ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ - 'ತಾಳಮದ್ದಳೆ' / ೧೨೧

ಆ ತುಳುನಾಡ ದೇವಸ್ಥಾನಗಳ ಸೇವೆಯಲ್ಲಿ ನಿಯುಕ್ತರಾಗಿದ್ದವರಲ್ಲಿ 'ಪಾಟಾಳಿ', 'ಪದಾರ್ಥಿ' ಎಂಬ ಎರಡು ವರ್ಗದವರಿದ್ದಾರೆ. 'ಪಾಟಾಳಿಗಳು' ಹಾಡುವುದಕ್ಕಾಗಿಯೂ, 'ಪದಾರ್ಥಿ'ಗಳು ಪದದ ಅರ್ಥಹೇಳುವುದಕ್ಕಾಗಿಯೂ ನೇಮಕಗೊಂಡಿದ್ದವರೆಂಬುದು ಆ ಹೆಸರುಗಳಿಂದಲೇ ಸ್ಪಷ್ಟವಾಗುವುದು. ಈಗ ಆ ಪದಾರ್ಥಿಗಳಿಗೆ, ನಿತ್ಯ ಬಲಿ ಪೂಜಾದ್ಯವ ಸರಗಳಲ್ಲಿ ಚೆಂಡೆ, ಪಟ, ತಿಬಿಲೆ (ತ್ರಿವಳಿ) ಮುಂತಾದ ವಾದ್ಯಬಾರಿಸುವ ಊಳಿಗವಾಗಿದೆ. ಈ ಊಳಿಗವನ್ನವರು ಮೊದಲೂ ಮಾಡುತ್ತಿದ್ದಿರಲಿಕ್ಕೆ ಸಾಕು; 'ತಾಳಮದ್ದಳೆ ಸೇವೆ'ಯಲ್ಲಿ ಮದ್ದಳೆ ಬಾರಿಸುವ ಮತ್ತು ಅರ್ಥಹೇಳುವ ಎರಡು ಕೆಲಸಗಳೂ ಅವರಿಗಿದ್ದಿರುವುದು ಅಸಂಭಾವ್ಯವಲ್ಲ. ಈ ಪದಾರ್ಥಿ ಪಾಟಾಳಿಗಳು ಪರಂಪರೆಯಿಂದ ಯಕ್ಷಗಾನದಲ್ಲಿ ಪ್ರವೀಣರು. ಇವರಲ್ಲಿ ಅನೇಕರು ಭಾಗವತರಾಗಿಯೂ, ಅರ್ಥಧಾರಿಗಳಾಗಿಯೂ, ಆಟದ ವೇಷಧಾರಿಗಳಾಗಿಯೂ, ಯಕ್ಷಗಾನ ಕವಿಗಳಾಗಿಯೂ ಮೆರೆದಿದ್ದರು, ಈಗಲೂ ಇದ್ದಾರೆ. ಕುಂಬಳೆಯ ಪ್ರಸಿದ್ಧ ಕವಿ ಪಾರ್ತಿಸುಬ್ಬನು ಅಲ್ಲಿಯ 'ಕಣಿಪುರಕೃಷ್ಣ' ದೇವಸ್ಥಾನದ ಪಾಟಾಳಿಯಾಗಿದ್ದವನೆಂದು ಹೇಳುತ್ತಾರೆ. ('ಪಾರ್ತಿಸುಬ್ಬ' ಗ್ರಂಥ- ದಿ. ಮುಳಿಯ ತಿಮ್ಮಪ್ಪಯ್ಯ).

ಅಲ್ಲಿ ಈ ಅರ್ಥ ಹೇಳುವ ಸಂಪ್ರದಾಯವುಂಟಾಗಿರುವುದಕ್ಕೆ ಪ್ರಾಯಶಃ ಅದು ತುಳು ನಾಡಾಗಿದ್ದುದೇ ಕಾರಣ. ಇನ್ನೂರು ಮುನ್ನೂರು ವರ್ಷಗಳ ಹಿಂದೆ ನೋಡಿದರೆ, ಅಲ್ಲಿ ಸಾಮಾನ್ಯವಾಗಿ ಪದ್ಯದ ಅರ್ಥ ಮಾಡಿಕೊಳ್ಳುವಷ್ಟು ಸಾಹಿತ್ಯ ಜ್ಞಾನವಿದ್ದವರ ಸಂಖ್ಯೆ ಬಹಳ ಕಡಿಮೆಯಿದ್ದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಆದುದರಿಂದ ಅರ್ಥಹೇಳುವ ಆವಶ್ಯಕತೆಯುಂಟಾಯಿತು. ಅದಕ್ಕಾಗಿ 'ಪಾಟಾಳಿಯೊಂದಿಗೆ' 'ಪದಾರ್ಥಿ'ಯೂ ನೇಮಿ ಸಲ್ಪಟ್ಟನು. ದೇವಸ್ಥಾನಗಳಲ್ಲಿ ಪ್ರಾಯಶಃ ಪದಾರ್ಥಿಯೊಬ್ಬನೇ ಎಲ್ಲ ಪದ್ಯಗಳ ಅರ್ಥ ವನ್ನು ವಿವರಿಸುತ್ತಿದ್ದಿರಬಹುದಾದರೂ ಸಭಾರೂಢಿಯಲ್ಲಿ ಕ್ರಮೇಣ, ಸಾಮಾಜಿಕರಲ್ಲಿ ಸಮರ್ಥರಾದ ಒಬ್ಬೊಬ್ಬರು ಒಂದೊಂದು ಭೂಮಿಕೆಗಳನ್ನು ವಹಿಸಿಕೊಂಡು ನಾಟಕೀಯ ವಾಗಿ ಅರ್ಥ ವಿಸ್ತರಿಸುವ ಕ್ರಮ ಏರ್ಪಟ್ಟಿತು. ಆದರೆ ಇದು ನಾಟಕದಂತೆ ಕಲಿತು ಹೇಳುವ ಬಾಯಿಪಾಠದ ಮಾತಲ್ಲ. ಪದ್ಯದಲ್ಲಿ ವಸ್ತುತಃ ಸಂಕ್ಷಿಪ್ತವಾಗಿರುವುದನ್ನು ಸ್ವಂತ ವಾಕ್ಯ ಗಳಿಂದ ವಿಸ್ತಾರವಾಗಿಯೂ, ಕ್ಲಿಷ್ಟವಾಗಿರುವುದನ್ನು ಸರಳವಾಗಿಯೂ ಆಯಾ ಭೂಮಿಕೆಯ ಸ್ವಭಾವ, ಹಾಗೂ ಆಯಾ ಪ್ರಕರಣಗಳ ರಸಭಾವಾದಿ ಸಂದರ್ಭಗಳಿಗೆ ತಕ್ಕಂತೆ ಧ್ವನಿಭೇದ ಗಳಿಂದ 'ಪಾಠ್ಯಕ್ರಮ'ದಲ್ಲಿ ನಿರೂಪಿಸುವುದಾಗಿದೆ. ಅಂಥ ವಾಕೌಶಲ್ಯವೂ, ಪ್ರಸಂಗಾವ ಧಾನವೂ ಇದ್ದ ವ್ಯುತ್ಪನ್ನರಿಗೆ ಮಾತ್ರ ಈ ಕಲೆ ಸಿದ್ಧಿಸುವುದು. ಪೌರಾಣಿಕ ಕಥಾವಸ್ತು ಗಳಾಗಿರುವುದರಿಂದ ದೇವದಾನವಾದಿ ಪಾತ್ರಗಳ ವಾಗೋರಣೆಯು 'ನಾಟ್ಯಧರ್ಮಿ ಯಲ್ಲೇ ನಡೆಯಬೇಕು, ಹೊರತು ಸಾಮಾಜಿಕ ನಾಟಕ ಪಾತ್ರಗಳು ಮಾತಾಡುವಂತೆ 'ಲೋಕಧರ್ಮಿ'ಯ ಸ್ವಾಭಾವಿಕ ಶೈಲಿ ಅದಕ್ಕೆ ಒಪ್ಪುವುದಿಲ್ಲ. ಆದುದರಿಂದ ಅರ್ಥಧಾರಿ ಗಳಿಗೆ ವಿಶೇಷವಾಗಿ ಅಂಥ ಕಂಠಸ್ವರವೂ ಇರಬೇಕಾಗುವುದು. ರಾಕ್ಷಸರ ಭೂಮಿಕೆಯನ್ನು ವಹಿಸಲು ಕಠೋರಕರ್ಕಶ ಕಂಠವುಳ್ಳವನೇ ಆಗಬೇಕು. ಸ್ತ್ರೀಪಾತ್ರವು ಕೋಮಲಕಂಠ ವುಳ್ಳವರಿಗೇ ಪ್ರಶಸ್ತವಾಗುವುದು. ವಯಸ್ಸಿಗೂ ಕಂಠಸ್ವರಕ್ಕೂ ಸಂಬಂಧವಿರುವುದರಿಂದ ಪಾತ್ರವಹಿಸುವವರ ವಯೋಗುಣವೂ ಆಯಾ ಭೂಮಿಕೆಗೆ ತಕ್ಕಂತೆ ಇರಬೇಕು. ಋಷಿಗಳ ಭೂಮಿಕೆಯು ಸಾಮಾನ್ಯವಾಗಿ ವಯಸ್ಸಾದವರಿಗೇ ಒಪ್ಪುವುದು. ರಾಜಪುತ್ರಾದಿಗಳ ಪಾತ್ರವಾದರೆ ತರುಣರಿಗೇ ಹೇಳಿದ್ದು, ಈ ಔಚಿತ್ಯವನ್ನರಿತು ಪಾತ್ರಗಳನ್ನು ಆಯ್ಕೆ ಮಾಡಿದರೆ ಮಾತ್ರ ತಾಳಮದ್ದಳೆ ಕಳೆಗೂಡುವುದು. ಈ ಗುಣಗಳೆಲ್ಲ ವೂ ಸೇರಿ ಬಂದದ್ದಾದರೆ ಆಟಕ್ಕಿಂತ ಹೆಚ್ಚಿನ ರಸಪರಿಪೋಷಕ್ಕೆ ಇದರಲ್ಲಿ ಅವಕಾಶವುಂಟು.