ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಮರ್ಶಕ ಪ್ರಜ್ಞೆಯ ಕಟ್ಟೆಚ್ಚರದ ಕಾವಲೂ ಬೇಕು. ಈ ಎಚ್ಚರವನ್ನು ಬಹಳ ಕಾಲದಿಂದ ಇರಿಸಿಕೊಂಡು ಬಂದವರು ಡಾ. ಜೋಶಿ ಅವರು.

ಒಂದು ಕಾಲದಲ್ಲಿ, ಯಕ್ಷಗಾನದಂಥ ವಿಚಾರದಲ್ಲಿ ಅಧ್ಯಯನ, ಸಂಶೋಧನೆ ನಡೆಸತಕ್ಕದ್ದೇನಿದೆ? ಪಿಹೆಚ್.ಡಿ.ಯಂಥ ಉನ್ನತ ಅಧ್ಯಯನಕ್ಕೆ ವಿಷಯ ಆ ಕ್ಷೇತ್ರದಲ್ಲಿ ಇದ್ದೀತೆ? ಎಂಬ ಸಂದೇಹ ಮತ್ತು ಅಜ್ಞಾನ ಹಲವ ರಲ್ಲಿತ್ತು. ಈಗಲೂ ಈ ಅವಜ್ಞೆ ಪೂರ್ತಿಯಾಗಿ ತೊಲಗಿದೆ ಎನ್ನುವಂತಿಲ್ಲ. ಆದರೆ ನಿಜವಾದ ಜಿಜ್ಞಾಸುವಿಗೆ ಸಮಾಧಾನ ನೀಡುವಷ್ಟು ಅಧ್ಯಯನ ಕೃತಿಗಳು ಈ ಸಂಬಂಧವಾಗಿ ಲಭ್ಯವಾಗುತ್ತವೆ. ಮುಳಿಯ ತಿಮ್ಮಪ್ಪಯ್ಯನವರ 'ಪಾರ್ತಿಸುಬ್ಬ' ಕೃತಿಯ ಮೂಲಕ ತೊಡಗಿದ ಯಕ್ಷಗಾನ ಸಂಶೋಧನೆ ಹಾಗೂ ವಿವೇಚನೆ ಇತ್ತೀಚೆಗಿನ ವರ್ಷಗಳಲ್ಲಿ ಸಾಕಷ್ಟು ಸಶಕ್ತವಾಗಿ ಬೆಳೆಯು ತ್ತಿರುವುದನ್ನು ಕಾಣುತ್ತೇವೆ. ಯಕ್ಷಗಾನ ರಂಗಪಠ್ಯ ಸಾಮಗ್ರಿಯಾದ ಪ್ರಸಂಗ ಸಾಹಿತ್ಯವೂ ವಿಪುಲವಾಗಿ ಸೃಷ್ಟಿಯಾಗುತ್ತಿರುವುದನ್ನು ಕಾಣುತ್ತೇವೆ. ವ್ಯಾಪಾರೀ ಕರಣವೂ, ಇನ್ನಿತರ ವಿದ್ಯಮಾನಗಳೂ ಯಕ್ಷಗಾನವನ್ನು ಸಂಕ್ರಾಂತ ಸ್ಥಿತಿಗೆ ತಂದು ನಿಲ್ಲಿಸಿದ್ದನ್ನು ಕಾಣುತ್ತೇವೆ. ಇಂಥ ಸಂದರ್ಭದಲ್ಲಿ ಕಲೆಯ ವಿಮರ್ಶೆ ಹೆಚ್ಚು ಕ್ರಿಯಾಶಾಲಿಯೂ ಪ್ರಸ್ತುತವೂ ಆಗಬಲ್ಲುದು. ಡಾ. ಜೋಶಿ ಯವರಂತೂ ಯಕ್ಷಗಾನ ವಿಮರ್ಶೆಯನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಯಕ್ಷಗಾನರಂಗಕ್ಕೆ ಸಂಬಂಧಿಸಿದ ಅದೆಷ್ಟೋ ವಿಚಾರಗಳನ್ನು ಅವರು ಮಥಿಸಿ ವಿಚಾರಮಂಡನೆ ಮಾಡಿದ್ದರೂ ಇನ್ನೂ ಸಾಕಷ್ಟು ವಿಚಾರಗಳನ್ನು ಮನನ ಮಾಡಲಿದೆ ಎಂಬ ಸತ್ಯವನ್ನು ಅವರು ತಿಳಿದಿದ್ದಾರೆ. ಆ ತಿಳಿವಿನೊಂದಿಗೆ ಅವರು ಗ್ರಂಥದಿಂದ ಗ್ರಂಥಕ್ಕೆ ಬಳೆದು ನಿಂತಿದ್ದಾರೆ.

ಪ್ರಸ್ತುತ ಗ್ರಂಥದಲ್ಲಿರುವ ಲೇಖನಗಳು ಮುಖ್ಯವಾಗಿ ಯಕ್ಷಗಾನದ ವಾಚಿಕಾಭಿನಯ, ಯಕ್ಷಗಾನ ತಾಳಮದ್ದಳೆಯ ರಂಗಸ್ವರೂಪ, ಯಕ್ಷಗಾನ ಪ್ರಸಂಗ ಸಾಹಿತ್ಯದ ತಾತ್ತ್ವಿಕತೆ ಹೀಗೆ ಕಲಾಮೀಮಾಂಸೆಯ ಹಿನ್ನೆಲೆಯಲ್ಲಿ ರೂಪುಗೊಂಡಿವೆ. ಎಲ್ಲೂ ಅನವಶ್ಯಕವಾಗಿ ಭಾವುಕರಾಗದೆ, ಅತ್ಯಂತ ಸಂಯಮ ಮತ್ತು ಚಿಕಿತ್ಸಕ ದೃಷ್ಟಿಯಿಂದ ಶಾಸ್ತ್ರೀಯವಾಗಿ, ತರ್ಕಶುದ್ಧವಾಗಿ ವಿಷಯಗಳನ್ನು ವಿವೇಚನೆಗೆ ಒಳಪಡಿಸಿದ್ದಾರೆ.

ತಾಳಮದ್ದಳೆ ಎಂಬ ರಂಗಪ್ರಕಾರ ಲೇಖಕರ ಖಾಸಾ ಕ್ಷೇತ್ರವಾದುದರಿಂದ ಅದರ ಎಲ್ಲ ಸೂಕ್ಷ್ಮತೆಗಳನ್ನು ಅವರು ಕಂಡಿದ್ದಾರೆ. ಕಂಡರಿಸಿದ್ದಾರೆ.