ಮುಡಿ
ಪರಂಪರೆಯ ಆಕಾಂಕ್ಷೆಗಳ ದೃಷ್ಟಿ "ವಂಶವಾಹಿನಿ"ಯಲ್ಲಿದೆ. ಭೂಮಿಯ ಮಗನ ದ್ವಂದ್ವ,
ದುರಂತಗಳ ಕಥೆ ಭೌಮಾಸುರ, ದಕ್ಷಿಣೋತ್ತರ ಸಮನ್ವಯದ ಚಾರಿತ್ರಿಕ ಕತೆ ಚಾಲುಕ್ಯ
ಚಕ್ರೇಶ್ವರ, ಜಗತ್ತಿನ ಆಧ್ಯಾತ್ಮಿಕತೆ, ನಾಟ್ಯತತ್ವದ ಜೀವನ ಸಂಕೇತ ಮತ್ತು ಅಂಧಕಾರದ
ನಾಶದ ಆಶಯ "ಅಂಧಕ ಮೋಕ್ಷ". ಭಕ್ತಿ ಯುಗದ ಸರಳ ಆಶಯಗಳ ಪುನರಾವರ್ತನೆ,
ಪವಾಡ ಮಹಿಮೆಗಳ ಕೀರ್ತನೆ ಮತ್ತು ಕಥಾಕಥನದಲ್ಲಿ ಸ್ಥಗಿತವಾಗಿದ್ದ ಪ್ರಸಂಗ ಸಾಹಿತ್ಯವನ್ನು,
ಆಧುನಿಕ ಮನುಷ್ಯನ ಮನಸ್ಸಿನ ಸ್ಪಂದನವನ್ನಾಗಿ ರೂಪಿಸುವಲ್ಲಿ ಅಮೃತರು ದೊಡ್ಡ
ರೀತಿಯಲ್ಲಿ ಪ್ರವೃತ್ತರಾಗಿದ್ದಾರೆ.
'ಕಾಯಕಲ್ಪ' ಎಂಬುದು ಲೇಖಕರ ಯಕ್ಷಗಾನ ದೃಷ್ಟಿಯ ಕೇಂದ್ರ ಆಶಯವನ್ನು
ಪ್ರತಿನಿಧಿಸುತ್ತದೆ. ಯಕ್ಷಗಾನಕ್ಕೂ ನಮ್ಮ ಸಮಾಜಕ್ಕೂ ಅಪೇಕ್ಷಿತವಾದ ಕಾಯಕಲ್ಪ ಹೇಗೆ
ಎಂಬ ಚಿಂತನೆ ಇಲ್ಲಿದೆ. ಈ ದೃಷ್ಟಿಯಿಂದ ಈ ಪ್ರಸಂಗ ಸಂಪುಟಕ್ಕೆ "ಕಾಯಕಲ್ಪ" ಎಂದು
ಹೆಸರಿಡಬಹುದಾಗಿತ್ತು. ಭೂಮಿಯ ಮಗನು, ಜನಕ-ಜನನಿಯರ ಸ್ವಭಾವದಿಂದ ದೂರವಾಗಿ,
ತಮೋಗುಣದಿಂದ ಬೆಳೆದು, ತನ್ನ ದುರಂತಕ್ಕಾಗಿ ನೊಂದು ಬೇಯುವ, ಮನುಷ್ಯ ಜನಾಂಗದ
ಮನೋರಂಗವನ್ನೇ ಪ್ರಸಂಗ ರೂಪದಲ್ಲಿ ನೀಡುವ "ಭೌಮಾಸುರ" ಬಹುಶಃ ಈ ಸಂಪುಟದ
ಅತ್ಯುತ್ತಮ ರಚನೆ, ಮಹತ್ವಾಕಾಂಕ್ಷೆ, ಅತಿ ಭೌತಿಕತೆಗಳ ವಿರುದ್ಧ ಎಚ್ಚರದ ಪ್ರಜ್ಞೆಯನ್ನು
ಕೆಣಕುವ "ತ್ರಿಪುರ ಮಥನ", "ಮಗಧೇಂದ್ರ" ಇವೂ ಇದೇ ಸಾಲಿನಲ್ಲಿ ಬರುವ ರಚನೆಗಳು.
ನಾಟ್ಯತತ್ವ - ಜೀವನ ತತ್ವಗಳು ಸಮನ್ವಯದ ನೆಲೆಯಲ್ಲಿ ಕಥಾ ವಸ್ತುವನ್ನು ಬೆಳೆಸುವ
"ಅಂಧಕ ಮೋಕ್ಷ" ಒಂದು ಪ್ರತ್ಯೇಕ ರೀತಿಯ ರಚನೆ.
ಇಡಿಯ ಪ್ರಸಂಗ ಸಂಪುಟದಲ್ಲಿ ಎದ್ದು ಕಾಣುವ ಒಂದು ವಿಷಯ ಅಮೃತರ
ಭಾಷಾಸಿದ್ಧಿ, ಭಾವಗೀತಾತ್ಮಕತೆಯಿಂದ ತುಂಬಿ, ಅತಿ ಸಹಜವಾಗಿ ಮೂಡಿಬರುವ ಅಮೃತರ
ಗೀತೆಗಳು, ಪ್ರಸಂಗ ಸಾಹಿತ್ಯ ಕ್ಷೇತ್ರದ ಅತ್ಯುತ್ತಮಗಳ ಪೈಕಿ ಸಲ್ಲುತ್ತವೆ. ಪ್ರಾಸ, ಬಂಧಗಳಲ್ಲಿ
ಕೃತಕತೆಯಿಲ್ಲ. ಯಕ್ಷಗಾನದ ವಿವಿಧ ಛಂದೋ ಬಂಧಗಳನ್ನು ಹದವತು ಬಳಸಲಾಗಿದೆ.
ಹಾಡುವಿಕೆಗೆ ಒಗ್ಗುವ ಬರಹಗಳಿವು. ಕವಿ, ಯಕ್ಷಗಾನದ ಪರಂಪರೆಯನ್ನು ಸರಿಯಾಗಿ
ಜೀರ್ಣಿಸಿಕೊಂಡದ್ದೂ ಅವರ ಬಹುಶ್ರುತತ್ವವೂ ಇಲ್ಲಿ ವ್ಯಕ್ತವಾಗಿವೆ. ಯಕ್ಷಗಾನಕ್ಕೆ ಹೊಸ
ಬಗೆಯ ಗೀತೆಗಳ ಕೊಡುಗೆಯೂ ಇಲ್ಲಿದೆ. (ಉದಾ: ವರುಣ ಪೂಜೆ, ಜಲ ಕೇಳಿ ಪದ್ಯಗಳು)
ಅನಿವಾರ್ಯವಾಗಿ ಪುನಃ ಪುನಃ ಆಗುವ ಯುದ್ಧ, ಪ್ರಣಯ, ದೂತನ ಸಂದೇಶ ಇಂತಹ
ಕಡೆ ಕೂಡ ಸಾಕಷ್ಟು ವೈವಿಧ್ಯವನ್ನು ತಂದಿದ್ದಾರೆ. ಕಥಾ ಸಂವಿಧಾನದಲ್ಲೂ ಪಾತ್ರ
ಕಲ್ಪನೆಯಲ್ಲೂ ನಾವೀನ್ಯದ ಯಶಸ್ವಿ ಯತ್ನಗಳು ಸಂಪುಟದ ಉದ್ದಕ್ಕೂ ಕಂಡುಬರುತ್ತವೆ.