ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಲ್ಲಗಳೆಯುವಂತಿಲ್ಲ. ಇದೀಗ ತುಳು ಯಕ್ಷಗಾನವನ್ನು ಯಕ್ಷಗಾನ ಶೈಲಿಯೊಂದಿಗೆ ಬೆಳೆಸುವ ಯತ್ನಗಳು ಆರಂಭವಾಗಿವೆ.

1970ರ ಬಳಿಕ ಯಕ್ಷಗಾನ ಪ್ರಸಂಗ ರಚನೆಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಹೊಸ ಅಭಿರುಚಿಗೆ ಹೊಂದಿಕೊಳ್ಳಲು ಯಕ್ಷಗಾನ ಪ್ರಯತ್ನಿಸಿದ್ದು, 1970-1997ರ ಅವಧಿಯಲ್ಲಿ ನೂರಾರು ಹೊಸ ಪ್ರಸಂಗಗಳು ರಚನೆಯಾಗಿದ್ದು, ಅದರಲ್ಲಿ ಬೇರೆ ಬೇರೆ ಮಟ್ಟಗಳಿವೆ. ಶೈಲಿ, ವ್ಯವಸಾಯಿಕ ಭದ್ರತೆ, ಹೊಸ ಮಾಧ್ಯಮಗಳ ಒತ್ತಡ, ಏರುತ್ತಿರುವ ವೆಚ್ಚಗಳು, ಬದಲಾಗುತ್ತಿರುವ ಅಪೇಕ್ಷೆಗಳ ಮಧ್ಯೆ ಯಕ್ಷಗಾನ ಜೀವಂತವಾಗಿರಲು ಹೆಣಗಾಡುತ್ತಿದ್ದರೂ, ಯಕ್ಷಗಾನದ ಭವಿಷ್ಯ ಉಜ್ವಲವಾಗಿ ಇದೆ. ರಾಜಾಶ್ರಯವಿಲ್ಲದೆ ಜನಾಶ್ರಯದಿಂದಲೆ ಬೆಳೆದು ಬಂದ ಕಲೆ ಇದು. ಶತಮಾನಗಳ ಕಾಲ, ಬಡ ಕಲಾವಿದರು ಹಠದಿಂದ ತಪಸ್ಸಿನಿಂದ ಉಳಿಸಿಕೊಂಡು ಬಂದ ಈ ಕಲೆ ಇದೀಗ ಹೊಸ ಉತ್ಸಾಹದಿಂದ ಬೆಳೆಯಬೇಕಾಗಿದೆ. ಕಾಲದ ಕರೆಯನ್ನು ಸ್ವೀಕರಿಸುವ ಸಾಮರ್ಥ್ಯ ಈ ಕಲೆಗೆ ಇದೆ.

ಇತರ ಪ್ರಕಾರಗಳು

ಈ ಜಿಲ್ಲೆಯಲ್ಲಿ ವಿಶಿಷ್ಟ ಜಾನಪದ ಸೌಂದರ್ಯದ ಹತ್ತಾರು ಪ್ರಕಾರಗಳಿವೆ. ವರ್ಣಮಯವಾದ ನೃತ್ಯ ವೇಷಗಳ ಆರಾಧನೆಯಾದ ಭೂತಾರಾಧನೆಯೊಂದಿಗೆ, ಅಷ್ಟೇ ಪ್ರಮುಖವಾದ ನಾಗನೃತ್ಯವಿದೆ. ಕಂರ್ಗೋಲು, ಹೌಂದ್ರಾಯನ ವಾಲಿಗ, ಆಟಿಕಳಂಜ, ಮಾದಿರ, ಕನ್ಯಾಪು, ನಾಗಕೋಲ, ಚೆನ್ನುನಲಿಕ, ಸೋಣಜೋಗಿ, ಬಾಲೆಸಾಂತು, ಸಿದ್ಧವೇಷ, ಕಾವೇರಿ ಪುರುಷ, ಮಾಯಿದ ಪುರುಷೆ, ಮಾಂಕಾಳಿ, ಕೊರಗ ತನಿಯ ಕುಣಿತ, ಕಂಗಿಲು, ಮೊದಲಾದ ವಾರ್ಷಿಕ ಕಾಲಾವರ್ತನ ನೃತ್ಯಗಳೂ, ರಾವುಕೋಲ, ಕಾಲೆಕೋಲ ಮೊದಲಾದ ಜೀವನಾವರ್ತ ನರ್ತನಗಳೂ, ಡಂಗುರ ಮತ್ತು ಹೇಳಿಕೆ ಕುಣಿತಗಳೂ ಪ್ರಚಲಿತವಿದೆ. ಅಲ್ಲದೆ ಚನ್ನೆಮಣೆ, ಪಲ್ಲಿ, ಕುಂಟಾಟ, ಜಿಬ್ಲಿ, ಕಂಬದಾಟ ಮೊದಲಾದ ಕ್ರೀಡೆಗಳೂ ಇವೆ.

ಮೂಲತಃ ಆಚರಣೆಯಾಗಿದ್ದು, ಕ್ರೀಡೆಯಾಗಿ ರೂಪು ತಳೆದ ಓಟದ ಸ್ಪರ್ಧೆಯಾದ ಕಂಬಳವು ಒಂದು ಜನಪ್ರಿಯ ಜಾನಪದ ಕ್ರೀಡೆ. ಇದಕ್ಕಾಗಿಯೇ ನಿರ್ಮಿತವಾದ

44