ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

120

ಮುಡಿ

ಎರಡು ವಿಧಗಳಾಗಿರುವುದನ್ನು ಕಾಣುತ್ತೇವೆ. ಹಾಗೆಯೆ, ಒಂದು ಮೇಳದ ಪರಂಪರೆಯೂ ಮಾತುಗಾರಿಕೆಗಿದೆ. ಹಿಂದೆ - 'ತುಳುನಾಡ ಸಿರಿ' ಪ್ರಸಂಗವನ್ನು ಇರಾಮೇಳ, ಮತ್ತು ಕೂಡ್ಲು ಮೇಳಗಳು ಆಡುತ್ತಿದ್ದಾಗ, ಸುರತ್ಕಲ್ ಮತ್ತು ಕರ್ನಾಟಕ ಮೇಳಗಳು ಆಡುತ್ತಿದ್ದಾಗ ಮಾತುಗಾರಿಕೆಗೆ ಎರಡು 'ದಾರಿ'ಗಳು ನಿರ್ಮಾಣವಾದುದು ಸ್ಪಷ್ಟವಾದ ಒಂದು ವಿದ್ಯಮಾನವಾಗಿದ್ದು, ಅದಕ್ಕಾಗಿಯೇ ಪ್ರೇಕ್ಷಕರು ಒಂದೇ ಪ್ರಸಂಗದ ಎರಡೂ ಮೇಳಗಳ ಪ್ರದರ್ಶನಗಳನ್ನು ನೋಡುತ್ತಿದ್ದರು. ಕೆರೆಮನೆ ಮೇಳದ ಕೃಷ್ಣ ಸಂಧಾನ ಮೊದಲಾದ ಹಲವು ಉದಾಹರಣೆಗಳನ್ನಿಲ್ಲಿ ಸ್ಮರಿಸಬಹುದು. ವಿಶಿಷ್ಟವಾದ ಜೊತೆಗಾರಿಕೆಗಳಲ್ಲೂ ಹೀಗೆ ಮಾತುಗಾರಿಕೆಯು ಒಂದು 'ಸ್ಥೂಲ -ಸಿದ್ದ' ರೂಪವು ಕಾಣುತ್ತದೆ. ಇದನ್ನು ಯಕ್ಷಗಾನ ಪರಿಭಾಷೆಯಲ್ಲಿ ಪ್ಲೋಟ್ (plot) ಎನ್ನುತ್ತಾರೆ. ಈ ವಿಧದ ಪರಂಪರೆಗಳು ಕೊಡುಕೊಳುಗೆಯಿಂದ ಮಿಶ್ರವಾಗುತ್ತ ಹಲವು ರೂಪಾಂತರಗಳನ್ನು ಪಡೆಯುತ್ತವೆ.

ಹೀಗೆ -ಪ್ರಸಂಗ, ಕನ್ನಡ ಕಾವ್ಯ, ಮೂಲ ಆಕರ, ರಂಗಪರಂಪರೆ, ಅದರ ಒಳಗಿನ ವಿಭಿನ್ನ ಪರಂಪರೆಗಳ ಮೂಲಕ ರೂಪುಗೊಂಡ 'ಅರ್ಥ'ವನ್ನು ಪ್ರಸಂಗವು ಪ್ರದರ್ಶನವಾಗಿ ಸಹೃದಯನಿಗೆ ನೀಡುತ್ತದೆ. ಇದು ವಿಭಿನ್ನ ಅರ್ಥೈಸುವಿಕೆಗಳಾಗಿ, ಸ್ಪಂದನ ಮೂಲಕ ಮತ್ತಷ್ಟು ಅರ್ಥಗಳನ್ನು ನಿರ್ಮಿಸುತ್ತದೆ.
ಹಂತಗಳು
ಪ್ರಸಂಗವೆಂಬ ಕಾವ್ಯವನ್ನು ಅರ್ಥಗಾರಿಕೆಗೆ ಬಳಸುವಲ್ಲಿ ವಿವಿಧ ಹಂತಗಳಿವೆ.-
-ಸರಳಾನುವಾದ, ಬರಿಯ ಪದ್ಯದ ಅರ್ಥ. ಇದೂ ಅಷ್ಟು ಸರಳವೇನಲ್ಲ
-ಪಾತ್ರದ ಪ್ರವೇಶದ ಪದ್ಯವಾದರೆ, ಪೂರ್ವಕಥೆ ಸಹಿತ, ಸರಳಾನುವಾದ.
-ಸ್ವಲ್ಪ ವಿವರಣೆಗಳಿಂದ ಕೂಡಿದ, ಕಥಾಸಾರ ಸಹಿತ, ಸಂದರ್ಭಾನುವಾದ
-ಪೌರಾಣಿಕ ವಿವರಗಳ ಸಹಿತ (ಇದಕ್ಕೆ ಅನುಭವ'ಎಂದೂ ಹೆಸರಿದೆ)
-ಕಾವ್ಯ ಅಧ್ಯಯನ, ಆಕರ ಅದ್ಯಯನಗಳಿಂದ ಪರಿಪೋಷಗೊಂಡ ಅರ್ಥಗಾರಿಕೆ
(ಇದನ್ನೇ ಅರ್ಥಕ್ಕೆ 'ಸಾಹಿತ್ಯ ಹಾಕುವುದು'ಎಂದು ಪಾರಿಭಾಷಿಕವಾಗಿ ಹೇಳುತ್ತಾರೆ.)
-ಪ್ರಸಂಗದ ಸಂದರ್ಭವನ್ನು, ಇತರ ಸಂದರ್ಭಗಳನ್ನು ಗಮನಿಸಿ ಯಥೋಚಿತ ಸಾಮಗ್ರಿಗಳೊಂದಿಗೆ ನಿರ್ಮಿಸುವ ಅರ್ಥ-ಅರ್ಥೈಸುವಿಕೆಯೊಂದಿಗಿನ (interpretative) ಅರ್ಥಗಾರಿಕೆ. ಇದರಲ್ಲಿ ಪಾತ್ರದರ್ಶನ, ಕಥಾದರ್ಶನಗಳು ಒಳಗೊಳ್ಳುತ್ತವೆ.

ಡಾ. ಎಂ. ಪ್ರಭಾಕರ ಜೋಶಿ