ಮುಡಿ
ಪ್ರಸಂಗಗಳಿವೆ. 'ಅಹಿಂಸಾ ಕಥೆ' ಮೊದಲಾದ ಜೈನ ಯಕ್ಷಗಾನ, ಶರಣಲೀಲಾ ಚರಿತ್ರೆ
ಮೊದಲಾದ ವೀರಶೈವ ಯಕ್ಷಗಾನಗಳೂ ರಚಿತವಾಗಿವೆ. ತುಳುಭಾಷೆಯ ಯಕ್ಷಗಾನ
ಪ್ರಸಂಗರಚನೆಯ ಮೊದಲಿಗರು ಬಾಯಾರು ಸಂಕಯ್ಯ ಭಾಗವತರಾದರೂ (ಸು. 1880)
ತುಳುಭಾಷೆಯಲ್ಲಿ ಯಕ್ಷಗಾನ ಪ್ರಸಂಗಗಳ ರಚನೆ ಬೆಳೆದು ಬಂದದ್ದು 1960 ರಿಂದ -
ಪ್ರಾಯಃ ಸು. 200ಕ್ಕೂ ಹೆಚ್ಚು ಸ್ವತಂತ್ರ ಮತ್ತು ಅನುವಾದಿತ ತುಳು ಪ್ರಸಂಗಗಳು
ರಚಿತವಾಗಿರಬಹುದು.
1950 ರಿಂದ ವಿಸ್ತಾರಗೊಂಡ ವಾಣಿಜ್ಯೀಕರಣದ ಅವಶ್ಯಕತೆಗಳಿಂದಾಗಿ ಹೊಸ
ವಸ್ತುಗಳನ್ನೊಳಗೊಂಡ ಪ್ರಸಂಗಗಳ ಪ್ರವಾಹವೇ ಹರಿಯಿತು. ಇದರಲ್ಲಿ ಪೌರಾಣಿಕ,
ಜಾನಪದ, ಪಾಡ್ದನ, ಐತಿಹಾಸಿಕ, ಸಿನಿಮಾ, ಕಾಲ್ಪನಿಕ ಸಮ್ಮಿಶ್ರ ಮೊದಲಾದ ಹಲವು
ಮೂಲಗಳಿಂದ, ಸಂಸ್ಕೃತ ನಾಟಕಗಳಿಂದ ಕಥಾವಸ್ತುಗಳು ಪ್ರಸಂಗರೂಪಕ್ಕೆ ಬಂದುವು.
ಗುಣಸುಂದರಿ, ಸದಾರಮೆ ಮೊದಲಾದ 'ಕಂಪೆನಿ ನಾಟಕ'ಗಳೂ ಪ್ರಸಂಗಗಳಾದುವು.
ಮೊದಲಿನ ಪ್ರಸಂಗಗಳ ಜೋಡಣೆಯಿಂದ ಹೊಸ ರಂಗಕೃತಿಗಳು ನಿರ್ಮಾಣವಾದುವು.
ಅಂತೆಯೇ ಮಿತಸಂತಾನ, ರಾತ್ರಿಶಾಲೆ, ಸಮಾಜ ವಿಕಾಸ, ಸಾಕ್ಷರತೆ, ಜಪಾನ್, ಕೃಷಿ,
ಪರಿಸರರಕ್ಷಣೆ, ಏಡ್ಸ್ ನಿವಾರಣೆಗಳಂತಹ ಆಧುನಿಕ ವಸ್ತುಗಳ ಬಗೆಗೂ ಪ್ರಸಂಗ ಸಾಹಿತ್ಯ
ನಿರ್ಮಾಣವಾಗಿದೆ. ನಸ್ಸೇರ್ ಪ್ರತಾಪ, ಕಾಶ್ಮೀರ ವಿಜಯದಂತಹ ರಾಜಕೀಯ ಸಂಗತಿಗಳೂ
ಬಂದಿವೆ. ವಿಭಿನ್ನ ವಸ್ತುವಿನ ಅಳವಡಿಕೆಯ ದೃಷ್ಟಿಯಿಂದ 'ಯೇಸುಕ್ರಿಸ್ತ', 'ಹ್ಯಾಮ್ಲೆ ಟ್',
'ಆದಿಪಾಶ' ಗಮನಾರ್ಹ ಪ್ರಸಂಗಗಳು, ರಚನೆಯ ಪ್ರಾಯೋಗಿಕತೆಯನ್ನು ಗಂಭೀರವಾಗಿ
ಸ್ವೀಕರಿಸಿ ಯಕ್ಷಗಾನೋಚಿತ ವಸ್ತುವಿನಲ್ಲೇ ಹೊಸ ಅರ್ಥವನ್ನು ತುಂಬುವ ದೃಷ್ಟಿಯ
ಹೊಸಕಾಲದ ಪ್ರಸಂಗ ರಚನೆಗಳಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯ, ಅಮೃತ
ಸೋಮೇಶ್ವರ, ರಾಘವ ನಂಬಿಯಾರ್, ಪುರುಷೋತ್ತಮ ಪೂಂಜ ಇವರ ರಚನೆಗಳು
ಪ್ರಮುಖವಾಗಿವೆ.
ನೃತ್ಯ - ಅಭಿನಯ
ಯಕ್ಷಗಾನ ಆಟವು ಉಗಮಕಾಲಕ್ಕೆ ತನ್ನ ಸುತ್ತ ಇದ್ದ ಶಾಸ್ತ್ರೀಯ ನೃತ್ಯ,
ಆಚರಣಾರಂಗ, ಜನಪದ ಮೊದಲಾದವುಗಳಿಂದ ಸ್ವೀಕರಿಸಿದ, ರೂಪುಗೊಳಿಸಿದ ಕುಣಿತವು
ತನ್ನದಾದ ಒಂದು ರೂಪವನ್ನೂ ಶೈಲಿಯನ್ನೂ ಪಡೆಯಿತು. ತಿಟ್ಟುಗಳಲ್ಲಿ ಪ್ರತ್ಯೇಕ ರೀತಿಯ