ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬ / ಕುಕ್ಕಿಲ ಸಂಪುಟ
ನೋಡಿ ಕೋಳಿ ಗೂಟ ಹಾಕಿ ಕೋಳಿ ಅಂಕ-ಕೋಳಿಕಟ್ಟ ಎಂದೂ ಕರೆಯುತ್ತಾರೆ- ನಡೆಸುವ ಪದ್ಧತಿ ಸಾಂಪ್ರದಾಯಿಕವಾಗಿ ನಡೆದು ಬಂದಿರುವುದನ್ನು ಇಲ್ಲಿ ನೆನಸಿಕೊಳ್ಳಬಹುದು.
ಮೇಲೆ ಹೇಳಿದ ಶ್ಲೋಕದಲ್ಲಿ ಆ ಕೋಳಿ ಕಾಳಗದಲ್ಲಿ ಕಟ್ಟಿದ ಹುಂಜಗಳು ಭಿನ್ನ ಭಿನ್ನವಾಗಿ ಗಾಯಗೊಂಡು ಸೋತು ಸತ್ತು ರಂಗಸ್ಥಳವಿಡೀ ರಕ್ತರಂಜಿತವಾದರೆ, ಅದು ರಂಗಪ್ರಯೋಗದ ಸಿದ್ದಿಯ ಲಕ್ಷಣ ಎಂದಿರುವುದನ್ನು ಗಮನಿಸಿರಿ. ಇದನ್ನೆಲ್ಲಾ ಆಳವಾಗಿ ಪರಿಶೀಲಿಸಿದಲ್ಲಿ, ಪೂರ್ವಕಾಲದ ನಾಟಕ ಹಾಗೂ ಬಯಲಾಟ ಪ್ರಯೋಗಸ್ಥಳಕ್ಕೆ 'ರಂಗ ಸ್ಥಳ'ವೆಂಬ ಹೆಸರು ಹೇಗೆ ಬಂತು, ಅದರ ಸಾರ್ಥಕ್ಯವೇನೆಂಬುದನ್ನು ಊಹಿಸಿಕೊಳ್ಳಬಹು ದಾಗಿದೆ. ಅದು ಹೇಗೆಂಬುದನ್ನು ಸ್ವಲ್ಪಮಟ್ಟಿಗೆ ಪರಿಶೀಲಿಸೋಣ.
'ರಂಗ' ಎಂಬ ಸಂಸ್ಕೃತ ಶಬ್ದದ ಮೂಲಾರ್ಥ ಕೆಂಪು ಬಣ್ಣ ಎಂದಾಗಿದೆ. 'ರಂಜ್' ಎಂಬ ಧಾತುವಿನಿಂದ ಹುಟ್ಟಿದ ಶಬ್ದ ಇದು- (ರಂಜ್ - ಭಾವೇ ಘಣ್) ರಕ್ತ ಎಂಬ ಶಬ್ದವೂ ಇದೇ ಧಾತುವಿನಿಂದ ನಿಷ್ಪನ್ನವಾದದ್ದು (ಪಾಣಿನಿಯ ಧಾತು ಪಾಠದಲ್ಲಿ ಉಣಾದಿ ವರ್ಗ, ೧-೪) ಕೆಂಪು ಬಣ್ಣದ್ದು ಆಗಿರುವುದರಿಂದಲೇ ನೆತ್ತರಿಗೆ ಸಂಸ್ಕೃತದಲ್ಲಿ ರಕ್ತವೆಂಬ ಹೆಸರು ಪ್ರಸಿದ್ಧವಾಗಿರುವುದಾಗಿದೆ. ರಕ್ತರಂಜಿತವಾದುದರಿಂದಲೇ ಯುದ್ಧ ಮಾಡುವ ಸ್ಥಳವು ರಣರಂಗ, ಯುದ್ಧರಂಗ ಎಂದು ಹೆಸರಾಗಲು ಕಾರಣ. ರಂಗ ಶಬ್ದದ ಮೂಲಾರ್ಥವೇನೆಂಬುದನ್ನು ಸಂಸ್ಕೃತ ವಿದ್ವಾಂಸರಾರೂ ಗಮನಕ್ಕೆ ತಂದಂತೆ ಇಲ್ಲ. ನಾನು ತಿಳಿದಂತೆ, ಮಂಗಳೂರಿನವರಾದ ದಿ| ಪಂಜೆ ಮಂಗೇಶರಾಯರೊಬ್ಬರು ಆ ನಿಜಾರ್ಥವನ್ನು ಕಂಡುಕೊಂಡಿದ್ದರು. ಅವರು ಸಂಸ್ಕೃತ ವಿದ್ವಾಂಸರೆಂದು ಖ್ಯಾತನಾಮ ದವರಲ್ಲವಾಗಿದ್ದರೂ, ಕೇಶಿರಾಜನ ಕನ್ನಡ ವ್ಯಾಕರಣ 'ಶಬ್ದಮಣಿದರ್ಪಣ'ವನ್ನು ಸಂಶೋಧಿಸಿ ಟಿಪ್ಪಣಿ ಬರೆದು ಸಟೀಕವಾಗಿ ಪ್ರಕಾಶಪಡಿಸಿದ್ದ ಅವರಿಗೆ ಸಂಸ್ಕೃತ ಶಬ್ದಗಳ ಮೂಲಾರ್ಥವನ್ನು ಶೋಧಿಸಿ, ಆ ನಿಜಾರ್ಥವನ್ನು ಕನ್ನಡದಲ್ಲಿ ಬಳಸಬೇಕೆಂಬ ಪ್ರವೃತ್ತಿ ವಿಶೇಷವಾಗಿ ಇತ್ತೆಂಬುದನ್ನೂ ಅದಕ್ಕಾಗಿ ಅವರು ಅವಿರತ ಪ್ರಯತ್ನ ನಡೆಸಿರುವುದನ್ನೂ ನಾನು ಮೊದಲಿಂದಲೂ ಬಲ್ಲೆ. ಅವರ ಅನೇಕ ಗದ್ಯಪದ್ಯ ರಚನೆಗಳಲ್ಲಿ ಆ ಸೂಕ್ಷ್ಮಮತಿ ಯನ್ನು ಯಾರಾದರೂ ಕಾಣಬಹುದು. ಯಕ್ಷಗಾನ ಪ್ರಸಂಗದಲ್ಲಿ, ಆಟ, ತಾಳಮದ್ದಳೆ ಗಳಲ್ಲಿ ಸಹ ಅವರಿಗೆ ವಿಶೇಷ ಆಸಕ್ತಿ ಇದ್ದುದನ್ನು ನಾನು ಕಂಡಿದ್ದೇನೆ. 'ರಂಗಸ್ಥಳ' ಎಂಬ ಪದಪ್ರಯೋಗವನ್ನು ಅವರ ಇದೊಂದು ಪದ್ಯದಲ್ಲಿ ಈಗ ಪರಿಭಾವಿಸಿರಿ.

ಮೂಡುವನು - ರವಿ ಮೂಡುವನು
ಕತ್ತಲೊಡನೆ ಸೆಣಸಾಡುವನು
ಮೂಡಣ ರಂಗಸ್ಥಳದಲಿ ನೆತ್ತರು
ಮಾಡುವನು - ಕುಣಿದಾಡುವನು

ಸೆಣಸಾಟದಲ್ಲಿ ರಕ್ತ ಸುರಿದು ಕೆಂಪಾಗಿರುವುದರಿಂದಲೇ ಯುದ್ಧ ಭೂಮಿಗೆ 'ರಣರಂಗ'ವೆಂಬ ಹೆಸರು ನಿಜಾರ್ಥದಲ್ಲಿ ಸಹಜವಾಗಿ ಬಂದದ್ದೆಂಬುದೂ, ಯುದ್ಧ ಸಂದರ್ಭಗಳೇ ಪ್ರಧಾನವಾಗಿರುವ ನಮ್ಮ ಯಕ್ಷಗಾನ ಬಯಲಾಟದ ನಾಟ್ಯ ಭೂಮಿಗೂ 'ರಂಗಸ್ಥಳ' ಎಂಬ ಹೆಸರು ಹಾಗೆ ಸಾರ್ಥಕವಾದದ್ದೆಂಬ ಭಾವನೆ ಇಲ್ಲಿ ಸುವ್ಯಕ್ತ ವಾಗಿಲ್ಲವೇ? ವೇಷಧಾರಿಗಳು ಅಣಕಯುದ್ಧ ಮಾಡುವಲ್ಲಿ ಪ್ರಾಣಾಪಾಯವುಂಟಾಗಬಾರ ದೆಂಬುದಕ್ಕಾಗಿ ಕೋಳಿ ಕಾಳಗವನ್ನು ಮೊದಲಾಗಿ ಮಾಡಿ ಭೂತ, ಪಿಶಾಚಿಗಳಿಗೆ ರಕ್ತ ಬಲಿಕೊಡಬೇಕೆಂಬುದು ಇದರ ತತ್ತ್ವವಾಗಿದೆ ಎಂದು ತಿಳಿಯಬೇಕು.