ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮನಾಟ್ಟಂನ) ಆದರ್ಶದಿಂದ ರೂಪಿತವಾದುದು. ಆದುದರಿಂದ ಅದಕ್ಕೆ ತೆಂಕ (ಕೇರಳೀಯ) ಎಂಬ ವಿಶೇಷಣವು ಪ್ರಾಪ್ತವಾಗಿದೆಯೆಂದೂ ಬಡಗುತಿಟ್ಟು ಯಕ್ಷಗಾನವು ಆಂಧ್ರ ಸಂಪ್ರದಾಯವನ್ನು ಆಧರಿಸಿದ್ದು, ಅದರಿಂದಲೇ ಬಡಗ (ಎಂದರೆ ಆಂಧ್ರದ) ಎಂಬ ವಿಶೇಷಣವು ರೂಢಿಯಾದುದು- ಎಂಬ ವಿಚಾರಗಳೂ ವಿಶಿಷ್ಟವಾಗಿದ್ದು ವಿಚಾರಣೀಯವಾಗಿವೆ. ಯಕ್ಷಗಾನವನ್ನು ಕೃಷ್ಣ ಭಟ್ಟರು ಆಂಧ್ರಮೂಲವಾಗಿ, ಒಟ್ಟು ದಕ್ಷಿಣ ಭಾರತೀಯ ಪರಿವೇಶದಲ್ಲಿ ನೋಡಿರುವುದು ಗಮನಾರ್ಹವಾಗಿದೆ.

ಪಾರ್ತಿಸುಬ್ಬನ ಕಾಲ, ಸ್ಥಳ, ಕರ್ತೃತ್ವಗಳು, ಕನ್ನಡದ ದೊಡ್ಡ ಸಂಶೋಧನ ವಿವಾದಗಳಲ್ಲಿ ಸೇರಿದ್ದು (ಈ ಕುರಿತು ಸಂಪಾದಕನ ಟಿಪ್ಪಣಿ ಲೇಖನಗಳೊಂದಿಗೆ ಇದೆ). ಕುಕ್ಕಿಲರು ಇದರಲ್ಲಿ ಓರ್ವ ಮುಖ್ಯ ಲೇಖಕರು. ಈ ಕಾರಣದಿಂದಲೆ ಮುಖ್ಯವಾಗಿ ಅವರು ನಾಡಿನ ಗಮನ ಸೆಳೆದರು. ಯಕ್ಷಗಾನ ರಾಮಾಯಣ ಪ್ರಸಂಗಗಳ ಕರ್ತೃವು ಕುಂಬಳೆಯ ಪಾರ್ತಿಸುಬ್ಬನೆಂಬುದನ್ನು ಡಾ| ಕಾರಂತರು ಪ್ರಶ್ನಿಸುವುದರೊಂದಿಗೆ ಆರಂಭವಾದ ಈ ಚರ್ಚೆಯಲ್ಲಿ, ಕುಕ್ಕಿಲರು ಪಾರ್ತಿಸುಬ್ಬನು ಕುಂಬಳೆಯವನೆಂದೂ, ಅವನೇ ಕರ್ತೃವೆಂದೂ, ಕಥಕಳಿ ರಾಮಾಯಣದ ಗಾಢವಾದ ಪ್ರಭಾವವು ಅವನ ಕೃತಿಗಳ ಮೇಲೆ ಆಗಿದೆಯೆಂದೂ ಸಮರ್ಥವಾಗಿ ಪ್ರತಿಪಾದಿಸಿದರು. ಶ್ರೀ ಕಾರಂತರ ವರ್ಚಸ್ಸಿನಿಂದ ಸ್ವೀಕೃತವಾಗಿದ್ದ ಅವರ ಅಭಿಪ್ರಾಯವನ್ನು ಕುಕ್ಕಿಲರು ಸಾಧಾರವಾಗಿ ಪ್ರಶ್ನಿಸಿ, ಸುಬ್ಬನ ಕುರಿತ ನಿಜವಿಚಾರವನ್ನು ತಿಳಿಯುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾಂದರ್ಭಿಕವಾಗಿ ಕಾರಂತರ ವಿಶ್ಲೇಷಣೆಗಳನ್ನೂ, ಕಾಲನಿರ್ಣಯಗಳನ್ನೂ ಅವರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಾರಂತರನ್ನು ಖಂಡಿಸುವ ಭರದಲ್ಲಿ, ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಮರೆಯಬಾರದೆಂದೂ, ಖಂಡನೆಯು ಸಾಧಾರವಾಗಿರ ಬೇಕೆಂದೂ ಹೇಳಿರುವುದು ಅವರ ಸಮತೋಲ ದೃಷ್ಟಿಯ ದ್ಯೋತಕವಾಗಿದೆ. (ನೋಡಿ:ಕೋಟೆಕಾರು ಭಾಷಣ). ಈ ವಿಷಯದ ಅವರ ಸತತ ಆಸಕ್ತಿಯ ಫಲವೇ ಪಾರ್ತಿಸುಬ್ಬನ ಯಕ್ಷಗಾನಗಳು' ಎಂಬ ಗ್ರಂಥ.

ನಾಟ್ಯಶಾಸ್ತ್ರ ಮತ್ತು ಸಂಸ್ಕೃತ ರಂಗಭೂಮಿಯ ಬಗೆಗಿನ ಲೇಖನದಲ್ಲಿ, ರಂಗ ಪ್ರಯೋಗದ ಇತಿಹಾಸಕ್ಕೆ ಸಂಬಂಧಿಸಿದ ಮಹತ್ವದ ನೋಟಗಳಿದ್ದು ಸಂಸ್ಕೃತದ ಕಾಳಿದಾಸಾದಿಗಳ ನಾಟಕ ಪರಂಪರೆಗೂ, ನಾಟ್ಯಶಾಸ್ರೋಕ್ತವಾದ ರಂಗಪರಂಪರೆಗೂ ಇರುವ ಭಿನ್ನತೆಯನ್ನು ಅವರು ತೋರಿಸಿದ್ದಾರೆ.

'ಯವನ-ಯವನಿಕಾ' ಎಂಬ ಒಂದು ಚಿಕ್ಕ ಲೇಖನವು, ಒಂದು ಅಸಾಧಾರಣ ಬರಹವಾಗಿದ್ದು, ಭಾರತೀಯ ಸಂಸ್ಕೃತಿಯ ಶೋಧನೆಗೆ ದೊಡ್ಡ ಕೊಡುಗೆಯಾಗಿದೆ. 'ಯವನ ಎಂಬುದಕ್ಕೆ ಪ್ರಸಿದ್ಧವಾಗಿ ಒಪ್ಪಿತವಾಗಿರುವ 'ಗ್ರೀಕ್' ಎಂಬ ಅರ್ಥವು ಸಾಧುವಲ್ಲವೆಂದೂ, ಯವನ ಎಂಬುದಕ್ಕೆ 'ಪಾರ್ಸಿ-ಅರಬೀ' ಎಂಬುದೇ ನಿಜವಾದ ಅರ್ಥವೆಂದೂ ಅವರು ಅಡಕವಾಗಿ, ಪಾಂಡಿತ್ಯಪೂರ್ಣವಾಗಿ ಮತ್ತು ಸೂಕ್ಷ್ಮಪರಿಶೀಲನೆಯೊಂದಿಗೆ ಸ್ಥಾಪಿಸಿದ್ದಾರೆ. ಈ ಲೇಖನವು ಭಾರತೀಯ ಸಂಸ್ಕೃತಿ ಶಾಸ್ತ್ರದ ಹಲವು 'ಅಂಗೀಕೃತ' ತೀರ್ಮಾನಗಳನ್ನು ಬದಲಿಸುವ ಪ್ರವರ್ತಕ ಲೇಖನವಾಗಿದೆ.

'ಕರ್ನಾಟಕ ಸಂಗೀತ ಪರಂಪರೆ' ಲೇಖನದಲ್ಲೂ ಸಂಗೀತಶಾಸ್ತ್ರದ ಬಗೆಗಿನ ವಿಶಿಷ್ಟನೋಟಗಳಿದ್ದು, ಉತ್ತರಾದಿ (ಹಿಂದುಸ್ತಾನಿ ಸಂಗೀತದ ಕುರಿತು ನಿಶ್ಚಿತವೆಂದು ತಿಳಿಯಲಾಗಿದ್ದ ಅಭಿಮತಗಳನ್ನು ಬದಲಿಸುವ ಪ್ರತಿಪಾದನೆಗಳಿವೆ. 'ಸಂಗೀತ ರತ್ನಾಕರ-