ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪರಿಶೀಲಿಸುತ್ತದೆ. ಮೀನಿನ ಹುಡಿ, ಮೀನಿನ ಎಣ್ಣೆ ರಕ್ಷಣೆ, ಮೀನಿನ ಎಣ್ಣೆಯ-ಉಪಯೋಗದ ಪದಾರ್ಥಗಳನ್ನು ಮಾಡುವುದು ಈ ಎಲ್ಲ ಸಂಶೋಧನಾತ್ಮಕ ಕೆಲಸಗಳನ್ನು ಈ ಸಂಸ್ಥೆ ಹಮ್ಮಿಕೊಂಡಿದೆ. ರಾಸಾಯನಿಕ ಮಿಶ್ರಣದಿಂದ ಉಪ್ಪಿನಲ್ಲಿ ಮೀನಿನ ಬಣ್ಣ ಮತ್ತು ರುಚಿ ಕೆಡದ ಹಾಗೆ ಆರೇಳು ತಿಂಗಳುಗಳ ಕಾಲ ಕಾಯ್ದಿಡುವ ಸಂಶೋಧನೆಯೊಂದನ್ನು ಅದು ಮಾಡಿದೆ. ಹೀಗೆ ಬೇರೆ ಕೆಲವು ರಾಸಾಯನಿಕ ಪ್ರಯೋಗ ಸಂಶೋಧನೆಗಳನ್ನು ಮತ್ಸ್ಯೋದ್ಯಮದಲ್ಲಿ ಈ ಸಂಸ್ಥೆ ಮಾಡಿದೆ.

ಕೇವಲ ತಾಂತ್ರಿಕ ದೃಷ್ಟಿಯಿಂದ ದೊಡ್ಡ ಮಟ್ಟದಲ್ಲಿ ಮೀನು ಹಿಡಿಯುವುದರ ನಡುವೆ ಹಳೆಯ ಕ್ರಮಗಳಿಂದ ಬಲೆ ಬೀಸಿ ಮೀನು ಹಿಡಿಯುವ ಮತ್ಸ್ಯೋದ್ಯಮಿಗಳು ಈಗಲೂ ಇದ್ದಾರೆ. ಮತ್ಸ್ಯೋದ್ಯಮದ ಲಾಭವನ್ನು ಮನಗಂಡು ನಮ್ಮ ದೇಶದಲ್ಲಿ ವಿದೇಶೀ ಬಂಡವಾಳಗಾರರು ಕೂಡ ಮತ್ಸ್ಯ ವ್ಯವಸಾಯವನ್ನು ಅವಲಂಬಿಸಿದ ಉದ್ಯಮಗಳನ್ನು ಸ್ಥಾಪಿಸಲು ಮುಂದೆ ಬಂದಿದ್ದಾರೆ.

ಹಾಗೆಯೇ ಕರಾವಳಿ ಜಿಲ್ಲೆಯ ಮುಖ್ಯ ಉದ್ಯಮವಾದ ಮತ್ಸ್ಯೋದ್ಯಮಕ್ಕೆ ಬೇರೆ ಬೇರೆ ಉದ್ದಿಮೆಗಳಿಂದ ಅಪಾಯವೂ ಕಾದಿದೆ. ಸಮುದ್ರದ ನೀರು ಮೀನುಗಳಿಗೆ ಸ್ಪಚ್ಛವಾಗಿದ್ದಷ್ಟು ಸಮಯ ಅಂತಹ ತೊಂದರೆಯೇನೂ ಕಾಣಿಸದು. ಬೃಹತ್ ಉದ್ಯಮಗಳ ತ್ಯಾಜ್ಯ ವಸ್ತುಗಳಿಂದ ಸಮುದ್ರದ ಜೀವಿಗಳ ಮೇಲೆ ಕೆಟ್ಟ ಪರಿಣಾಮವೂ, ಅವನ್ನು ನಂಬಿ ಬದುಕುವ ಜನರಿಗೆ ಅಪಾಯವೂ ತಪ್ಪಿದಲ್ಲ.

ಉದ್ಯಮ ಕ್ಷೇತ್ರ

ದಕ್ಷಿಣ ಕನ್ನಡ ಜಿಲ್ಲೆಯು ಮುಖ್ಯವಾಗಿ ಕೃಷಿಯನ್ನೇ ಅವಲಂಬಿಸಿದ ಜಿಲ್ಲೆಯಾದರೂ ಇಲ್ಲಿ ಉದ್ಯಮ ಸ್ವಲ್ಪ ಮಟ್ಟಿಗೆ ಬೆಳೆಯುತ್ತಿದೆ.

ಈಗ ಕೃಷಿ ಆಧಾರಿತ ಉದ್ಯಮಕ್ಕೆ ವಿಪುಲ ಅವಕಾಶ ಜಿಲ್ಲೆಯಲ್ಲಿ ಇದೆ. ತೆಂಗು, ಅಡಿಕೆ, ರಬ್ಬರ್‌ಗಳನ್ನು ಆಧರಿಸಿ ಸಾಕಷ್ಟು ಉದ್ಯಮಗಳಿಗೆ ಅವಕಾಶವಿದೆ. ಮತ್ಸ್ಯೋದ್ಯಮದಲ್ಲಿ ಕರ್ನಾಟಕದಲ್ಲಿಯೇ ದಕ್ಷಿಣ ಕನ್ನಡವು ಮುಂದಿದೆ. ಇಲ್ಲಿಯ ಆವೆಮಣ್ಣಿನ ಗುಣದಿಂದಾಗಿ ಹಂಚಿನ ಉದ್ದಿಮೆ ಚೆನ್ನಾಗಿ ಬೆಳೆದಿದೆ. ಇತ್ತೀಚೆಗೆ ಬೇರೆ ಬೇರೆ ರೀತಿಯ ಅಲಂಕಾರಿಕ ಟೈಲ್ಸ್ ತಯಾರಿಸುವ ಉದ್ಯಮ ಬೆಳೆಯುತ್ತಿದೆ. ಮಂಗಳೂರು ಹಂಚು ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುತ್ತಿದೆ.

33