ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦ / ವಾಗರ್ಥ

ತಾಳಮದ್ದಳೆಯ (ಅಂತೆಯೇ ಆಟದ) ಮಾತುಗಾರಿಕೆ ಸಾಧಿಸುವ ಇನ್ನೊಂದು ಪ್ರಮುಖ ಸೃಷ್ಟಿಕಾರವೆಂದರೆ ಸಂಸ್ಕೃತಿಪ್ರವಾಹದ ಸಮ್ಮಿಶ್ರಣ. ಯಕ್ಷಗಾನದ ವೇದಿಕೆಯಲ್ಲಿ, ನಮ್ಮ ಸಂಸ್ಕೃತಿಯ ವಿಭಿನ್ನ ಕಾಲಗಳ, ವಿಭಿನ್ನ ಹಂತಗಳ ವಿಚಿತ್ರ ಸಮುಚ್ಚಯವು ಸಾಕ್ಷಾತ್ಕಾರ ಗೊಳ್ಳುವುದನ್ನೆ ಕಾಣುತ್ತೇವೆ. ಕಳೆದ ಹಲವು ಸಹಸ್ರ ವರ್ಷಗಳ ಧಾರ್ಮಿಕ, ಸಾಂಸ್ಕೃತಿಕ ಹಂತಗಳು ಅಲ್ಲಿ ಒಟ್ಟಾಗಿ ಒಂದು ಪಾಕವಾಗುತ್ತವೆ. ಋಗ್ವೇದದ ಒಂದು ಋಚೆಯ ಉದ್ಧರಣದ ಬೆನ್ನಿಗೆ, ಭಾಗವತದ ಒಂದು ಉದಾಹರಣೆ ಬರುತ್ತದೆ: ಅದರ ಜತೆಗೆ ಕುಮಾರಿಲ ಭಟ್ಟರ ಯಾ ಶಂಕರರ ಮಾತಿನ ಒಂದು ತುಣುಕು ಅನುವಾದಗೊಳ್ಳು ತ್ತದೆ. ಅದರೊಂದಿಗೋ, ಅದಕ್ಕೆ ಪ್ರತಿಕ್ರಿಯೆಯಾಗಿಯೋ ಬಸವಣ್ಣನವರ ಒಂದು ನುಡಿ, ಸರ್ವಜ್ಞ ವಚನದ ಒಂದು ಅಭಿಪ್ರಾಯ, ಮಂಕುತಿಮ್ಮನ ಕಗ್ಗದ ಒಂದು ಉಕ್ಕಿ ಬರಬಹುದು. ಹೀಗೆ ಇದು, ಗೊಣಸು ಗೊಣಸಾಗಿ ಸಂಸ್ಕೃತಿಯ ಇತಿಹಾಸವನ್ನು ಬೆಸೆಯುತ್ತದೆ. ಅದರೊಂದಿಗೆ ಅರ್ವಾಚೀನ ವಾದ ಒಂದು ಘಟನೆಯ ಧ್ವನಿ ಹೊರಡಬಹುದು. ಭೈರಪ್ಪನವರ 'ಪರ್ವ' ಕಾದಂಬರಿಯ ಒಂದು ಭಾವ, ವ್ಯಾಸಭಾರತ, ಕುಮಾರವ್ಯಾಸ ಭಾರತಗಳ ಸ್ಫೂರ್ತಿಯೊಂದಿಗೆ ಮಿಶ್ರಿತವಾಗಿ ಬರಬಹುದು. ದೇವರು- ಭೂತ, ಯಜ್ಞ-ಪೂಜೆ, ಸಾಂಖ್ಯ, ವೇದಾಂತ ಹೀಗೆ ವಿಭಿನ್ನ ಚಿಂತನಗಳು ಪದರುಗಳಾಗಿ ಅಭಿವ್ಯಕ್ತವಾಗಬಹುದು. ಇವುಗಳಲ್ಲಿ ಪರಸ್ಪರ ಬಿರುಕು ಕಾಣಿಸದೆ ಅದೊಂದು ಸಹಜ ಸೃಜನಕ್ರಿಯೆಯ ಅಂಗವಾಗಿರುತ್ತದೆ. ಶಿಶುಪಾಲನಂತಹ ಪಾತ್ರ ಕೃಷ್ಣನ ದೇವತ್ವವನ್ನು, ಭಕ್ತಿಯನ್ನು, ಅವತಾರ ವಾದವನ್ನೇ ಖಂಡಿಸುತ್ತಾನೆ. ಭೀಷ್ಮನು ಅದನ್ನು ಪ್ರಶಂಸಿಸುತ್ತಾನೆ. ಕರ್ಣ, ಏಕಲವ್ಯ, ಶಂಭೂಕರು ಸಂಘರ್ಷದ, ಬಂಡಾಯದ ಭಾವನೆಗಳನ್ನು ವಿಸ್ತಾರವಾಗಿ ಅಭಿವ್ಯಕ್ತಿಸುತ್ತಾರೆ. ಕೇಳುಗನಿಗೆ ಕಲಾನುಭಾವ, ನೈಪುಣ್ಯ ಗಳು ಮುಖ್ಯವಾಗುತ್ತವೆ ಹೊರತು ಕಥೆ ಕೇಳುವುದಲ್ಲ. ತಾಳ ಮದ್ದಲೆಯು ಸಾಧಿಸುವ 'ಸಂಸ್ಕೃತಿ 'ಪಾಕ'ವು ಅನನ್ಯವಾದದ್ದು. ಸಂಸ್ಕೃತಿ ಎಂದರೆ ಜನಜೀವನ ರೀತಿ, ಅದರ ಅಂತರಂಗ-ಬಹಿರಂಗ, ಚಿಂತನ ಮತ್ತು ವಾಸ್ತವ ಅಭಿವ್ಯಕ್ತಿರೂಪ ಎನ್ನುವುದಾದರೆ, ಭಾರತೀಯ ಸಂಸ್ಕೃತಿಯ ಅತ್ಯಂತ ಸಾರಭೂತ, ಬಹುಮುಖಿ ಸಮುಚ್ಚಯ ಚಿತ್ರಣ