೧೪ / ವಾಗರ್ಥ
ಸಾಂಪ್ರದಾಯಿಕವಾಗಿ, ಒಂದು ಸರ್ವವ್ಯಾಪಿ, ಸರ್ವಂಭರಿ ಪಾತ್ರ. ಹೊಗಳಿಕೆ ದೂತ (ಇದೊಂದೆ ನಿಶ್ಚಿತ, ಗಂಭೀರ ಸಾಹಿತ್ಯವುಳ್ಳ ಪಾತ್ರ), ಬಾಗಿಲ ದೂತ, ಡಂಗುರದೂತ, ಕುದುರೆದೂತ, ಓಲೆದೂತ, ಗಡಿಬಿಡಿ ದೂತ, ಸಂದೇಶಚರ, ಸಖ, ಮಂತ್ರಿ, ಮುದಿಯಪ್ಪಣ್ಣ (ಹಿರಿಯ ಕಿರಾತ), ಪುರೋಹಿತ, ಮಂತ್ರವಾದಿ, ಋಷಿ, ವೈದ್ಯ, ಗೂಢಚಾರ, ವ್ಯಾಪಾರಿ, ದಾರಿಹೋಕ, ಅಪಶಕುನ, ಹಾಸ್ಯ, ಕೊರವಂಜಿ, ಮಕರಂದ, ಹಕ್ಕಿ ಶಕುನಗಾರ, ನಾರದ, ಮಂಥರೆ ಮೊದಲಾದ ಹಲವು ಪಾತ್ರಗಳಲ್ಲಿ ಆತನು ಕಾಣಿಸಿಕೊಳ್ಳುತ್ತಾನೆ. ಹಲವು 'ರೂಪಗಳಲ್ಲಿ, ಹಲವು ಮಟ್ಟ ಗಳಲ್ಲಿ ವ್ಯವಹರಿಸುವ ಈ ಹಾಸ್ಯಗಾರ (ಹನುಮನಾಯಕ)ನು ಒಬ್ಬ ವ್ಯಕ್ತಿಯಲ್ಲ. ಅವನೊಬ್ಬ ಶಕ್ತಿಕೇಂದ್ರ. ಅವನು ಕಥಾಪಾತ್ರವಷ್ಟೆ ಅಲ್ಲ. ಹಾಗಾಗಿ ಅವನ ಮಾತುಗಾರಿಕೆ, ನಿರ್ದೇಶನದ, ರಂಗತಂತ್ರದ ಭಾಗವೂ ಹೌದು. ಆತನ ಮಾತಿನ ವಿನೋದಕ್ಕೆ ಒಳಗಾಗದವರಿಲ್ಲ. ರಾಜರನ್ನು, ದೇವ-ದೇವತೆಗಳನ್ನೂ ಆತನು ತಮಾಷೆ ಮಾಡುತ್ತ ತನ್ನನ್ನೂ ತಮಾಷೆ ಮಾಡಿಕೊಳ್ಳುತ್ತಾನೆ. ಅವನು ಮಾಡುವ ವಿನೋದ, ಪುರಾಣ ವಿಮರ್ಶೆ, ಪುರಾಣ ಭಂಜನೆಗಳ ಮುಖವಾಣಿಯೂ ಆಗಿರುತ್ತ, ಆತನು ಪ್ರೇಕ್ಷಕ ಪ್ರತಿನಿಧಿಯೂ ಆಗಿರುತ್ತಾನೆ. ಆತನ ಶೈಲಿಯೂ ಆತನ ಸ್ವಾತಂತ್ರ್ಯಕ್ಕನು ಗುಣವಾಗಿ ಮುಕ್ತ. ಹಾಸ್ಯಗಾರನ ಮಾತುಗಳ ಔಚಿತ್ಯ ನಿರ್ಣಯಕ್ಕೆ ಮಾನದಂಡವೂ ಬೇರೆ.
ಹಾಸ್ಯಗಾರನು ಪದ್ಯದ ಅರ್ಥವನ್ನು ಹೇಳುವಾಗ, ಅಥವಾ ಪದ್ಯ ವಿಲ್ಲದೆ ಸನ್ನಿವೇಶವನ್ನಾಧರಿಸಿ ಮಾತಾಡುವಾಗ, ಪದ್ಯದಿಂದ, ಕತೆಯಿಂದ 'ಹೊರಗೆ' ಜಿಗಿಯುತ್ತ ಇರುತ್ತಾನೆ. ವಿಷಯವನ್ನು ಬೆಳೆಸುತ್ತಾನೆ. ಪದ್ಯ, ಪದ, ಸನ್ನಿವೇಶಗಳಿಗೆ ರಂಜನಾತ್ಮಕ, ವಿಮರ್ಶಾತ್ಮಕ ಅಪವ್ಯಾಖ್ಯಾನ ಗಳನ್ನು ಮಾಡುತ್ತಾನೆ. ಸಮಕಾಲೀನತೆ, ಪ್ರಾದೇಶಿಕತೆ, ಜಾನಪದೀಯತೆ ಆತನ ಮಾತುಗಳಲ್ಲಿ ಓತಪ್ರೋತ, ಅನಂತಮುಖಗಳ ಮಾತುಗಾರಿಕೆಯ ಸಾಮರ್ಥ್ಯ, ಅಸಾಮಾನ್ಯ ಪ್ರತ್ಯುತ್ಪನ್ನಮತಿ, ತುಂಟ ಪ್ರತಿಭೆ, ವಿಷಯ ಸಂಗ್ರಹ, ವಿವಿಧ ರೀತಿಯ ಭಾಷಾಶೈಲಿಗಳಲ್ಲಿ ಪ್ರಾವೀಣ್ಯ, ರಂಜ ನಾತ್ಮಕತೆಗಳು ಹಾಸ್ಯಗಾರನಲ್ಲಿ ನಿರೀಕ್ಷಿತ ಗುಣಗಳು, ಆತನ ಹಾಸ್ಯವು ಸಫಲವಾಗಿ ರೂಪುಗೊಳ್ಳಬೇಕಾದರೆ, ಭಾಗವತನ, ಸಹಕಲಾವಿದನ ಸಹಕಾರ ಬಹು ಮುಖ್ಯ. ಹಾಸ್ಯಗಾರನ ಹಾಸ್ಯವು ಹೊರಹೊಮ್ಮುವಂತೆ ಆತನಲ್ಲಿ ಸಂವಾದಿಸುವುದಕ್ಕೆ 'ಹಾಸ್ಯವನ್ನು ಮಾತಾಡಿಸುವುದು' ಎಂದು ಹೆಸರು.