ಕಾಲವಿರಲಿ, ಭಾವಾನುಗುಣವಾದ ವೇಗ ಪರಿವರ್ತನೆಯಂತೂ ಇದ್ದೇ ಇದೆ.
ಪಾತ್ರಗಳ ಹೂಂಗುಡುವಿಕೆಯೆಂಬುದು ನಿತ್ಯ ಮತ್ತು ವಿಶಿಷ್ಟ ಎಂಬ ಎರಡು ಬಗೆಯಿಂದ ಅಪೇಕ್ಷಿತ. ಇದಿರು ಪಾತ್ರದ ಮಾತಿಗೆ ಹೂಂಗುಡು ವುದು, ಸಹಜ ಪ್ರಕ್ರಿಯೆ. 'ಎಲಾ ದುಷ್ಟ' ಎಂದರೂ, ಇದಿರಾಳಿ 'ಹೂಂ' ಅನ್ನಬೇಕು. ಅದು ಒಪ್ಪಿಗೆಯಲ್ಲ. 'ಕೇಳುತ್ತಿದ್ದೇನೆ' ಎಂದು ಮಾತ್ರ, ಅಥವಾ 'ಏನೆಂದೆ?', 'ಯಾಕೆ?' ಎಂದರೂ ಒಂದು ಬಗೆಯ ಹೂಂಗುಡು ವಿಕ. ವಿಶಿಷ್ಟವಾದ ಹೂಂಗುಡುವಿಕೆಯಲ್ಲಿ ವಿವಿಧ ಭಾವಗಳ ಅಭಿವ್ಯಕ್ತಿ ಇರುತ್ತದೆ. ಸಮ್ಮತಿ-ಅಸಮ್ಮತಿ, ಆಸಕ್ತಿ, ನಿರಾಸಕ್ತಿ, ಕುತೂಹಲ- ಔದಾಸೀನ್ಯ, ಸಿಟ್ಟು, ಆಕ್ಷೇಪ, ಮತ್ಸರ, ಮೆಚ್ಚುಗೆ, ಸಲುಗೆ, ಪ್ರೀತಿ, ವ್ಯಂಗ್ಯ- ಮೊದಲಾದ ಹಲವು ಭಾವನೆಗಳನ್ನು ಹೂಂಕಾರ ಮಾತ್ರದಿಂದ ತೋರಿಸಬಹುದು, ತೋರಿಸುತ್ತಾರೆ.
ಅರ್ಥಗಾರಿಕೆಯ ಶೈಲಿಯು, ತುಸು 'ಹಳೆ'ಯ ರೀತಿಯದೂ, ಆಡಂಬರದ ರೀತಿಯದೂ ಆಗಿರಬೇಕೆಂಬ ನಿರೀಕ್ಷಿತ. ಯಕ್ಷಗಾನದ ವಸ್ತು ಮುಖ್ಯವಾಗಿ ಪೌರಾಣಿಕವಾಗಿರುವುದೂ, ಕಲೆಯು ಶೈಲೀಕೃತ ಮತ್ತು ರಮ್ಯಾದ್ಭುತವಾಗಿರುವುದೂ ಇದಕ್ಕೆ ಕಾರಣ. ಹಾಸ್ಯಗಾರನ ಪಾತ್ರಕ್ಕೆ ಈ ನಿಯಮವು ತುಂಬ ಸಡಿಲವಾಗುತ್ತದೆ. ಪ್ರತಿಭಾವಂತರಾದ ಕಲಾವಿದರು, ಇತರ ಪಾತ್ರಗಳ ನಿರ್ವಹಣೆಯಲ್ಲೂ ಈ ನಿಯಮವನ್ನು ಮೀರಿಯೂ, ಯಕ್ಷಗಾನ ರಂಗದ ಒಟ್ಟು ಸ್ವಭಾವಕ್ಕೆ ಸಂಗತವಾಗಿ ಮಾತಾಡಬಲ್ಲರು. ಇದು ವಿಶೇಷ ಪ್ರತಿಭೆ.
ಅರ್ಥ ಅಥವಾ ಮಾತುಗಾರಿಕೆ, ಯಕ್ಷಗಾನದ ಎರಡು ಪ್ರಕಾರ ಗಳಾದ ಆಟ (ವೇಷ ನೃತ್ಯಸಹಿತ) ಮತ್ತು ತಾಳಮದ್ದಳೆ (ಸಾದಾ ಉಡುಪಿನಲ್ಲಿ, ಕುಳಿತು ಪ್ರದರ್ಶನ) ಎಂಬ ಎರಡು ಪ್ರಕಾರಗಳಲ್ಲಿದೆ. ಈಯೆರಡು ಪ್ರಕಾರಗಳಲ್ಲಿ ಬರುವ ಮಾತುಗಾರಿಕೆಯ ಬಗೆಗೆ ಸ್ಕೂಲವಾಗಿ ಹೇಳುವುದಾದರೆ, ವ್ಯತ್ಯಾಸವು ಎರಡು ಬಗೆಯದು. ತಾಳಮದ್ದಳೆಯು ವಾಚಿಕಪ್ರಧಾನ, ನೃತ್ಯ, ಅಭಿನಯ, ವೇಷಾದಿಗಳಿಲ್ಲ ದಿರುವಂತಹದು. ಇಲ್ಲಿಯ ಮಾತುಗಾರಿಕೆಯು ಗುಣ, ಗಾತ್ರಗಳೆರಡ ರಲ್ಲೂ ಆಟದ ಮಾತುಗಾರಿಕೆಗಿಂತ ಹೆಚ್ಚಿನದಾಗಿರಬೇಕಾದುದು.