ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನದ ವಾಚಿಕಾಭಿನಯ : ಅಭಿವ್ಯಕ್ತಿ ಮತ್ತು ತಂತ್ರ / ೧೯


ವ್ಯಕ್ತವಾಗುತ್ತಿರುತ್ತದೆ. ವೇದಕಾಲದಿಂದ ತೊಡಗಿ, ಇಂದಿನ ಒಂದು ಪ್ರೇರಣೆಯ ತನಕ, ಭಕ್ತಿಯುಗದ ರಚನೆಗಳಿಂದ ತೊಡಗಿ, ಆಧುನಿಕ ಸಾಹಿತ್ಯದ ತನಕ ಅದರ ದ್ರವ್ಯದ ಹಾಸುಬೀಸುಗಳಿರುತ್ತವೆ. ಅರ್ಥಗಾರಿಕೆ ಸಂಸ್ಕೃತಿಯ ಈ ಹಂತಗಳನ್ನು ಸಲೀಸಾಗಿ ದಾಟುತ್ತ, ಬೆಸೆಯುತ್ತ ಪ್ರಸ್ತುತಪಡಿಸುತ್ತದೆ. ಶಿಷ್ಟ-ಜಾನಪದ, ಪ್ರಾಚೀನ-ಸಮಕಾಲೀನ, ಪ್ರೌಢ- ಸರಳ, ಪುರಾಣ-ತರ್ಕ, ಕಲ್ಪನೆ-ಚಿಂತನೆಗಳು ಇಲ್ಲಿ ಒಂದಡೆ ಸೇರುತ್ತವೆ. ಒಂದರೊಡನೊಂದು ತಾಕಲಾಡುತ್ತವೆ. ಭಾರತೀಯ ಸಂಸ್ಕೃತಿಯ ಬಹುತ್ವದ ವಿವಿಧ ಪದರುಗಳ ಪ್ರಸ್ತುತೀಕರಣವು ಯಕ್ಷಗಾನ ಮಾತು ಗಾರಿಕೆಯ ಒಂದು ವಿಶಿಷ್ಟ ಲಕ್ಷಣವಾಗದೆ, ಯಾವುದೇ ಸಾಹಿತ್ಯದಲ್ಲಿ, ವಾಙ್ಮಯದಲ್ಲಿ ಇದು ಉಂಟಲ್ಲವೆ? ಎನ್ನಬಹುದು. ಆದರೆ ಇದು ಹಾಗಲ್ಲ, ಆಶುಭಾಷಣವೂ, ಪೂರ್ವನಿಯೋಜಿತವಲ್ಲದ ಕವಲುದಾರಿ ಗಳೂ, ವಾದಗಳೂ, ಇದರ ಮುಕ್ತಶೈಲಿಯ (freestyle) ಮಾತಿನಲ್ಲಿ ಅಂತರ್ಗತವಾಗಿರುವುದರಿಂದ, ಉಕ್ತ ಲಕ್ಷಣಕ್ಕೆ ಪ್ರಕರ್ಷ.

ಯಕ್ಷಗಾನದ ಭಾಷೆ, ಶೈಲಿಗಳು ಪೌರಾಣಿಕ, ಶೈಲೀಕೃತ, ಗಂಭೀರ ತುಸು ಹಿಂದಿನ ಅನ್ನಬಹುದಾದ ಸ್ವರೂಪದ್ದಾದರೂ, ಅದರೊಂದಿಗೆ ಆಶ್ಚರ್ಯಕರವಾಗಿ ಸಮಕಾಲೀನ, ಲಘುವಾದ, ಅ-ಶಿಷ್ಟವಾದ ಅಂಶ ಗಳೂ ಸೊಗಸಾಗಿ ಬೆರೆತುಕೊಂಡಿರುತ್ತವೆ. ಒಂದು ಸಂಸ್ಕೃತ ಶ್ಲೋಕ ದೊಂದಿಗೆ ಒಂದು ತೀರ ಸ್ಥಳೀಯವಾದ, ಜನಪದ ಸಂವೇದನೆಯ ಗಾಥೆಯು ಮಾತಿನಲ್ಲಿ ಬರುತ್ತದೆ. ಭಾಷೆ ಗ್ರಾಂಥಿಕವಾದರೂ, ವಿಭಕ್ತಿ ಪ್ರತ್ಯಯ, ಕ್ರಿಯಾಪದ ರೂಪ ಆಡುಮಾತಿನದಾಗಿರುತ್ತದೆ. ವಿಭಿನ್ನ ವಿರುದ್ಧ ಅಂಶಗಳ, ಆಕರಗಳ, ಚಿಂತನಗಳ, ಪ್ರತಿಭೆಗಳ ತಾಕಲಾಟವು ಯಕ್ಷಗಾನ ಅರ್ಥಗಾರಿಕೆಯ ಸ್ಥಿರ ಅಂಶ.

೧೩

ಅರ್ಥಗಾರಿಕೆಯ ಸ್ವರೂಪದಲ್ಲಿ ಇರುವ ಎರಡು ವಿರೋಧಾಭಾಸ (paradox)ಗಳೆಂದರೆ, ಕಲಾವಿದ ಆಧಾರಿತ ಅಸಮತೋಲ ಮತ್ತು ಪಾತ್ರಧಾರಿಯು 'ಕಥೆಯ ಹೊರಗೆ' ಹೋಗುವುದು. ಪ್ರದರ್ಶನದಲ್ಲಿ ಕಥೆಯ. ಪಾತ್ರಗಳ ಸ್ಥಾನಾನುಸಾರ ಅಸಮಾನತೆ, ಅಸಮತೋಲವು ಸ್ವಾಭಾವಿಕವಷ್ಟೆ. ಆದರೆ, ಕಲಾವಿದನೊಬ್ಬನು ಸಮರ್ಥನಾದರೆ, ಅಥವಾ ಉಳಿದವರು ಹಾಗಿಲ್ಲವಾದರೆ, ಅಥವಾ ಅಭಿವ್ಯಕ್ತಿ ಮಾರ್ಗದಲ್ಲಿ ವ್ಯತ್ಯಾಸ