ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆ : ಕೆಲವು ಗ್ರಹಿಕೆಗಳು / ೨೫

ಹೀಗೆ, ಇರಲಿ.) ಇದೇ ಈ ಮೊದಲ ಹಂತದ ರೂಪಾಂತರವೇ ಅರ್ಥ ಹೇಳುವವನ (ಅಂದರೆ ಪಾತ್ರವಾಗಿ ಮಾತಾಡುವವನ) ಮೇಲೆ ಒಂದು ನಿಯಂತ್ರಣವನ್ನೂ, ಪ್ರಚೋದನೆಯನ್ನೂ ಏಕಕಾಲದಲ್ಲಿ ಒದಗಿಸುತ್ತದೆ. ಮತ್ತು ಹಿಮ್ಮೇಳಕ್ಕೆ ಸಂವೇದನಾಶೀಲನಾಗಿ ಮಾತನಾಡುವ ಅರ್ಥಧಾರಿ ಯಾದರೆ, ಅವನ ಮಾತುಗಾರಿಕೆಯ ಒಟ್ಟು ರೂಪದ ಮೇಲೆ ಪರಿಣಾಮ ಬೀರುತ್ತದೆ.
ಹಾಡು ಮುಗಿದ ಬಳಿಕ ಮಾತು. ಇದು ಸ್ವಗತ ಯಾ ಸಂಭಾಷಣಾ ರೂಪದ್ದು. ವಿವಿಧ ರಸಗಳಲ್ಲಿ ಇರುವಂತಹದು. ಇಲ್ಲಿ ತೀರ ಸರಳ ವಾಗಿರುವ ಪ್ರಸಂಗದ ಹಾಡುಗಳು, ಮಾತುಗಾರನ ಕೈಯಲ್ಲಿ ಊಹಾತೀತ ವಿಸ್ತಾರವನ್ನೂ, ವೈವಿಧ್ಯವನ್ನೂ ಪಡೆಯುತ್ತವೆ. ಇದು ಕಲಾವಿದನ ಅಭ್ಯಾಸ, ಸಂಸ್ಕಾರ, ಪಾಂಡಿತ್ಯ, ಪ್ರತಿಭೆಗಳಿಗೆ ಸಂಬಂಧಿಸಿದ್ದು. ಅಂದರೆ:

ಹೀಗೆ ವಸ್ತುವು ಐದು ಹಂತಗಳಲ್ಲಿ ವ್ಯತ್ಯಾಸಗೊಳ್ಳುತ್ತ ಹೋಗುತ್ತದೆ. ಇಲ್ಲಿ ಮೂಲದ ಪ್ರಸಂಗವೊಂದೇ ಸ್ಥಾಯೀ (static) ಅಂಶ, ಉಳಿದವು ಚಲನಶೀಲ (dynamic) ಅಂಶಗಳು. ಪ್ರದರ್ಶನದ ಗುಣಮಟ್ಟ ಆ ದಿನದ ಕಲಾವಿದರ ಯೋಗ್ಯತೆ, ಮನೋಧರ್ಮ, ಪ್ರೇಕ್ಷಕ ಪ್ರತಿಕ್ರಿಯೆ ಮುಂತಾದವುಗಳನ್ನು ಹೊಂದಿಕೊಂಡಿದೆ. ಅದಂತಿದ್ದರೂ, ಒಂದೊಂದು ಪ್ರದರ್ಶನದ ಮಾತುಗಾರಿಕೆಯೂ ಒಂದೊಂದು ಪ್ರತ್ಯೇಕ 'ಪಠ್ಯ'ವೇ ಆಗುತ್ತದೆ. ಒಂದು. 'ಕೃಷ್ಣ ಸಂಧಾನ' ಪ್ರಸಂಗ ಹತ್ತು ಬಾರಿ, ಅದೇ ಕಲಾವಿದರು, ಅದೇ ರೀತಿಯ ಪಾತ್ರ ವಿತರಣೆ ಮಾಡಿ ಪ್ರದರ್ಶಿಸಿದರೂ ಹತ್ತು ಪಠ್ಯಗಳಾದಾವು. ಪಾತ್ರ ವಿತರಣೆ ಬದಲು ಮಾಡಿದರೆ ಇನ್ನಷ್ಟು ಭಿನ್ನ ಪಠ್ಯಗಳು, ಕಲಾವಿದರು ಬದಲಾದರೆ ಮತ್ತಷ್ಟು ವೈವಿಧ್ಯಮಯ ಪಠ್ಯಗಳಾಗುತ್ತವೆ. ಮತ್ತು ಇವು ಒಂದೊಂದೂ ಸ್ವತಂತ್ರವಾಗಿಯೂ, ತುಲನಾತ್ಮಕವಾಗಿಯೂ ಅಭ್ಯಾಸಕ್ಕೆ ಒದಗುತ್ತವೆ ಎಂದರೆ ಇಲ್ಲಿಯ ವಿಮರ್ಶೆಯ ವಿಸ್ತಾರದ ಕಲ್ಪನೆ ದೊರೆಯಬಹುದು.