ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೪೫

ಬಗ್ಗೆ, ಅಪ್ಪಕಜ್ಜಾಯದ ಅಕ್ಕಿ ಕುಟ್ಟುವ ಬಗ್ಗೆ ಬ್ರಾಹ್ಮರ ಎಂಜಲು ತೆಗೆಯುವ ಬಗ್ಗೆ ಬಂಟರಿಗೆ ಇಕ್ಕುವ ಬಗ್ಗೆ ಸಹ...' ಈ ಪಟ್ಟಿಯಲ್ಲಿ ಕಾಣುವಂತೆ ಪಾರ್ತಿಸುಬ್ಬನ ಹೆಸರು ಮೊದಲನೆಯದಾಗಿ ಬಂದಿದೆಯಷ್ಟೆ. ಇದರಿಂದ ಆತನು ಕಣಿಪುರದಲ್ಲಿದ್ದವನೆಂದೂ, ಮದವೂರು ವಿಘ್ನೇಶನ ಭಕ್ತರಲ್ಲಿ ಪ್ರಮುಖನೆಂದೂ ತಿಳಿಯಬಹುದಾಗಿದೆ. ಈ ಮೂಡಪ್ಪ ಸೇವೆಯು ನಡೆದ ಆ ಪಿಂಗಳ ಸಂವತ್ಸರದ ವೈಶಾಖ ಬ| ೪ಯು ಆದಿತ್ಯವಾರ ಎಂಬುದು ದಿ| ಸ್ವಾಮಿ ಕಣ್ಣು ಪಿಳ್ಳೆಯವರ Indian Ephemeris ಪ್ರಕಾರ ತಾ. ೧೪-೫-೧೭೯೭ಕ್ಕೆ ಸರಿಯಾಗಿರುತ್ತದೆ. ಇದು ಆತನ ಕಾಲ ನಿರ್ಣಯಕ್ಕೂ ನ್ಯಾಯವಾದ ಆಧಾರವಾಗಿದೆಯಷ್ಟೆ. ಮದವೂರು ವಿಘ್ನೇಶನಲ್ಲಿ ಆತನಿಗೆ ವಿಶೇಷ ಭಕ್ತಿ ಇದ್ದಿತ್ತೆಂಬುದಕ್ಕೆ ಇನ್ನೂ ಒಂದು ಆಧಾರವಿದೆ. ಆ ದೇವಸ್ಥಾನದಲ್ಲಿ ಅಭಿಷೇಕಕ್ಕಾಗಿರುವ ತಾಮ್ರದ ಜಲದ್ರೋಣಿಯ ಮೇಲೆ 'ಪಾರ್ತಿಸುಬ್ಬನು ಕೊಟ್ಟ ಕಾಣಿಕೆ' ಎಂದು ಕೆತ್ತಿದ ಅಕ್ಷರಗಳಿರುವುದನ್ನು ಈಗಲೂ ಕಾಣಬಹುದು. ನಿಮ್ಮ ಮುಂದಿಟ್ಟಿರುವ ಈ ಎರಡನೆ ಆಧಾರ ಪತ್ರವು ೧೮೨೭ನೆ ಇಸವಿಯಲ್ಲಿ ಬೇಕಲ ತಾಲೂಕು ಮುನ್ಸಿಫ ಕಚೇರಿಯಿಂದ ಕೊಡಲಾಗಿದ್ದ ಪಾರ್ತಿಸುಬ್ಬನ ಮನೆ ಹಿತ್ತಲಿನ ಕುರಿತಾದ ವ್ಯವಹರಣೆಯ ತೀರ್ಪಿನ ಮೂಲಪ್ರತಿಯಾಗಿದೆ. ವಿವರಣೆಗಾಗಿ ಅದರ ಮುಖ್ಯಾಂಶಗಳನ್ನು ಓದಿ ಹೇಳುತ್ತೇನೆ. “ಸಂ ೧೮೨೬ನೆ ಇಸವಿ ನಂಬ್ರ ೬೬೧- ಕನಡಾ ಜಿಲ್ಲಾ ಅದಾಲತ್ತ ಇಲಾಖೆ ಬೇಕಲ ತಾಲೂಕು ಮುನಶೀಫ ಕಚೇರಿಯಿಂದ-ವಾದಿ ಬೇಕಲ ತಾಲೋಕು ಕಾಸರಗೋಡು ಮಾಗಣೆ ಕೂಡ್ಲ ಗ್ರಾಮದಲ್ಲಿರುವ ಪಾಡಿ ವೆಂಕಟೇಶ ಶ್ಯಾನುಭೋಗನ ಮಗ ಲಿಂಗಪ್ಪ- ವಕೀಲ ಸುಬ್ಬಯ್ಯ- ಪ್ರತಿವಾದಿರು ಸದ್ರಿ ತಾಲೋಕು ಕುಂಬಳೆ ಮಾಗಣೆ ತಲಕದ ಗ್ರಾಮದ ಕಣಿಪುರ ಪೇಟೆಯಲ್ಲು ಇರುವ ಮಾನುದಾಸನ ತಮ್ಮ ಪಾರ್ತಿಸುಬ್ಬಣ್ಣ ೧, ಪೂವಯ್ಯನ ಗೌಡಿ ಪೊಕ್ಕು ಯಾನೆ ವೆಂಕು ಹೆಂಗ್ಸು ೧.”
ವಾದಿ ಕೈಪೇತಿನಲ್ಲು ಜಾಹೀರು ಮಾಡಿದ್ದು ಏನಂದ್ರೆ- ಒಂದನೆ ಪ್ರತಿವಾದಿಯು ಈತನ ಬಾಬ್ತು ಸದ್ರಿ ಗ್ರಾಮದ ಪಟ್ಟೆಯಲ್ಲು ಇರುವ ೧|||, ಬೇರೇಜಿನ ಹಿತ್ತಲು ಒಂದನ್ನು ಗ, ೧೦ಕ್ಕೆ ಇಳಿದಾರುವಾರ ಮಾಡಿ ವ್ಯಯ ಸಂ|ದ ಕಾರ್ತಿಕ ಬ| ೭ರಲ್ಲು ಬರಕೊಟ್ಟ ದಸ್ತೈವಜು ಪ್ರಕಾರ ಸದ್ರಿ ಹಿತ್ತಲು ವಪ್ಪಿಸಿಕೊಳ್ಳುವರೆ ಎರಡನೆ ಪ್ರತಿವಾದಿಳು ಒಂದನೆ ಪ್ರತಿವಾದಿ ಕೂಮುಕ್ಕಿನಿಂದ ಹರಕತ್ತು ಮಾಡಿ ಬಿಟ್ಟುಕೊಡದೆ ಇರುವುದರಿಂದ...ಎರಡನೆ ಪ್ರತಿವಾದಿಳ ಜವಾಬಿನಲ್ಲು- ಕುಂಪನಿ ಅಮಲು ಆದ ಲಾಗಾಯಿತು ಈಗ ಹದಿನೈದು ವರ್ಷದಾರಭ್ಯಕ್ಕೂ ಕಾ...ತಿಮ್ಮಪ್ಪ ಸಹ ಸದ್ರಿ ಹಿತ್ತಲಲ್ಲು ಇದ್ದು... ಅನುಭವಿಸಿಕೊಂಡು ಬರುತ್ತಿದ್ದೆ. ಈ ಒಂದನೆ ಪ್ರತಿವಾದಿಯು ಊರು ಬಿಟ್ಟು ಓಡಿಹೋಗಿ ಕೊಡಗು ಜಿಲ್ಲೆಯಲ್ಲಿ ಇದ್ದ... ಸದ್ರಿ ದೇವಸ್ಥಾನದ ಕೃಷ್ಣ ಅಡಿಗಳ ೧ ಪಾಟಾಳಿ ಮಾಧವ ೧ (ಸಾಕ್ಷಿ) ಹೇಳುತ್ತಾರೆ. ಈ ಎರಡನೆ ಪ್ರತಿವಾದಿಳು ಒಂದನೆ ಪ್ರತಿವಾದಿ ಅಣ್ಣನ ಮಗ ತಿಮ್ಮಪ್ಪ ಎಂಬವ ಇಟ್ಟುಕೊಂಡವಳು. ಆದ್ರಿಂದ ಈ ಎರಡನೆ ಪ್ರತಿವಾದಿಳಿಗೆ ಆ ಹಿತ್ತಲಲ್ಲಿ ಏನೂ ಬಾದ್ಯಸ್ತಿಕೆ ಇರುವುದಿಲ್ಲ... ಆ ಹಿತ್ತಲಿಗೆ `ಬೇರೆ ಯಾರಿಗಾರೂ ಹಕ್ಕು ವಗೈರೆ ಜನರು ಕಚೇರಿ ಮಜೂರಿಗೆ ಅರ್ಜಿ ಜಾಹೀರು ಮಾಡುವಂತೆ ಮೂವತ್ತು ದಿವಸದ ವಾಯಿದೆಯಿಂದ ಕೊಟ್ಟ ಇಸ್ತಿಯಾರು ವಾಯಿದೆ ಮೀರಿದಾಗ ಯಾರೂ ಜಾಹೀರು ಮಾಡಿದ್ದು ಇರುವುದಿಲ್ಲ... ತಾರೀಕು ೧೩ನೆ ಆಗೋಸ್ತು ಸಂ. ೧೮೨೭ನೆ ಇಸವಿ-ರುಜು ಕೃಷ್ಣ ಮೂತ್ತಲ್ಲು- ಮುನಶಿಫ ಬೇಕಲ”.
ಈ ಕೋರ್ಟು ದಾಖಲೆಯ ಪ್ರಕಾರ ಪಾರ್ತಿಸುಬ್ಬನು ಸುಮಾರು ೧೮೧೦ನೆ ಇಸವಿಯ ಅನಂತರ ಕೊಡಗು ಜಿಲ್ಲೆಯಲ್ಲಿ ವಾಸವಾಗಿದ್ದನು ಎಂದೂ ತಿಳಿಯಬಹುದಾಗಿದೆ. ಈ