ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಂದು ಮಹಾಭಾರತೀಯ ವ್ಯಕ್ತಿತ್ವ / ೩೮೧

ಅನುಕರಣಶೀಲತೆ ಇರಲಿಲ್ಲ. ಚಿಕಿತ್ಸಕ ಬುದ್ದಿಯೂ, ಸ್ವತಂತ್ರ ಚಿಂತನ ಪ್ರವೃತ್ತಿಯೂ ಅವರ ವೈಶಿಷ್ಟ್ಯ, ಬಾಲ್ಯದಲ್ಲಿ ಅವರ ಒಡನಾಡಿಯಾಗಿದ್ದವರು ಹೆಚ್ಚು ಕಡಿಮೆ ಅವರ ಸಮವಯಸ್ಕರಾಗಿದ್ದ ಸೇಡಿಯಾಪು ಕೃಷ್ಣ ಭಟ್ಟರು. ಅವರು ಸಮೀಪದ ಬಂಧುಗಳು. ಚಿಕ್ಕಂದಿನಲ್ಲಿಯೂ ಅವರಿಬ್ಬರು ತಾವು ಅಧ್ಯಯನ ಮಾಡಿದ ಪ್ರಾಚೀನ ಗ್ರಂಥಗಳ ಬಗ್ಗೆ ಚರ್ಚಿಸುವುದಿತ್ತು. ಒಮ್ಮೊಮ್ಮೆ ಚರ್ಚೆಯು ಪ್ರಕೋಪಕ್ಕೆ ಹೋಗಿ ಕೊನೆಗೆ “ಹಾಗಾದರೆ ನಿನಗೂ ನನಗೂ ಇನ್ನು ಮಾತಿಲ್ಲ” ಎಂಬಲ್ಲಿಗೆ ಮುಕ್ತಾಯವಾಗುತ್ತಿತ್ತು. ಮರುದಿನ ಇದಾವುದರ ನೆನಪೂ ಇಲ್ಲವೆಂಬಂತೆ, “ಅಪ್ಪೊ (ಹೌದೋ) ಕೃಷ್ಣ ಭಾವ....” ಎಂದು ಇನ್ನೊಂದು ಚರ್ಚೆ ಸುರುವಾಗುತ್ತಿತ್ತು. ಸೇಡಿಯಾಪು ಕೃಷ್ಣ ಭಟ್ಟರೇ ಇದನ್ನು ನನಗೆ ಹೇಳಿದ್ದರು.
ಸಂಗೀತವಾಗಲಿ, ಯಕ್ಷಗಾನವಾಗಲಿ, ಛಂದಃಶಾಸ್ತ್ರವೆ ಆಗಲಿ, ಎಲ್ಲದರಲ್ಲಿಯೂ ಕೃಷ್ಣ ಭಟ್ಟರಿಗೆ ಸಂಶೋಧನವೇ ಮೂಲಮಂತ್ರ. ಅವರ ಸಂಶೋಧನ ಪ್ರಕ್ರಿಯೆಯಲ್ಲಿ 'ಗತಾನುಗತಿಕ'ತೆ ಇಲ್ಲ. ಸ್ವತಂತ್ರ ಚಿಂತನವೇ ದಾರಿದೀಪ. ತಮ್ಮ ವಾದಮಂಡನೆಯಲ್ಲಿ ಆತ್ಯಂತಿಕವಾದ ಖಚಿತತೆಯನ್ನು ಅವರು ಪ್ರದರ್ಶಿಸುತ್ತಿದ್ದರು. ಅವರ ಮಾತಿನ ಧಾಟಿಯು ಒಮ್ಮೊಮ್ಮೆ ಅವರದು ಅರ್ಥವಾದವೋ (dogmatism) ಎಂದು ಭಾಸವಾಗಲೂ ಬಹುದು. ಆದರೆ ಸತಾರ್ಕಿಕವಾದ ಮಂಡನೆಗೆ ಬೆಲೆ ಕೊಡುತ್ತಿದ್ದರು. ಒಮ್ಮೆ ಯಕ್ಷಗಾನ ಕವಿ ಪಾರ್ತಿಸುಬ್ಬನ ಬಗ್ಗೆ ಭಾರೀ ವಿವಾದವೆದ್ದಿತ್ತು. ಈ ಕವಿ ಕುಂಬಳೆಯವನೆಂಬ ನಂಬುಗೆ ಇತ್ತು. ಆದರೆ ದಿ| ಶಿವರಾಮ ಕಾರಂತರು ಪ್ರಸಂಗಗಳನ್ನು ಬರೆದಾತ ಪಾರ್ತಿಸುಬ್ಬ ಎಂಬವನಲ್ಲವೆಂದೂ ಕವಿಯು ಬ್ರಹ್ಮಾವರದವನೆಂದೂ ಪ್ರತಿಪಾದಿಸಿದರು. ಕುಕ್ಕಿಲ ಕೃಷ್ಣ ಭಟ್ಟರು ಈ ವಾದವನ್ನು ಪ್ರಶ್ನಿಸಿದ್ದರು. ಪ್ರಾಸಂಗಿಕವಾಗಿ ಒಮ್ಮೆ ನನ್ನಲ್ಲಿ ಈ ವಿಚಾರವನ್ನು ಹೇಳುತ್ತಿದ್ದಾಗ 'ಪಾರ್ತಿಸುಬ್ಬನೇ ಇಲ್ಲ ಎಂದು ಕಾರಂತರೂ ಅವರ ಅನುಯಾಯಿಗಳೂ ಹೇಳುತ್ತಿದ್ದಾರಲ್ಲ. ಇದು ವಿರೋಧಾಭಾಸ. ಇದು 'ದೇವರಿಲ್ಲ' ಎಂದ ಹಾಗೆ, 'ದೇವರು' ಇಲ್ಲ ಎನ್ನುವಾಗ ದೇವರನ್ನು ಒಪ್ಪಿಕೊಂಡ ಹಾಗೆ ಆಗಲಿಲ್ಲವೆ? ಹಾಗೆಯೇ 'ಪಾರ್ತಿಸುಬ್ಬ ಇಲ್ಲ' ಎನ್ನುವಾಗ ಪಾರ್ತಿಸುಬ್ಬನ ಅಸ್ತಿತ್ವವನ್ನು ಒಪ್ಪಿದ ಹಾಗೇ ಆಗಲಿಲ್ಲವೆ?' ಎಂದರು. ನಾನು ಹೇಳಿದೆ- ದೇವರು ಇಲ್ಲ ಎನ್ನುವಾಗ 'ದೇವರು' ಎಂಬ ಶಬ್ದದಿಂದ ನೀವು ಯಾವುದನ್ನು ಸೂಚಿಸುತ್ತೀರೋ ಅಂತಹದೊಂದು ಇಲ್ಲ. ಇಲ್ಲದಿರು ವಂತಹದನ್ನು ನೀವು ಇದೆ ಎಂದು ಹೇಳುತ್ತಿದ್ದೀರಿ ಎಂದೇ ಆ ಮಾತಿನ ಅರ್ಥ. ಇಷ್ಟು ವಿಸ್ತಾರವಾಗಿ ಹೇಳುವುದರ ಬದಲು ಸಂಕ್ಷೇಪವಾಗಿ ಹೇಳುತ್ತಾರೆ' ಎಂದು ಹೇಳಿದೆ. ಕೂಡಲೆ ಕೃಷ್ಣ ಭಟ್ಟರು ಅದು ಸರಿ' ಎಂದು ಒಪ್ಪಿಕೊಂಡರು.
ಒಂದು ಹಂತದಲ್ಲಿ ಪಾರ್ತಿಸುಬ್ಬನು ೧೮೨೭ರಲ್ಲಿ ಇದ್ದವನು ಎಂದು ಒಂದು ಕೋರ್ಟು ದಾಖಲೆಯನ್ನು ಆಧರಿಸಿ ಹೇಳಿದ್ದರು. ಹೀಗೆ ಹೇಳಿದ ಅವರ ಭಾಷಣವು ಪ್ರಕಟವಾಗಿತ್ತು. ಈ ವಾದವನ್ನು ದಿ| ಕಾರಂತರು ಟೀಕಿಸಿದ್ದಿದೆ. ಆದರೆ ಮುಂದೆ ಈ ಕವಿಯ ಒಂದು ರಚನೆಯಲ್ಲಿ ಕಾಣುವ 'ಬತ್ತೀಸಾಕೃತಿ ರಾಗ ತಾಲ ವಿಧದಿಂ' ಎಂಬ ಮಾತನ್ನು ವಿಮರ್ಶಿಸುತ್ತ ಪುರಾತನ ಸಂಗೀತ ಶಾಸ್ತ್ರಗ್ರಂಥಗಳಲ್ಲಿ ಕಾಣುವ "ದ್ವಾತ್ರಿಂಶದ್ರಾಗ ಸಂಮಿಶ್ರಂ ದ್ವಾತ್ರಿಂಶತ್ತಾಲ ಲಾಲಿತಂ' ಎಂಬುದನ್ನು ವಿಶ್ಲೇಷಿಸಿ ಅಲ್ಲಿ ಕಾಣುವ ೩೨ ರಾಗಗಳ ವರ್ಗೀಕರಣವೂ ದ್ವಾತ್ರಿಂಶತ್ತಾಲಗಳ ಪ್ರಬಂಧರಚನೆಯೂ ಸುಮಾರು ೧೬೫೦ನೇ ಇಸವಿಗಾಗುವಾಗ ಎಂದರೆ ವೆಂಕಟಮುಖಿಯ ೭೨ ಮೇಳಕರ್ತ ರಾಗ ಪದ್ಧತಿ ಉಂಟಾಗುವ ಹೊತ್ತಿಗೆ ಕ್ಷೀಣವಾಗುತ್ತ ಬಂದಿತ್ತು ಎಂಬುದರಿಂದ