ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಇಪ್ಪತ್ತೊಂದನೆಯ ಶತಮಾನದಲ್ಲಿ ಯಕ್ಷಗಾನ : ಪ್ರಸಂಗಗಳು / ೧೧೭

ಸಂಘರ್ಷ ತೀವ್ರವಾಗಿದೆ. ಈ ಮಧ್ಯೆ ಯಕ್ಷಗಾನದಂತಹ ಸಂಪ್ರದಾಯ ಕಲೆ ಹೇಗೆ ಮುಂದುವರಿದೀತು? ಜಾತಿ, ಮತಗಳನ್ನು ಪ್ರಶ್ನಿಸುವ ಪ್ರಯತ್ನ ಪ್ರಸಂಗ ಸಾಹಿತ್ಯದಲ್ಲಿ ಈಗಾಗಲೇ ಬೀಜರೂಪದಲ್ಲಿ ಇದೆ. ಅದು ಇನ್ನೂ ತೀವ್ರವಾಗಿ, ಈಗ ಸ್ಥಾಪಿತವಾಗಿರುವ 'ಸಂಸ್ಕೃತಿ'ಗೆ ವಿರುದ್ಧವಾಗಿ 'ಪ್ರತಿ ಸಂಸ್ಕೃತಿ'ಯ ನಿರ್ಮಾಣ ಪ್ರಕ್ರಿಯೆಯಲ್ಲಿ ಮುಂದಿನ ಶತಮಾನದ ಪ್ರಸಂಗಕರ್ತರು ಪಾಲ್ಗೊಳ್ಳುವುದು ನಿಶ್ಚಿತವೆಂದು ತೋರುತ್ತದೆ.
ಸಾಹಿತ್ಯ, ಸಂಸ್ಕೃತಿ, ಜಾನಪದ ಮುಂತಾದ ಕ್ಷೇತ್ರಗಳಲ್ಲಿ ತೀರ ಹೊಸ ವಿಚಾರಗಳು, ಚಿಂತನ ಪಥಗಳು ಹುಟ್ಟಿ ಬರುತ್ತಿವೆ. ಇವುಗಳ ಪ್ರಭಾವ ಪ್ರಸಂಗಕರ್ತರ ಮೇಲಾದೀತು. ಅಲ್ಲದೆ ಇತರ ಕಲೆಗಳಾದ ನಾಟಕ, ನೃತ್ಯ, ಸಿನಿಮಾ, ಟೆಲಿವಿಷನ್‌ಗಳಲ್ಲಿ ಬರುವ ಹೊಸ-ಗಂಭೀರ ಮತ್ತು ಜನಪ್ರಿಯ ಎರಡೂ ಬಗೆಯ ಪ್ರಯೋಗಗಳು ಯಕ್ಷಗಾನ ಪ್ರಸಂಗಗಳ ಮೇಲೆ ಪ್ರಭಾವ ಬೀರಬಹುದು. ಈಗಾಗಲೇ ಈ ಲಕ್ಷಣ ಗಳು ಕಂಡುಬರುತ್ತಿವೆ. ಹೊಸ ಬಗೆಯ ಪದ್ಯ ರಚನೆ, ಸಿನಿಮೀಯ ಕಥಾರೀತಿಗಳು ರಂಗಕ್ಕೆ ಬಂದಿವೆ. ಪಾತ್ರಗಳು ಭದ್ರವಾದ ನೆಲೆಯಿಲ್ಲದ ಚಿತ್ರಗಳಾಗಿ, ಜನಪ್ರಿಯ ಹಿಂದಿ ಸಿನಿಮಾಗಳ ಪಾತ್ರಗಳಂತೆ ವ್ಯಕ್ತಿತ್ವಹೀನ, ಮತ್ತು ಟೊಳ್ಳಾಗಿ ಅಭಿವ್ಯಕ್ತವಾಗುವ ಅಪಾಯವೂ ಇದೆ.
ಭಾರತದ ಆರ್ಥಿಕತೆ, ಸಾಮಾಜಿಕ ಜೀವನ ಬಲು ವೇಗದಿಂದ ಜಾಗತೀಕರಣ (globalisation)ಕ್ಕೆ ಒಳಗಾಗುತ್ತಿದೆ. ಹಾಗಾಗಿ ವಿದೇಶೀ ಕಲಾ ಮಾದರಿಗಳೂ ದೊಡ್ಡ ಪ್ರಮಾಣದಲ್ಲಿ ನಮ್ಮಲ್ಲಿ ಬರಲಿವೆ. ಇವುಗಳನ್ನು ಸ್ಪರ್ಧಿಸುವ, ಅನುಕರಿಸುವ ಪ್ರವೃತ್ತಿಗಳೂ ನಮ್ಮ ಕಲೆ ಗಳಲ್ಲಿ ಕಾಣಿಸಬಹುದು.
ಆಧುನೀಕರಣದ ಪ್ರಕ್ರಿಯೆ ಮತ್ತು ಉಪಭೋಗ ಸಂಸ್ಕೃತಿಯ ವಿಸ್ತಾರ, ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಸುಲಭವಾಗಿ ಕುಳಿತಲ್ಲೆ ಸಿಗುವ ಸರಳ, ಪೇಲವ ರಂಜನೆಗಳ ಮಧ್ಯೆ ಇಪ್ಪತ್ತೊಂದನೆಯ ಶತಮಾನದ ಅಂತ್ಯಕ್ಕೆ ಯಕ್ಷಗಾನ ಉಳಿದೀತೆ? ಎಂಬುದೂ ಒಂದು ಪ್ರಶ್ನೆ, ಉಳಿಯಲಾರದು ಎಂಬುದು ಒಂದು ಉತ್ತರ. ಪರಿವರ್ತಿತ ರೂಪದಲ್ಲಿ, ರೂಪಾಂತರಗೊಂಡು ಉಳಿದೀತು ಎಂಬುದು ಮತ್ತೊಂದು ಉತ್ತರ.