ವಿಷಯಕ್ಕೆ ಹೋಗು

ಪುಟ:ಮುಡಿ.pdf/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

68

ಮುಡಿ

ಕಲಾವಿದನಲ್ಲಿ ಗುಣಮಟ್ಟ ಉತ್ತಮವಾಗಿರುತ್ತದೆ. ಹೀಗಾಗಿ ಯಕ್ಷಗಾನದ ವಾಣಿಜ್ಯ ಸ್ವರೂಪವನ್ನು, ಕಲೆಯ ಉಳಿವಿನ ದೃಷ್ಟಿಯಿಂದ ಸ್ವಾಗತಿಸಬೇಕೆ ಹೊರತು, ದೂರುವಂತಿಲ್ಲ.
ಆದರೆ, ಸಾಂಪ್ರದಾಯಿಕವಾದ ಒಂದು ಕಲೆಯು ನೂರಾರು ವರ್ಷಗಳಿಂದ ಬೆಳೆದು, ಅಂಗೋಪಾಂಗ ವಿಕಾಸವನ್ನು ಸಾಧಿಸುತ್ತ ಬಂದು, ಒಂದು ಪಕ್ವತೆಯನ್ನೂ, ಶೈಲಿ ಸೌಷ್ಟವವನ್ನೂ ಪಡೆದಿರುವಲ್ಲಿ, ಕಮರ್ಶಿಯಲ್ ದೃಷ್ಟಿಯಿಂದ ಅದನ್ನು ಎಷ್ಟು ಬದಲಿಸಬಹುದು ? ಎಷ್ಟು ಸಮೃದ್ಧಿಯನ್ನು ಬಳಕೆ' ಮಾಡಬಹುದು ಎಂಬ ಪ್ರಶ್ನೆಯನ್ನು ಮುಖ್ಯವಾಗಿ ಕಲಾವ್ಯವಸ್ಥಾಪಕರೂ, ಸಂಘಟಕರೂ, ಅಂತೆಯೇ ಕಲಾವಿದರೂ ಗಂಭೀರವಾಗಿ ಚಿಂತಿಸಬೇಕು.
ಈ ಕುರಿತಾಗಿ, ಯಕ್ಷಗಾನದ ಕ್ಷೇತ್ರದಲ್ಲಿ ಗೊಂದಲಗಳಿವೆ. ಇದಕ್ಕೆ, ವ್ಯವಸಾಯ ಸಂಘಟಕರು ಜನರನ್ನೂ, ಕಲಾವಿದರು ಜನರನ್ನು ಮತ್ತು ಸಂಘಟಕರನ್ನೂ, ಜನರು, ಪರಿಸ್ಥಿತಿ ಯನ್ನೂ ಬೆಟ್ಟು ಮಾಡಿ ತೋರಿಸುತ್ತಾರೆ. ಅವರವರ ನಿಲುವಿನಿಂದ ವಾದಗಳನ್ನು ಮಂಡಿಸುತ್ತಾರೆ. ಈ ವಿಷಯದಲ್ಲಿ, ಅಂದರೆ ವ್ಯಾವಸಾಯಿಕವಾದ ಅಗತ್ಯಗಳು ಮತ್ತು ಶೈಲಿಬದ್ಧ ಕಲೆಯ ಉಳಿವಿನ ಪ್ರಶ್ನೆಯಲ್ಲಿ, ಇದಮಿತ್ಥಂ ಎಂದು ತೀರ್ಮಾನಗಳನ್ನು ಹೇಳುವುದು ಕಷ್ಟದ ಕೆಲಸ. ಜಾಣ್ಮೆಯ ತರ್ಕವಾದಗಳಿಂದ ಇದು ಬಗೆಹರಿಯುವ ಸಮಸ್ಯೆಯೂ ಅಲ್ಲ.
ಯಕ್ಷಗಾನವೂ ನಮ್ಮ ಸಾಂಸ್ಕೃತಿಕ ಸಂಪತ್ತು. ಪ್ರೌಢ ಸುಂದರವಾದ ಅಂಶಗಳನ್ನು ಹೊಂದಿದೆ. ಅದಕ್ಕೆ ತನ್ನದಾದ ಒಂದು ಶೈಲಿ ಬದ್ಧತೆ, ಸ್ವತ್ವ, ರೂಪ ಇದೆ. ಇವಿಷ್ಟು ಪ್ರಾಯಶಃ ಎಲ್ಲರೂ ಒಪ್ಪುವ ಸಂಗತಿಗಳು. ಆದುದರಿಂದ ಅದನ್ನು ಉಳಿಸುವುದು ಮತ್ತು ಬೆಳೆಸುವುದು ನಮಗಿರುವ ಒಂದು ಜನಾಂಗೀಯ ಮತ್ತು ಸಾಮೂಹಿಕ ಕರ್ತವ್ಯ, ವಾರಸುದಾರಿಕೆಯ ಹೊಣೆ. ಇದನ್ನು ನಾವು ಅರಿತು ನಿರ್ವಹಿಸದಿದ್ದರೆ, ಒಂದು ದೊಡ್ಡ ಸಂಪತ್ತನ್ನು ಕಡೆಗಣಿಸಿ, ವಿನಾಶ ಮಾಡಿದ ಐತಿಹಾಸಿಕ ಕರ್ತವ್ಯಭ್ರಷ್ಟತೆಗೆ ನಾವು ಒಳಗಾಗುತ್ತೇವೆ. ತುಂಬ ಆಯಕಟ್ಟಿನ, ಪರಿವರ್ತನಾ ವೇಗದ ಈ ಕಾಲದಲ್ಲಿ ಈ ವಿಚಾರ ಹೆಚ್ಚು ಸತ್ಯ ಮತ್ತು ತುರ್ತಿನದ್ದಾಗಿದೆ. ವ್ಯವಸಾಯದ ಭವಿಷ್ಯ
ವ್ಯಾವಸಾಯಿಕ ಯಕ್ಷಗಾನದ ಭವಿಷ್ಯ ಆಶಾದಾಯಕವಾಗಿಲ್ಲ. 1950-1990ರ ನಾಲ್ಕು ದಶಕಗಳಲ್ಲಾದ ಸಂಖ್ಯಾ ಸ್ಫೋಟ, ಉಚ್ಛ್ರಾಯಗಳು ಇಳಿಮುಖವಾಗಿದ್ದು ಮುಂದಿನ ನಾಲ್ಕಾರು ವರ್ಷಗಳಲ್ಲಿ ಇದು ಇನ್ನಷ್ಟು ನಿಚ್ಚಳವಾಗಿ ಕಾಣಿಸಲಿದೆ. ಮೇಳಗಳ ಮತ್ತು

0 ಡಾ. ಎಂ. ಪ್ರಭಾಕರ ಜೋ