ್ಷಸ ವೇಷಗಳು. ಇಂತಹ ಬಣ್ಣದ ವೇಷಗಳು ಇನ್ನೂ ಹಲವಿದೆ. ರಾವಣ, ನರಕಾಸುರರು 'ರಾಜಬಣ್ಣ'ಗಳು, ಬಕಾಸುರ, ಹಿಡಿಂಬಾಸುರರು 'ಕಾಟುಬಣ್ಣ'ಗಳು, ಎರಡೂ ಬಣ್ಣಗಳೇ — ಇದು ತುಂಬ ಪರಿಷ್ಕೃತವಾದ, ಕಲ್ಪನಾಶೀಲವಾದ ರಂಗಭಾಷೆಯ ನಿಯಮಗಳಿಂದ ಬಂದದ್ದು. ಇದನ್ನು ತಿಳಿಯದೆ ಇದ್ದರೆ ನಮಗೆ ಕಲೆಯನ್ನು ಆಸ್ಪಾದಿಸಲು ಆಗುವುದಿಲ್ಲ.

ವೇಷಗಳು ಮುಖ್ಯವಾಗಿ ಸ್ವಭಾವವನ್ನು ಆಧರಿಸಿದ ಅತಿಕರಿಸಿದ' ಸ್ಕೂಲಸಂಕೇತಗಳು.ಅದರ ಸ್ವರೂಪದೊಳಗೆ, ಅದಕ್ಕೆ ಅನುಸರಿಸಿ ಮಾತು, ಅಭಿನಯ, ಸಂಚಾರಗಳೆಲ್ಲ ಇರಬೇಕು. ಬಣ್ಣದ ವೇಷಕ್ಕೆ ಆರ್ಭಟೆ, ಬೊಬ್ಬೆ, ದೊಡ್ಡ ಸ್ವರದ ನಿಧಾನ ಮಾತು, ರಾಜವೇಷಕ್ಕೆ ಗಾಂಭೀರ್ಯಯುಕ್ತ ಕುಣಿತ, ಮಾತು, ಪುಂಡು (ತರುಣ) ವೇಷಕ್ಕೆ ಚುರುಕಾದ ನೃತ್ಯ, ಲವಲವಿಕೆಯ ಮಾತು — ಇದು ರಂಗವಿಧಾನ, ಭಾಷೆ, ಅದನ್ನೆ 'ಯಕ್ಷಗಾನದ ಕ್ರಮ' ಎನ್ನುತ್ತೇವೆ.

* ಡಾ. ಎಂ. ಪ್ರಭಾಕರ ಜೋಶಿ