ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೮ / ಕುಕ್ಕಿಲ ಸಂಪುಟ

ಸುಸಂಬದ್ಧವಾದ ಅರ್ಥವು ದುರೂಹ್ಯವಾಗಿದೆ" ಎಂದು ಹೇಳಿ, "ಪಂಚಮನುಣ್ಚರ" ಎಂಬಲ್ಲಿ ಅರಿಸಮಾಸದೋಷವಿದ್ದು, “ಅಗ್ಗಳನಂತಹ ವಿದ್ವತ್ ಕವಿ ಇಂತಹ ಪ್ರಯೋಗವನ್ನು ಮಾಡಿರಲಿಕ್ಕಿಲ್ಲವೆಂಬ ಬಗೆಯಿಂದ ಪ್ರಯೋಗದ ಪಾಠಶೋಧನೆಗೆ ತೊಡಗಿ, (ಅಂದಿನ) ಮೈಸೂರು ಗೌ|| ಓ|| ಲೈಬ್ರೆರಿಯ (A೪೧) ಹಸ್ತಪ್ರತಿಯಲ್ಲಿನ 'ಪಂಚದನುಣ್ಣರ' ಎಂಬ ಪಾಠವನ್ನು ಸ್ವೀಕರಿಸಿ; ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ "ವಂಶ (ಬಿದಿರಿನ ಕೊಳಲು), ವೀಣಾ, ಶರೀರ" (ಕಂಠ) ಎಂಬ ಮೂರು ಸ್ವರ ಸಾಧನಗಳು, ಅವುಗಳೊಳಗೆ ವಂಶವು ಶ್ರೇಷ್ಠವಾದದ್ದು. ಹಾಡುವವನು ಯಾವ ಯಾವ ಸ್ವರಗಳಲ್ಲಿ ಸಂಚರಿಸಬೇಕೋ ಅವನ್ನು ವಂಶವಾದ್ಯದಲ್ಲಿ (ಮೊದಲಾಗಿ ಬಾರಿಸಬೇಕು' ಎಂದಿರುವುದನ್ನು ಉಲ್ಲೇಖಿಸಿ ವಂಚ, ಬಂಚ (= ಕೊಳಲು ಅಥವಾ ಯಾವುದಾದರೂ ಸುಷಿರವಾದ್ಯ) ಪ್ರಯೋಗಗಳಿಗೆ ನೇಮಿಚಂದ್ರನ 'ಲೀಲಾವತಿ' (೯-೬೮), 'ವಿರೂಪಾಕ್ಷಾಸ್ಥಾನ ವರ್ಣನೆ', ಯಕ್ಷಗಾನದ 'ಸಭಾಲಕ್ಷಣ' ಮುಂತಾದ ಆಧಾರಗಳನ್ನು ಕೊಟ್ಟು, “ಪೂರ್ವಕಾಲದಲ್ಲಿ ಹಾಡುಕಾರರು ವಂಶವನ್ನೂ, ವೀಣೆಯನ್ನೂ ಪಕ್ಕವಾದ್ಯಗಳಾಗಿ ಉಪಯೋಗಿಸುತ್ತಿದ್ದರೆಂದು ಇದರಿಂದ ಸ್ಪಷ್ಟವಾಗುವುದು. ವಂಶ ಎಂಬುದಕ್ಕೆ ಕನ್ನಡದಲ್ಲಿ 'ವಂಸ', 'ವಂಚ', 'ಬಂಚ' ಎಂಬ ತದ್ಭವ ರೂಪಗಳು ಕನ್ನಡ ಸಾಹಿತ್ಯದಲ್ಲಿ ದೊರಕುತ್ತವೆ" ಎಂದು ವಿವರಿಸಿ, “ಈ ಪಾಠದಂತೆ 'ಒತ್ತುವ ಪಂಚದ ನುಣ್ಚರಕ್ಕಣಂ ಮೇಳತೆಯಿಲ್ಲ" ಎಂಬ ವಾಕ್ಯಕ್ಕೆ-ಒತ್ತುವ ಎಂದರೆ 'ಊದುವ ವಂಶವಾದ್ಯದ ಮಧುರ ಸ್ವರದ ಮೇಳವೇನೂ ಇಲ್ಲದೆ' ಎಂಬ ಸರಳವೂ, ಸಮಂಜಸವೂ ಆದ ಅರ್ಥ ಒದಗುತ್ತದೆ. ಇದು ಎಕ್ಕಲಗಾಣನ ಹಾಡುಗಾರಿಕೆಯ ಸ್ವರೂಪವನ್ನು ನಮಗೆ ಮತ್ತಷ್ಟು ಸ್ಪಷ್ಟವಾಗಿ ತಿಳಿಸುವುದು” ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಲೇಖಕರು.

'ವಂಶ'ವು 'ವಂಚ', 'ಬಂಚ' ಎಂದಾಗುವುದು ಸರಿಯೆ. 'ಪಂಚ' ಎಂದಾಗುವುದು (ವಕಾರ ಪಕಾರವಾಗುವುದು) ತದ್ಭವೀಕರಣ ನಿಯಮಕ್ಕೆ ವಿರುದ್ಧವಾಗಿದೆ. ಆದರೆ, ದಕ್ಷಿಣ ಕನ್ನಡ ಪ್ರಾಂತದಲ್ಲಿ ಬಿದಿರಿನ ಕುಕ್ಕೆಗೆ 'ಪಂಚಕುಕ್ಕೆ' ಎಂದೂ, “ಯಕ್ಷಗಾನ ಸಭಾಲಕ್ಷಣದಲ್ಲಿ ಬರುವ ದಶಾವತಾರ ಕೋಲಾಟದ ಪದದಲ್ಲಿ 'ಪಂಚದಾ ಕೋಲು ಕೋಲೆನ್ನಿರೋ' ಎಂಬ ಸೊಲ್ಲು ಬರುತ್ತದೆ. ಈ ಪಂಚದ ಕೋಲು ಎಂದರೆ ಬಿದಿರ ಕೋಲೇ ಸರಿ' ಎಂದೂ, ವೇಣುವಾದ್ಯವು (ವಂಶ) ಮೂಲತಃ ಬಿದಿರಿನಿಂದ ಮಾಡಿದ್ದಿದ್ದರೂ ಕ್ರಮೇಣ ಸಂಗೀತ ಶಾಸ್ತ್ರ ಸಂಪ್ರದಾಯದಲ್ಲಿ ಊದುವ ಸುಷಿರ (ಕೊಳವೆ) ವಾದ್ಯಗಳೆಲ್ಲವಕ್ಕೂ ವಂಶವಾದ್ಯವೆಂದೇ ಕರೆಯಲಾಗಿದೆ" ಎಂದೂ ಮುಂತಾಗಿ ಆಧಾರಗಳನ್ನು ತಿಳಿಸಿ, 'ವಂಶ = ಪಂಚ' ಎಂಬ ಸಮೀಕರಣವನ್ನು ಲೇಖಕರು ಸಾಧಿಸಿದ್ದಾರೆ.

ಇನ್ನು ಪದ್ಯದ "ಬೀಣೆಯ ಸರಂಬಿಡದಿಲ್ಲಿ" ಎಂಬ ವಾಕ್ಯಕ್ಕೆ ತಿಮ್ಮಪ್ಪಯ್ಯನವರು ಹೇಳಿದ- "ವೀಣಾನಾದವು ಇಲ್ಲಿ ಎಡೆಗೊಳ್ಳುವುದು" ಎಂಬ ಅರ್ಥವು ಸಮಂಜಸವಾಗಿಲ್ಲ ಎಂದು ಅಭಿಪ್ರಾಯಪಟ್ಟು, "ಎಕ್ಕಲಗಾಣನ ಹಾಡುಗಾರಿಕೆಗೆ ಯಾವ ವಾದ್ಯದ ಸಹಾಯವೂ ಇಲ್ಲವಾದ್ದರಿಂದ, 'ಸ್ವರವು ಬಿಡದು', 'ವೀಣೆಯ ಸ್ವರವು ಹೊರಡುವುದಿಲ್ಲ' ಎಂಬ ಅರ್ಥವೇ ಸಂದರ್ಭೋಚಿತವಾಗಿದೆ, ವ್ಯಾಕರಣದ ದೃಷ್ಟಿಯಿಂದಲೂ ಅದೇ ಉಚಿತತರ. ಸಾಧಾರಣವಾಗಿ ಹಾಡುಗಾರರು ಅವಲಂಬಿಸುತ್ತಿದ್ದ ವಾದ್ಯಗಳೊಳಗೆ ಒಂದೂ ಇಲ್ಲಿ ಇಲ್ಲ ಎಂದು ಹೇಳುವುದೇ ಕವಿಯ ಉದ್ದೇಶ ತಾನೆ" ಎಂದು ಲೇಖಕರು ಕವಿಯ ಆಶಯವನ್ನು ಸ್ಪಷ್ಟಪಡಿಸಿದ್ದಾರೆ. “ಹೀಗೆ ಯಾವುದೊಂದು ವಾದ್ಯ ಸಹಾಯವಿಲ್ಲದೆಯೂ