ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - ಬಯಲಾಟ / ೮೯

ರಂಜಿಸಬಲ್ಲನಾದುದರಿಂದಲೇ ಕವಿ ಅವನನ್ನು ಇಂಪಾಣ'ನೆಂದು ಕರೆದಿದ್ದಾನೆ” ಎಂದು ಪದ್ಮದ 'ಇಂಪಾಣ' ಪದದ ಅರ್ಥವನ್ನು ಬಿಡಿಸಿದ್ದಾರೆ.
ಇನ್ನು 'ತಾಳಮನಿತ್ತು ಸಮ್ಮನಿಸದು' ಎಂಬಲ್ಲಿರುವ 'ಸಮ್ಮನಿಸದು' ಎಂಬ ಪದಕ್ಕೆ 'ಸರಿಗೊಳ್ಳದು' ಎಂದು ತಿಮ್ಮಪ್ಪಯ್ಯನವರೂ, 'ಸಮಗೊಳ್ಳದು' ಎಂದು ಕಾರಂತರೂ ಅರ್ಥಮಾಡಿರುವುದನ್ನು ಒಪ್ಪದೆ ತಮ್ಮ ವ್ಯಾಖ್ಯಾನವನ್ನು ಮುಂದುವರಿಸಿದ್ದಾರೆ. -ಸಂ)
'ತಾಳಮನಿತ್ತು ಸಮ್ಮನಿಸದು' ಎಂಬ ಪದ್ಯ ವಾಕ್ಯಕ್ಕೆ 'ಅನಿತ್ತು ತಾಳಂ ಸಮ್ಮನಿಸದು' ಎಂಬುದು ಸಹಜವಾದ ಗದ್ಯರೂಪ. ಆಷ್ಟೋ ತಾಳಗಳು ಎಂದರೆ, ಇರುವ ತಾಳಗಳಲ್ಲಿ ಯಾವುದೊಂದೂ ಇಲ್ಲಿ ಗೋಚರವಾಗುವುದಿಲ್ಲ ಎಂಬುದು ಆ ವಾಕ್ಯದ ಸರಳವಾದ ಅರ್ಥ. ತಾಳವು ಗೋಚರವಾಗುವುದಕ್ಕೆ ಎಕ್ಕಲಗಾಣನ ತಾಳಜ್ಞಾನಹೀನತೆ ಕಾರಣವಲ್ಲ, ಅಲ್ಲಿ ಅವನು ಮಾಡಿದ್ದು, ಗೀತವನ್ನು ಹಾಡುವುದಕ್ಕೆ ಮೊದಲು ಮಾಡತಕ್ಕ ರಾಗಾ ಲಾಪನೆ, ತಾಳಬದ್ದ ವಲ್ಲದ ರಾಗಾಲಪ್ತಿ.
ಅಗ್ಗಳನ ಆ ಪದ್ಯದಲ್ಲಿ 'ಆಣತಿಮಾಡಿ' ಎಂಬಲ್ಲಿಗೆ, ಎಕ್ಕಲಗಾಣನ ರಾಗಾಲಾಪ ವನ್ನು ವರ್ಣಿಸುವ ಪೂರ್ವಕಾಲಿಕ ವಾಕ್ಯವೊಂದು ಮುಗಿಯುತ್ತದೆ. ಮೇಲೆ ವಿವೇಚಿಸಿದ ಅದರ ಅರ್ಥವು ಸಂಗ್ರಹವಾಗಿ ತಿಳಿಯುವಂತೆ ಅನ್ವಯಾನುಸಾರವಾಗಿ ಅದನ್ನು ಅನುವಾದಿಸುತ್ತೇನೆ-
"ಇಲ್ಲಿ ಯಾವ ತಾಳವೂ ಗೋಚರವಾಗುವುದಿಲ್ಲ; ಇಲ್ಲಿ ವಂಶವಾದ್ಯದ ಮಧುರ ಸ್ವರಮೇಳವೇನೂ ಇಲ್ಲ; ಇಲ್ಲಿ ವೀಣೆಯ ಸ್ವರವೂ ಇಲ್ಲ ಎಂದೆನಿಸುವ ರಾಗಾಲಾಪ ವನ್ನು ಮಾಡಿ-" ಪ್ರಸ್ತುತ ಪದ್ಯದ ಇನ್ನುಳಿದ ಭಾಗದ ಅರ್ಥದಲ್ಲಿ ಕ್ಲಿಷ್ಟವಾದ್ದೇನೂ ಇಲ್ಲ. ಸಾಳಗದ ದೇಸಿಯ ಗೀತವೊಂದನ್ನು ಹಾಡಿದನು ಎಂಬುದಷ್ಟೆ. ಹೀಗಿರುವುದರಿಂದ, ಆ ಪದ್ಯದಲ್ಲಿ ಹೇಳಿದ ಎಕ್ಕಲಗಾಣನೆಂದರೆ ಯಕ್ಷಗಾನವಲ್ಲ; ಎಡಬಲಗಳಲ್ಲಿ ವಾದ್ಯಸಹಾಯವಿದ್ದು ಕೈಯಲ್ಲಿ ಜಾಗಟೆಯೋ, ತಾಳವೋ ಹಿಡಿದು ಹಾಡುವ ಯಕ್ಷಗಾನ ಭಾಗವತನೂ ಅಲ್ಲ. ಹಾಗೂ ಯಕ್ಷಗಾನವು ಜಾನಪದವೆಂಬುದಕ್ಕೆ ಆ ಪದ್ಯದಲ್ಲಿ ಯಾವ ಸಮರ್ಥನೆಯೂ ದೊರೆಯುವುದಿಲ್ಲವೆಂಬುದು ಈ ನಮ್ಮ ವಿವೇಚನೆಯಿಂದ ವಾಚಕರಿಗೆ ಖಚಿತವಾಗಬಹು ದೆಂಬುದು ನಂಬುತ್ತೇನೆ.
ಕಾರಂತರು 'ಭರತೇಶವೈಭವ'ದಲ್ಲಿ (ಪೂರ್ವ ನಾಟಕ ಸಂಧಿ - ೨೮- ೨೯) 'ಎಕ್ಕಡಿಗ ಎಂಬ ಶಬ್ದವನ್ನು ಕಂಡು ಅಲ್ಲಿಯೂ ಯಕ್ಷಗಾನದ ಕುರುಹುಗಳನ್ನು ಕಾಣುತ್ತಾರೆ.
'ಎಕ್ಕಡಿಗ' ಎಂಬ ಶಬ್ದವು ಕಿಟ್ಟೆಲ್ಲರ ಕೋಶದಲ್ಲಿಲ್ಲವಾದರೂ, ಅದರ ಇನ್ನೊಂದು ರೂಪವೇ ಆಗಿರಬೇಕಾದ 'ಎಕ್ಕಟಿಗ' ಎಂಬುದಕ್ಕೆ A Superior noble or great man ಎಂದು ಅರ್ಥವಿದೆ, ಅಲ್ಲದೆ (ತೆಲುಗಿನ) ಎಕ್ಕಾಡು' ಎಂಬ ಶಬ್ದವನ್ನು ಕಿಟ್ಟೆಲ್ಲರು ಉದಾಹರಿಸಿ, ಅದರ ಅರ್ಥವನ್ನು Greatness ಎಂದೂ ಕೊಟ್ಟಿದ್ದಾರೆ. ಹಾಗಾದರೆ 'ಎಕ್ಕಡಿಗ' ಎಂದರೆ 'ಶ್ರೀಮಂತ', 'ದೊಡ್ಡ ಮನುಷ್ಯ' - ಎಂಬರ್ಥವೆಂದಾಯಿತು. ಮೇಲೆ ತೋರಿಸಿದ ಸಂದರ್ಭಕ್ಕೆ ಈ ಅರ್ಥವು ಸಂಪೂರ್ಣ ಉಚಿತವಾಗಿದೆಯೆಂಬುದನ್ನು ವಿವರಿಸಬೇಕಾಗಿಲ್ಲ. ಮುಂದೆ ಅಲ್ಲಿ ಪ್ರದರ್ಶಿತವಾದುದೂ ನರ್ತಕಿಯರಿಬ್ಬರ ಕೇವಲ ನರ್ತನ, ಯಕ್ಷಗಾನ ವೈಶಿಷ್ಟ್ಯಗಳಾವುವೂ ಅಲ್ಲಿ ಗೋಚರವಾಗುವುದಿಲ್ಲ. ಮತ್ತು