ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೯೨/ ಕುಕ್ಕಿಲ ಸಂಪುಟ

ಅವರ ಪರೋಕ್ಷ ಪ್ರೇರಣೆಯಿಂದಲೇ ನಮ್ಮ ಕೋಡಪದವಿನ ಶ್ರೀ ವೀರಾಂಜನೇಯ ಸ್ವಾಮಿ ಯಕ್ಷಗಾನ ಕಲಾಸಂಘ ಸ್ಥಾಪನೆಯಾದುದು. ಶಾಸ್ತ್ರೀಯ ಮತ್ತು ಪರಂಪರೆಯ ಯಕ್ಷಗಾನ ಶಿಕ್ಷಣವನ್ನು ಕೊಡುವ ಉದ್ದೇಶದಿಂದ ಸ್ಥಾಪನೆಯಾದ ನಮ್ಮ ಸಂಘ ಇಂದಿಗೂ ಅದೇ ದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಅವರ ಸಂಗೀತಾಸಕ್ತಿ ನನ್ನ ತಮ್ಮ ಶ್ರೀ ಶಂಕರಭಟ್ಟರನ್ನು ಒಳ್ಳೆಯ ಮೃದಂಗವಾದಕರನ್ನಾಗಿ ಮಾಡಿದೆ. ನನ್ನ ತಂಗಿ ಶ್ರೀಮತಿ ಸರಸ್ವತಿಗೆ ಭರತನಾಟ್ಯ ಪ್ರದರ್ಶನ ಕೊಡುವಷ್ಟು ಕಲಿಯುವಂತೆ ಏರ್ಪಡಿಸಿದ್ದರು. ಇನ್ನೊಬ್ಬಳು ತಂಗಿ ಶ್ರೀಮತಿ ಶಂಕರಿ ವೀಣಾವಾದನದಲ್ಲಿ ತಕ್ಕಷ್ಟು ಕಲಿಯುವಿಕೆ ಮಾಡಿದ್ದಾಳೆ. ಕುಕ್ಕಿಲ ಕೃಷ್ಣ ಭಟ್ಟರ ಮಕ್ಕಳೆಂದು ಹೇಳಿಕೊಳ್ಳುವುದು ಹೆಮ್ಮೆಯ ವಿಷಯವೇ ಆಗಿದೆ.
೧೯೭೫ರಲ್ಲಿ ಅವರು ಮೈಸೂರಿನಿಂದ ಪುನಃ ಇಲ್ಲಿಗೆ ಬಂದು ನೆಲಸಿದ ಮೇಲೆ ಇಲ್ಲಿಗೆ ಆಗಾಗ್ಗೆ ಬರುತ್ತಿದ್ದವರೆಂದರೆ ಶ್ರೀ ಪ್ರಭಾಕರ ಜೋಶಿಯವರು. ತಂದೆಯವರು ಮಂಗಳೂರಿಗೆ ಹೋಗಿರುವಾಗ ಶ್ರೀ ಜೋಶಿಯವರ ಮನೆಯಲ್ಲೇ ತಂಗುತ್ತಿದ್ದುದುಂಟು. ಶ್ರೀ ಜೋಶಿಯವರು ಬಂದಿರುವಾಗ ಅವರುಗಳು ಮಾತನಾಡಿಕೊಳ್ಳುತ್ತಿದ್ದ ವಿಚಾರ, ಹೆಚ್ಚಾಗಿ ಯಕ್ಷಗಾನವೇ, ನನ್ನೊಡನೆ ಶ್ರೀ ಜೋಶಿಯವರ ವಿಚಾರ ತುಂಬಾ ಅಭಿಮಾನದಿಂದ ಆಗಾಗ್ಗೆ ಹೇಳುತ್ತಿದ್ದರು.
ಶ್ರೀ ಕುಕ್ಕಿಲ ಕೃಷ್ಣ ಭಟ್ಟರು ಸಂಶೋಧನೆ ನಡೆಸಿ ಸಿದ್ಧಾಂತಪಡಿಸಿದ ಹಲವು ವಿಚಾರಗಳನ್ನು ಇಂದಿನ ಉದಯೋನ್ಮುಖ ವಿದ್ವಾಂಸರು ತಮ್ಮ ಭಾಷಣಗಳಲ್ಲಿ ಬರಹಗಳಲ್ಲಿ ತಮ್ಮದೇ ಸ್ವಂತ ಸಂಶೋಧನೆ ಅನಿಸಿಕೆ ಎಂಬಂತೆ ಪ್ರಸ್ತುತಪಡಿಸುವುದು ಬೇಸರದ ವಿಚಾರವಾಗಿದೆ. ಅವರ ವಿದ್ವತ್ತಿಗೆ ತಕ್ಕ ಮನ್ನಣೆ ಅವರ ಜೀವಿತ ಕಾಲದಲ್ಲೂ ಸಿಕ್ಕಿಲ್ಲ ಈಗಲೂ ಸಿಗುತ್ತಿಲ್ಲ ಎಂದು ನನ್ನ ಅನಿಸಿಕೆ.