ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

147

ಒಂದು ಕ್ಷೇತ್ರಕ್ಕೆ ದಿಕ್ಕುದೆಸೆಗಳನ್ನು ನೀಡಬಲ್ಲ ಶಕ್ತಿ. ವಿಮರ್ಶಕನು ಕಲಾವಿದ, ಸಂಘಟಕ, ರಂಗಕರ್ಮಿ, ಪ್ರೇಕ್ಷಕರದ್ದೇ ಒಂದು ಭಾಗವಾದರೂ, ಆತನದು ಹೆಚ್ಚು ಸಶಕ್ತವಾದ, ಸಂವೇದನಾಶೀಲವಾದ ವ್ಯಕ್ತಿತ್ವ. ವಿಮರ್ಶೆ ಎಂದರೆ ಬರಿಯ ಹೊಗಳಿಕೆ, ತೆಗಳಿಕೆಯಾಗಲೀ, ದೋಷಗಳ ಪಟ್ಟಿಯಾಗಲೀ ಅಲ್ಲ. ಅದು ಕಲೆಯನ್ನು, ಕಲಾಕೃತಿಯನ್ನು ಅರ್ಥೈಸುವ ಮತ್ತು ವಿಶ್ಲೇಷಿಸುವ ಪ್ರಕ್ರಿಯೆ, ವಿಮರ್ಶೆ ಬೆಳೆದರೆ ಕಲೆಯೂ, ಕಲಾವಿದನೂ ಬೆಳೆದು ಬರಲು ಸಹಕಾರಿ. ಇಂತಹ ಉತ್ತಮ ವಿಮರ್ಶಾ ಪರಂಪರೆ ಯಕ್ಷಗಾನರಂಗದ ಆದ್ಯ ಅವಶ್ಯಕತೆಯಾಗಿದೆ.
ವಿಮರ್ಶೆಯ ಮಾನದಂಡ
ಇಂತಹ ವಿಮರ್ಶೆಗೆ ಸೂಕ್ತವಾದ ಮಾನದಂಡಗಳು ಸಿದ್ದವಾಗಬೇಕಾಗಿವೆ. ಕಾರಣ ಯಕ್ಷಗಾನ ಕಲೆಗೆ ಪ್ರತ್ಯೇಕತೆ ಇರುವಂತೆ, ಅದರ ವಿಮರ್ಶೆಗೂ ಪ್ರತ್ಯೇಕತೆ ಇರಬೇಕಾದುದು ಸಹಜ, ಸಾಹಿತ್ಯ, ವಿಮರ್ಶೆ ಕಲಾವಿಮರ್ಶೆಗಳ ತತ್ತ್ವಗಳು ಯಕ್ಷಗಾನಕ್ಕೂ ಪ್ರಸ್ತುತ. ಆದರೆ ಅಷ್ಟರಿಂದಲೆ ಯಕ್ಷಗಾನ ವಿಮರ್ಶೆ ರೂಪುಗೊಳ್ಳಲಾರದು. ಯಕ್ಷಗಾನಕ್ಕೊಂದು ಶೈಲಿಯೂ, ಅಭಿವ್ಯಕ್ತಿ ಮಾರ್ಗವೂ, ತಂತ್ರವೂ ಇವೆ. ಇವುಗಳನ್ನು ಬಲ್ಲ ವಿಮರ್ಶಕನು, ಕಲಾವಿಮರ್ಶೆಯ ಸಾಮಾನ್ಯ ತತ್ತ್ವಗಳಿಗೆ, ಯಕ್ಷಗಾನ ಪ್ರಕಾರದ ವೈಶಿಷ್ಟ್ಯಗಳನ್ನು ಸಮನ್ವಯಗೊಳಿಸಿ ತನ್ನ ಕೆಲಸವನ್ನು ಮಾಡುವುದು ಅಗತ್ಯ.
ಯಕ್ಷಗಾನ ವಿಮರ್ಶೆಯು, ಶೈಲಿನಿನಿಷ್ಠ ಮತ್ತು ರೂಪನಿಷ್ಠ ವಿಮರ್ಶೆಯಾಗುವುದು ಆವಶ್ಯಕ. ಯಕ್ಷಗಾನ ಪ್ರದರ್ಶನವೊಂದರಲ್ಲಿ ಕಲಾಕೃತಿಯ ವಿಮರ್ಶೆಗೆ ಶೈಲಿಯೇ ಔಚಿತ್ಯದ ಮೂಲ ಪಂಚಾಂಗ, ಶೈಲಿಯನ್ನು, ಕಲಾಭಾಷೆಯನ್ನು ಗೌರವಿಸದ ವಿಮರ್ಶೆ ಈ ಕಲೆಗೆ ಪ್ರಯೋಜನಕಾರಿಯಾಗದು. ಪ್ರಯೋಗಶೀಲತೆ, ನಾವೀನ್ಯಗಳನ್ನು ವಿಮರ್ಶೆಯು ಕಡೆಗಣಿಸಬೇಕೆಂದಿಲ್ಲ. ಆದರೆ ಪ್ರಯೋಗದ ಅನ್ವಯವು ಶೈಲಿಬದ್ಧವಾಗಿದೆಯೇ, ಅಥವಾ ಓರ್ವನು ಶೈಲಿಯನ್ನು ಬದಲಿಸಿದ್ದರೆ, ಅದು ಯಕ್ಷಗಾನದ ಶ್ರೀಮಂತಿಕೆಗೆ, ಶೈಲಿಯ ವಿಸ್ತಾರಕ್ಕೆ ಕಾರಣವಾಗಿದೆಯೇ? ಎಂಬ ಪ್ರಶ್ನೆಗಳು ಅಷ್ಟೇ ಮುಖ್ಯವಾಗಿ ಪರಿಶೀಲನಾರ್ಹ.
ಅರ್ಥಗಾರಿಕೆಯ ವಿಮರ್ಶೆಯು ಸೂಕ್ಷ್ಮವಾದ ಪರಿಶೀಲನೆಯನ್ನು ಅಪೇಕ್ಷಿಸುವ ವಿಭಾಗ, ಪ್ರಸಂಗದ ಪದ್ಯಗಳ ಸಡಿಲವಾದ ಚೌಕಟ್ಟು, ಮಾತುಗಳ ಮೂಲಕ ಒಂದು

• ಡಾ. ಎಂ. ಪ್ರಭಾಕರ ಜೋಶಿ