ವಿಷಯಕ್ಕೆ ಹೋಗು

ಪುಟ:ಮುಡಿ.pdf/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ










ತಮಿಳುನಾಡಿನ ತೆರುಕೂತ್ತು
ಕಿರುಪರಿಚಯ

- ೧ -

ತೆರುಕೂತ್ತು ಎಂಬುದು ತಮಿಳುನಾಡಿನ, ಪ್ರಸಿದ್ಧವಾದ ಒಂದು ಸಾಂಪ್ರದಾಯಿಕ ರಂಗಕಲೆ, ನಮ್ಮ ಯಕ್ಷಗಾನ ಬಯಲಾಟದ ಸೋದರ ಕಲೆ. ದಕ್ಷಿಣ ಭಾರತದ ಬಯಲಾಟಗಳ ವಿವಿಧ ಪ್ರಕಾರಗಳಾದ ಯಕ್ಷಗಾನ, ಮೂಡಲವಾಯ ದೊಡ್ಡಾಟ, ವೀಧಿ ನಾಟಕಂ, ತೂರ್ಪು ಭಾಗವತ, ದಶಾವತಾರಿ, ಚಿಂದು ಯಕ್ಷಗಾನ - ಮುಂತಾದ ಪ್ರಕಾರಗಳೊಂದಿಗೆ, ತೆರುಕೂತ್ತು ಹತ್ತಿರದ ಸಾಮ್ಯ ಹೊಂದಿದೆ. ಹಾಗೆಯೇ, ಸಹಜವಾಗಿ, ಐತಿಹಾಸಿಕ ಮತ್ತು ಪ್ರಾದೇಶಿಕ ಕಾರಣಗಳಿಂದಾಗಿ ಅನೇಕ ವ್ಯತ್ಯಾಸಗಳೂ ಇವೆ. ಆದರೆ, ಈಯೆಲ್ಲ ಬಯಲಾಟ ಪ್ರಭೇದಗಳೂ ಒಂದೆ ಮೂಲದವು ಅಥವಾ ಪರಸ್ಪರ ಪ್ರಭಾವ ಪ್ರೇರಣೆಗಳಿಂದ ಬೆಳೆದವುಗಳೆಂಬುದನ್ನು ಸ್ಪಷ್ಟವಾಗಿ ಕಾಣಿಸುವಂತಹ ಲಕ್ಷಣಗಳು ಈ ಪ್ರಕಾರದಲ್ಲಿ ಇವೆ.
ಒಂದು ತೆರುಕೂತ್ತು ಆಟವನ್ನು ನಮ್ಮ ಬಯಲಾಟದ ಪ್ರೇಕ್ಷಕರ ಮುಂದೆ ಪ್ರದರ್ಶಿಸಿ, ಒಂದಿಷ್ಟು ವಿವರಣೆ ನೀಡಿ ಪ್ರದರ್ಶಿಸಿದರೆ, ಅವರು ಅದನ್ನು ಚೆನ್ನಾಗಿ ಸವಿಯುವಂತೆ ಮಾಡಲು ಕಷ್ಟವಾಗದು. ಅಷ್ಟು ಸಾಮೀಪ್ಯ ಈ ಪ್ರಕಾರಗಳೊಳಗೆ ಇದೆ. ಡಾ. ಎಂ. ಪ್ರಭಾಕರ ಜೋಶಿ