ಮುಡಿ
ನೃತ್ಯಗಳು ಉಂಟಾದುವು. ಬಡಗುತಿಟ್ಟಿನ ಕುಣಿತದ ಅಡಿಪಾಯದ ಮೇಲೆ, ನಾಟ್ಯಶಾಸ್ತ್ರದ
ಆಧಾರದಲ್ಲಿ, ಬಹುಶಃ ಅಲ್ಲಿಯ ದೇವಾಲಯಗಳ 'ನಾಟ್ಯಮೇಳ'ಗಳ ಪ್ರಭಾವದಿಂದ
ವಿಸ್ತಾರವಾದ ಪದಾಭಿನಯ, ಚಿತ್ರಾಭಿನಯವನ್ನು, ಮುದ್ರೆ ಚಲನೆಗಳ ಮೂಲಕ ಅಳವಡಿಸಿದ
ಉತ್ತರ ಕನ್ನಡದ ಕಲಾವಿದರ ಕೃಷಿ ಶತಕಗಳ ಹಿನ್ನೆಲೆ ಹೊಂದಿದ್ದು ಅಭಿವ್ಯಕ್ತಿ ವಿಧಾನದ
ಮಹತ್ತ್ವದ ಪ್ರಯೋಗವಾಗಿ ಒಂದು ಪ್ರತ್ಯೇಕ ಪರಂಪರೆಗೆ ಕಾರಣವಾಯಿತು. ತೆಂಕುತಿಟ್ಟಿನಲ್ಲಿ
ಭರತನಾಟ್ಯಂ ಪದ್ಧತಿಯ ಆಧಾರದಲ್ಲಿ ನೃತ್ಯಾಭಿನಯದ ಪ್ರಯೋಗವನ್ನು ಯಶಸ್ವಿಯಾಗಿ
ಅಳವಡಿಸಿದವರು ನಾಟ್ಯಾಚಾರ ದಿ| ಕುರಿಯ ವಿಠಲ ಶಾಸ್ತ್ರಿಗಳು. ಈ ಬಗೆಯ ನೃತ್ಯ
ಪ್ರಯೋಗಗಳಿಂದ ಅದಕ್ಕೆ ಹೊಂದಿಕೆಯಾಗಿ ಭಾಗವತಿಕೆ, ವಾದ್ಯವಾದನಗಳಲ್ಲೂ
ಹೊಸತನವನ್ನು ಅಳವಡಿಸಬೇಕಾಯಿತು.
ಅಲ್ಲದೆ ಸಾಂಪ್ರದಾಯಿಕ ಯಕ್ಷಗಾನದ ವ್ಯವಸ್ಥೆಯೊಳಗೆ ಕಲಾವಿದರು ನೃತ್ಯ,
ಅಭಿನಯಗಳಲ್ಲಿ ಹಾಡು-ಹಿಮ್ಮೇಳಗಳಲ್ಲಿ ವಿಶಿಷ್ಟ ಪ್ರಯೋಗಗಳನ್ನು ಅಳವಡಿಸುತ್ತ
ಬಂದಿದ್ದಾರೆ. ಅವು ಮತ್ತೆ ಪರಂಪರೆಯ ಭಾಗವಾಗಿ ರಂಗದ್ರವ್ಯದಲ್ಲಿ ಸೇರುತ್ತ ಬಂದಿವೆ.
ವೀರ, ರೌದ್ರ, ಹಾಸ್ಯ, ಶೃಂಗಾರ ರಸಗಳ ಕುಣಿತಗಳಲ್ಲಿ ಕಲಾವಿದರು ಹಲವು ಆವಿಷ್ಕಾರಗಳನ್ನು
ರೂಪಿಸಿದ್ದಾರೆ. ರಂಗರೂಢಿಗಳಲ್ಲೂ ಪ್ರಯೋಗಗಳಾಗಿವೆ.
ಅನುಕೂಲಕ್ಕಾಗಿ ಮತ್ತು ಕೇವಲ ಆಕರ್ಷಣೆ ಎಂಬುದಕ್ಕಾಗಿಯೂ
ಪ್ರಯೋಗಗಳಾಗುವುದುಂಟು. ಇವುಗಳನ್ನು 'ಪ್ರಯೋಗ ರಂಗ' ಎನ್ನಬೇಕೆ ಎಂಬುದು
ವಿವಾದಾಸ್ಪದ.
ಯಕ್ಷಗಾನ ನಾಟಕ
ಯಕ್ಷಗಾನದ ಇತಿಹಾಸದಲ್ಲಿ ಉಲ್ಲೇಖನೀಯವಾದೊಂದು ಬೆಳವಣಿಗೆ 1930ರ
ದಶಕದಲ್ಲಿ ರೂಪಿತವಾದ 'ಯಕ್ಷಗಾನ ನಾಟಕ'. ದಿ| ದೇರಾಜೆ ಸೀತಾರಾಮಯ್ಯನವರ ಬಳಗದ
ಚೊಕ್ಕಾಡಿ ಕರ್ನಾಟಕ ಯಕ್ಷಗಾನ ನಾಟಕ ಸಭಾ, ದಿ| ಕುರಿಯ ವೆಂಕಟರಮಣ ಶಾಸ್ತ್ರಿಗಳ
ಕೊಳ್ಳೂರು ಯಕ್ಷಗಾನ ಸಭಾ, ದಿ| ಕೀರಿಕ್ಕಾಡು ವಿಷ್ಣು ಮಾಸ್ತರರ ನಾಟಕ ತಂಡ ಇವು
ಪ್ರದರ್ಶಿಸಿದ ಯಕ್ಷಗಾನ ನಾಟಕಗಳು, ಬಯಲಾಟ ಮತ್ತು ಜನಪ್ರಿಯ ಶೈಲಿಯ ಪೌರಾಣಿಕ
ನಾಟಕಗಳ ಮಿಶ್ರಣಗಳು, ಮಿತವಾದ ನರ್ತನ, ಪರದೆಗಳ ಬಳಕೆ, 'ನಾಟಕೀಯ'
ವೇಷವಿಧಾನಗಳು ಇದರ ಮುಖ್ಯ ಲಕ್ಷಣಗಳು. ಈ ತಂಡಗಳ ಪ್ರಭಾವವು ತೆಂಕುತಿಟ್ಟು
ವ್ಯವಸಾಯ ಮೇಳಗಳ ಮೇಲೆ ಗಾಢವಾಗಿ ಬಿದ್ದು ಈಗಲೂ ಮುಂದುವರಿದಿದೆ.