ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦ / ಕುಕ್ಕಿಲ ಸಂಪುಟ

೮. ಯಕ್ಷಗಾನದ ಧನ್ಯಾಸಿ ರಾಗವು ವಿದ್ಯಾರಣ್ಯರ ಮತಾನುಸಾರವಾಗಿ ಗೋವಿಂದ ದೀಕ್ಷಿತನು ಹೇಳಿದ ಲಕ್ಷಣದಂತೆ ರಿಧ ವರ್ಜ್ಯವಾದ ಔಡವರಾಗವಾಗಿದೆ. ಅದು ಶ್ರೀರಾಗ ಜನ್ಯ, ಈ ಪ್ರಕಾರ ರಾಗಗಳ ಹೆಸರುಗಳಲ್ಲಿಯೂ, ಸ್ವರಸ್ಥಾನಗಳಲ್ಲಿಯೂ ತ್ರಿಸ್ಥಾಯಿಗಳ ಸಂಚಾರ ನಿಯಮಗಳಲ್ಲಿಯೂ ಪ್ರಚಲಿತ ಸಂಗೀತ ಪದ್ಧತಿಗಿಂತ ಭಿನ್ನವಾಗಿರುವುದರಿಂದ ಆಧುನಿಕ ಸಂಗೀತ ವಿದ್ವಾಂಸರಲ್ಲಿ ಕೆಲವರ ವಕ್ರದೃಷ್ಟಿಗೆ ಯಕ್ಷಗಾನದ ಹಾಡುಗಾರಿಕೆಯು ಅಶಾಸ್ತ್ರೀಯವೆಂದು ಕಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಹಿಂದಣ ಶಾಸ್ತ್ರಗ್ರಂಥಗಳನ್ನು ಪರಿಶೀಲಿಸಿದರೆ ಯಕ್ಷಗಾನ ಪದ್ಧತಿಯು ಪೂರ್ವ ಪ್ರಸಿದ್ಧವಾದ ಶುದ್ಧ ಕರ್ಣಾಟಕ ಸಂಗೀತದ ಪರಂಪರೆಯಲ್ಲಿಯೇ ಇದೆ ಎಂದು ಸ್ಪಷ್ಟವಾಗದಿರದು. ಪದ್ಯಗಳನ್ನು ಹಾಡುವ ಕ್ರಮದಲ್ಲಿ ಸಹ ಪಲ್ಲವಿಯ ಪ್ರಥಮ ಪಾದದ ಪ್ರಾರಂಭದ ಒಂದೆರಡು ಶಬ್ದ ಗಳನ್ನುಚ್ಚರಿಸಿ ರಾಗಾಲಾಪನೆಯನ್ನು ಮಾಡಿ ಮುಗಿತಾಯವನ್ನು ಕೊಡುವ ನಮ್ಮ ಕ್ರಮವೂ ಏಲಾಪದಗಳನ್ನು ಹಾಡುವ ಶಾಸ್ರೋಕ್ತ ಲಕ್ಷಣವೇ ಆಗಿದೆ. ಮುಗಿತಾಯದಲ್ಲಿ ವಾದ್ಯಗಳನ್ನು ಬಾರಿಸುವ ಗತ್ತುಗಳೂ 'ಭಂಡಣಾಂತೇ ಕಲಾಸಯೇತ್' ಎಂಬ ಶಾಸ್ತ್ರ ವಿಧಿಯ ಲಕ್ಷಣದಂತೆಯೇ ಇರುತ್ತವೆ. ಪದ್ಯರಚನೆಯೂ 'ಶುದ್ಧ-ಸಾಲಗ'ಗಳೆಂಬ ಏಲಾದಿ ಮತ್ತು ಧ್ರುವಾದಿ ಪ್ರಬಂಧಗಳ ಶಾಕ ಲಕ್ಷಣ ಪರಂಪರೆಯಲ್ಲಿಯೇ ಇರುವು ದಾಗಿದೆ. ನಮ್ಮ ತೆಂಕಮಟ್ಟಿನ ಯಕ್ಷಗಾನದಲ್ಲಿರುವ ಇನ್ನೊಂದು ವೈಶಿಷ್ಟ್ಯವೆಂದರೆ ಇಂತಹ ತಾಳದ ಪದವನ್ನು ಇಂತಿಂತಹ ರಾಗಗಳಲ್ಲಿಯೇ ಹಾಡಬೇಕು, ಎಂದಿರುವ ನಿಯಮ. ಮಧ್ಯಮಾವತಿ ತ್ರಿವುಡೆ ತಾಳದ ಪದ್ಯವನ್ನು ಇತರ ರಾಗಗಳಲ್ಲಿ ಹಾಡುವ ಕ್ರಮವಿಲ್ಲ. ಹಾಗೆಯೇ ಸೌರಾಷ್ಟ್ರ-ತ್ರಿವುಡ, ಭೈರವಿ, ಜಂಪೆ, ಕೇತಾರಗೌಳ-ಜಂಪೆ, ಕಾಂಬೋಜಿ-ಅಷ್ಟತಾಳ, ಭೈರವಿ-ಅಷ್ಟತಾಳ, ಮಾರವಿ, ಏಕತಾಳ, ದ್ವಿಜಾವಂತಿ-ಜಂಪ, ತೋಡಿ-ಆದಿತಾಳ, ಕೇತಾರಗೌಳ-ಅಷ್ಟತಾಳ, ಶಂಕರಾಭರಣ-ಪಂಚಘಾತ ಮಟ್ಟೆ, ಆಹೇರಿ-ಅಷ್ಟತಾಳ, ತೋಡಿ-ಪಂಚಘಾತ ಇತ್ಯಾದಿಯಾಗಿ ಬೇರೆ ಬೇರೆ ತಾಳಗಳ ವಿಶಿಷ್ಟ ಬಂಧಕ್ಕೆ ನಿಯತವಾದ - ರಾಗ ನಿರ್ದೇಶವಿದೆ. ಆ ನಿಯಮವನ್ನು ಮೀರಿ ಯಾವುದೇ ಬಂಧವನ್ನು ಐಚ್ಛಿಕರಾಗದಲ್ಲಿ ಹಾಡಕೂಡದು. ಮತ್ತು ಇಂತಹ ರಸಸಂದರ್ಭದಲ್ಲಿ ಇಂತಹ ರಾಗ ತಾಳದ ಪದ್ಯಗಳನ್ನೇ ಹಾಡಬೇಕೆಂದಿರುವ ನಿಯಮವೂ ಸಹ ಶಾಸ್ತ್ರೀಯ ಪರಂಪರೆಯಿಂದಲೇ ಬಂದುದಾಗಿದೆ. ಇತರ 'ಮಟ್ಟುಗಳ' ಯಕ್ಷಗಾನ ಪ್ರಬಂಧಗಳಲ್ಲಿ ಯಾಗಲಿ, ಗಾನಪದ್ಧತಿಯಲ್ಲಾಗಲಿ ಔಚಿತ್ಯಪೂರ್ಣವಾದ ಈ ನಿಯಮ ವ್ಯವಸ್ಥೆಯು ಕಂಡುಬರುವುದಿಲ್ಲ. ಕುರಿತು ಸೋದಾಹರಣವಾಗಿ ವಿಮರ್ಶಿಸಲು ಪರಿಮಿತ ವಿಸ್ತಾರವುಳ್ಳ ಈ ಚಿಕ್ಕ ಪ್ರಬಂಧದಲ್ಲಿ ಅವಕಾಶವಿಲ್ಲ.

ನಮ್ಮ ತೆಂಕಮಟ್ಟಿನ ಪದ್ಧತಿಯಲ್ಲಿ ಪ್ರಯೋಗಿಸಲ್ಪಡುವ ತಾಳಭೇದಗಳೂ ಆಧುನಿಕ ಸಂಗೀತ ಸಂಪ್ರದಾಯದ ಧ್ರುವಾದಿ ಸಪ್ತತಾಳಗಳ ಲಕ್ಷಣಗಳಂತಿರುವುವಲ್ಲ. ಅವುಗಳ ಘಾತಗಳೂ, ಸಶಬ್ಬನಿಃಶಬ್ದಕ್ರಿಯೆಗಳೂ, ಕ್ರಿಯಾನಂತರ ವಿಶ್ರಾಂತಿ ರೂಪವಾದ ಲಯಗಳೂ, ಗುರುಲಘುದ್ರುತಗಳ ಕಾಲ ಪ್ರಮಾಣವೂ ಪ್ರಾಕ್ ಪ್ರಸಿದ್ಧವಾದ ತಾಳ ಲಕ್ಷಣಗಳಿಗೆ ಸರಿಯಾಗಿರುತ್ತವೆ. ನಮ್ಮ ಯಕ್ಷಗಾನದಲ್ಲಿ 'ಪಂಚಘಾತ', 'ಪಂಚಘಾತ ಮಟ್ಟೆ' ಎಂಬೆರಡು ಪ್ರಾಕ್ ಪ್ರಸಿದ್ಧ ತಾಳಗಳಿವೆ. ಲಿಪಿಕಾರರ ಪ್ರಾಮಾದಿಕ ಅಥವಾ ಅಜ್ಞಾನಜನ್ಯ ದೋಷಗಳಿಂದ ಈ ಹೆಸರುಗಳು 'ಪಂಚಘಾತಿ, ಪಂಚಾಗತಿ, ಪಂಚಗತಿ, ಪಂಚಾಗತಿ ಮಟ್ಟೆ' ಎಂಬ ಅಪಭ್ರಂಶ ರೂಪಗಳನ್ನು ಹೊಂದಿರುವುದು ಮಾತ್ರ ಅಲ್ಲ 'ರಾಗ ಪಂಚಾಗತಿ ತಾಳ-ಮಟ್ಟೆ' ಎಂದೂ ಕೆಲವು ಪ್ರತಿಗಳಲ್ಲಿ ಬರೆದಿರುವುದುಂಟು. ಇದರಿಂದಾಗಿ ಪಂಚಾಗತಿ ಎಂಬುದೊಂದು ರಾಗವೆಂದು ಸಾಮಾನ್ಯರು ಭ್ರಮಿಸುವಂತಾಗಿದೆ.