ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

149

ಮಾಡಿಕೊಡುವ ಕೆಲಸ, ವಿಮರ್ಶೆಗೆ ಬೇಕಾದ ಹಿನ್ನೆಲೆಯನ್ನು ಒದಗಿಸಬಲ್ಲುದು. ಇಂತಹ ಕೆಲಸ ಅಗತ್ಯವಾಗಿ ಆಗಬೇಕಾಗಿದೆ.
ಯಕ್ಷಗಾನ ಪ್ರಸಂಗ ಸಾಹಿತ್ಯ, ದೊಡ್ಡ ಪ್ರಮಾಣದಲ್ಲಿದೆ. ಪ್ರಕಟಿತ, ಅಪ್ರಕಟಿತ ಪ್ರಸಂಗಗಳ ಸಂಖ್ಯೆ ಸುಮಾರು ಎರಡು ಸಾವಿರದಷ್ಟು ಇರಬಹುದು. ಇವುಗಳನ್ನು ಕ್ರಮವಾಗಿ ಪರಿಚಯಿಸುವ ಕೆಲಸವೂ ಆಗಬೇಕು.
ಕಲಾವಿದನ ಅನಿಸಿಕೆ
ಕಲೆಯ ಬಗೆಗೆ ಪ್ರೇಕ್ಷಕನ, ಕಲಾವಿದನ ಅನಿಸಿಕೆಯೂ ಮುಖ್ಯ. ಕಲಾತಂಡಗಳ, ಮೇಳಗಳ, ಸಂಘಟಕರ, ಸಂಚಾಲಕರ, ಅಭಿಪ್ರಾಯವೂ ಮಹತ್ವದ್ದು. ಈ ರಂಗದ ಆಗುಹೋಗುಗಳ, ಸಮಸ್ಯೆಗಳ ಕುರಿತು ಇವರೆಲ್ಲರ ಅನಿಸಿಕೆ, ವಿಮರ್ಶೆ, ಮರುವಿಮರ್ಶೆಗಳ ಮಂಥನ ನಡೆಯಬೇಕು. ಕಲಾರಂಗದ ಒಳಗಿರುವ ವ್ಯಕ್ತಿಗಳಿಗೂ, ಪ್ರೇಕ್ಷಕರಿಗೂ, ಸೂಕ್ತ ಸಂವಾದವೊಂದು ಏರ್ಪಡಬೇಕು. ಅದಕ್ಕೊಂದು ವೇದಿಕೆ ಸಿದ್ಧವಾಗಬೇಕು.
ಸದ್ಯದ ವಿಮರ್ಶೆ, ವಿಚಾರ ಗೋಷ್ಠಿಗಳ ಅಭಿಮತವು ಕಲಾವಿದರನ್ನು, ಸಂಘಟಕರನ್ನು ತಲಪುತ್ತಿಲ್ಲ. ವಿಮರ್ಶೆ ವಿಮರ್ಶಕರಿಗಾಗಿ ಎಂಬಂತಾಗಿದೆ. ಈ ಸ್ಥಿತಿ ಬದಲಾಗಿ ವಿಮರ್ಶೆ, ಸಂಬಂಧಿತರಾದ ಎಲ್ಲರನ್ನೂ ಒಳಗೊಳ್ಳಬೇಕು.
ಪರಿಚಯ ಬರಹಗಳು
ಕಲಾವಿದರ ಪರಿಚಯವನ್ನು ನೀಡುವ ಬರಹ, ಕಲಾವಿದರಿಗೆ ಸಾರ್ಥಕ್ಯವನ್ನೂ, ರಸಿಕನಿಗೆ ಮಾಹಿತಿಯನ್ನೂ ನೀಡುವ ಕೆಲಸ ಮಾಡುತ್ತದೆ. ಕಲಾವಿದನ ಸಿದ್ಧಿ ಸಾಧನೆಗಳ ಪರಿಚಯ ಮೂಲಕ ಅಭಿರುಚಿ ನಿರ್ಮಾಣವೂ ಜರಗುತ್ತದೆ. ಪ್ರಸಾರಕ್ಕೂ ಕಾರಣವಾಗುತ್ತದೆ.
ಮಾಹಿತಿ, ಸುದ್ದಿ
ಕಲಾರಂಗದ ಆಗುಹೋಗುಗಳ, ಪ್ರದರ್ಶನದ ಸುದ್ದಿಗಳು, ವಿವಿಧ ವಿದ್ಯಮಾನಗಳು, ಇವು ಕಲಾಸಕ್ತಿಯನ್ನು ಜೀವಂತವಾಗಿರಿಸುವುದಕ್ಕೂ, ದಾಖಲಾತಿಗೂ ಅತ್ಯಗತ್ಯ. ಸದ್ಯ ಯಕ್ಷಗಾನ ರಂಗದ ವಿದ್ಯಮಾನಗಳ ಬಗೆಗೆ ಮಾಹಿತಿಯ ಕೊರತೆ ತುಂಬ ಇದೆ. ಚಿತ್ರರಂಗದಂತಹ ಮಾಧ್ಯಮದ ಬಗೆಗೆ ಸುದ್ದಿಗಳ ಮಹಾಪೂರವೇ ಹರಿಯುತ್ತಿದೆ.

ಡಾ. ಎಂ. ಪ್ರಭಾಕರ ಜೋಶಿ