ಯಕ್ಷಗಾನ ಪ್ರದರ್ಶನದ ಎರಡು ರೂಪಗಳಾದ ಆಟ,
(ವೇಷ ಸಹಿತ) ತಾಳಮದ್ದಲೆ (ವೇಷ ರಹಿತ, ಬೈಠಕ್)ಗಳಿಗೆ ಆಧಾರವಾಗಿರುವುದು ಯಕ್ಷಗಾನ
ಎಂಬ ಕಾವ್ಯ, ಅಥವಾ ಯಕ್ಷಗಾನ ಪ್ರಸಂಗವೆಂದು ಕರೆಯಲಾಗುವ, ಪದ್ಯಗಳ ಮೂಲಕ
ಕಥೆಯನ್ನೇ ನಿರೂಪಿಸುವ ಸಾಹಿತ್ಯಜಾತಿ. ಅಂದರೆ ಪ್ರಸಂಗದ ಹಾಡುಗಳನ್ನು ಆಧರಿಸಿ
ಪ್ರದರ್ಶನದ ಸಂಗೀತ, ನೃತ್ಯ, ರಂಗವಿಧಾನ, ಮತ್ತು ಮಾತುಗಾರಿಕೆಗಳು ಸಾಗುತ್ತವೆ.
ನಾಟಕವಲ್ಲದ ಒಂದು ರಚನೆಯನ್ನಾಧರಿಸಿ, ನಾಟಕರೂಪವೊಂದು ಸಿದ್ಧವಾಗುತ್ತದೆ. ಇದರಲ್ಲಿ,
ಆಧಾರವಾಗಿರುವ ಪ್ರಸಂಗ ಮತ್ತು ಅದರ ಪ್ರದರ್ಶನದಲ್ಲಿ ಬರುವ ಮಾತು, ಅಥವಾ ಅರ್ಥ-
ಅರ್ಥಗಾರಿಕೆಗಳ ಸಂಬಂಧವನ್ನು ಒಂದಿಷ್ಟು ಪರಿಶೀಲಿಸುವುದು ಈ ಬರಹದ ಉದ್ದೇಶ.
ಅರ್ಥ ಮತ್ತು ಅರ್ಥೈಸುವಿಕೆ
ಯಕ್ಷಗಾನದ ಮಾತುಗಾರಿಕೆಯನ್ನು ಅರ್ಥ, ಅರ್ಥಗಾರಿಕೆ ಎಂದು ಹೇಳಿರುವುದೇ
ಅರ್ಥಪೂರ್ಣ. ಈ ಪದ ಪ್ರಯೋಗಕ್ಕೆ ಮೂಲಕಾರಣ ಏನೇ ಇರಲಿ. ಇದು ಹೊಮ್ಮಿಸುವ
ಪರಿಕಲ್ಪನೆ ವಿಶಿಷ್ಟವಾದದ್ದು. ಅರ್ಥ ಎಂದರೆ, ಸರಳ ಅರ್ಥ (meaning), ಮತ್ತು ಪ್ರೌಢವಾದ
ಅರ್ಥವಿಸುವಿಕೆ (interpretation), ಎಂಬ ಎರಡೂ ಭಾವಗಳು ಇಲ್ಲಿ ಅನ್ವಯವಾಗುತ್ತವೆ.