ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೩೮ / ಕುಕ್ಕಿಲ ಸಂಪುಟ

ದೋಣಿಯ 'ಜವಕ್ಕೆ' ಎಂದರೆ ವೇಗಕ್ಕೆ ಕಾರಣವಾಗಿರುವುದರಿಂದ ಅದು 'ಜವನಿ ಲಕ್ಷಣತಃ ಆ ತೆರದ ಉದ್ದಗಲವುಳ್ಳ ವಸ್ತ್ರವಿಶೇಷಕ್ಕೂ ಅದೇ ಹೆಸರಾಗಿದೆ. ಗೂಡಾರ (tent) ಹೊದಿಸುವ 'ಡೇರೆ' ವಸ್ತ್ರಕ್ಕೂ, ಡೇರೆಯ ಒಳಭಾಗವನ್ನು ಮರೆಮಾ ವುದಕ್ಕಾಗಿ ಇಳಿಬಿಡುವ ಪರದೆ ವಸ್ತ್ರಕ್ಕೂ ಸಂಸ್ಕೃತದಲ್ಲಿ ಜವನೀ ಅಥವಾ ಜವನಿಕೆ ಎಂಬ ಹೆಸರಿರುತ್ತದೆ. ಆ 'ಜವನಿಕೆ'ಯೇ ದೇಶೀ ರೂಢಿಯಲ್ಲಿ 'ಜವಳಿ' ಎಂದಾಗಿದೆ. ಕುಳಿತು ಕೊಳ್ಳುವುದಕ್ಕಾಗಿ ನೆಲದ ಮೇಲೆ ಹಾಸುವ ಅಗಲದ ವಸ್ತ್ರವನ್ನು (ಪಟಾಸ್ಕರಣ) 'ಜವಳಿ' ಎನ್ನುತ್ತಾರೆ. ವ್ಯಾಪಾರಿಗಳು ವಸ್ತ್ರಗಳನ್ನು ಕಟ್ಟುವುದಕ್ಕೆ ಉಪಯೋಗಿಸುವ ಅಗಲವಾದ ದಪ್ಪವಸ್ತ್ರಕ್ಕೂ 'ಜವಳಿ' ಎನ್ನುತ್ತಾರೆ. ವಸ್ತ್ರದ ಮಳಿಗೆಯಲ್ಲಿ ಗಿರಾಕಿಗಳಿಗಾಗಿ ನೆಲದ ಮೇಲೆ 'ಜವಳಿ' ಹಾಸಿರುವುದರಿಂದಲೇ ಪ್ರಾಯಶಃ ವಸ್ತ್ರದ ಅಂಗಡಿಗೆ 'ಜವಳಿ ಮಳಿಗೆ ಎಂಬ ಹೆಸರು ಬಿದ್ದುದಿರಬೇಕು. ಇದೇ ಲಕ್ಷಣಾರ್ಥದಲ್ಲಿ ಎಂದರೆ ದೋಣಿಯ ಹಾಯಿಯ ಸಾದೃಶ್ಯದಿಂದ ನಾಟಕಪರದೆಯನ್ನು 'ಜವನಿಕಾ' ಎಂದು ಕರೆಯಲಾಗಿದೆ. 'ತಿರಸ್ಕರಿಣೀ', 'ಪಟ' ಎಂಬ ಹೆಸರುಗಳೂ ಅದಕ್ಕಿವೆ. ಈ ನಿಜಾರ್ಥವನ್ನು ಗಮನಿಸಿದಲ್ಲಿ ಪರದೆಯ ಉಪಯೋಗವನ್ನು ನಮಗೆ ಕಲಿಸಿದ್ದೇ ಗ್ರೀಕರು ಎಂಬ ಕಲ್ಪನೆಯು ತೀರ ಅವಾಸ್ತವವೆಂದೇ ಕಾಣುವುದು. ಇನ್ನು ನಾಟಕದಲ್ಲಿ ರಾಜರಿಗೆ ಆಯುಧಗಳನ್ನು ತಂದುಕೊಡುವ ಯವನಿಯರಾದರೆ, ನಮ್ಮ ಕಾವ್ಯ ಪುರಾಣಾದಿಗಳಲ್ಲಿ ವರ್ಣಿಸಿರುವಂತೆ, ಸ್ವಭಾವತಃ ಯುದ್ಧಶೀಲರೂ, ಶೂರರೂ ಆಗಿದ್ದ ಪಾರಸೀಕ ಜನಾಂಗದ ಯುವತಿಯರೇ ಆಗಿರಬೇಕೆಂದು ನ್ಯಾಯತಃ ಪ್ರಾಪ್ತವಾಗುವುದು. ಹಿಂದಿನ ಕಾಲದಲ್ಲಿ (ಮುಸಲ್ಮಾನ ಧರ್ಮವು ಹುಟ್ಟುವ ಮೊದಲು) ನಮ್ಮ ರಾಜರು ತಮ್ಮ ಯುದ್ಧೋದ್ಯಮಗಳಲ್ಲಿ ಅಶ್ವಸಾಧನರಾದ ಆ ಯವನ ಯೋದರನ್ನು ನಿಯೋಜಿಸಿಕೊಳ್ಳುತ್ತಿದ್ದಂತೆಯೇ ಯವನ ಯುವತಿಯರನ್ನೂ ಸಹಾಯ ಕಾರ್ಯಕ್ಕೆ ನೇಮಿಸಿಕೊಳ್ಳುತ್ತಿದ್ದರೆಂಬುದೇ ಇಲ್ಲಿ ಸಹಜ ವಾಗಿ ಕಾಣುವುದಲ್ಲದೆ ಗ್ರೀಕರ ದಾಸಿಯರನ್ನು ಅದಕ್ಕಾಗಿ ಪಡೆದುಕೊಳ್ಳುತ್ತಿದ್ದಿರಬೇಕು ಎಂದೆನ್ನುವುದು ಬಹಳ ದೂರದ ಮಾತೇ ಸರಿ. ಯುದ್ಧದ ಸಿಪಾಯಿಗೆ ಹಿಂದಿ ಭಾಷೆ ಯಲ್ಲಿ 'ಜವಾನ' ಎಂದು ಹೆಸರು ವ್ಯವಹಾರದಲ್ಲಿರುವುದನ್ನೂ ಇಲ್ಲಿ ಲಕ್ಷಿಸಬಹುದು.

ಆದುದರಿಂದ ಯವನರೆಂದರೆ ಗ್ರೀಕರು ಎಂಬ ಪಾಶ್ಚಾತ್ಯರ ಕಲ್ಪನೆಯು ಸಾಧು ವಾಯ್ತಲ್ಲ, ಅದನ್ನು ಆಧರಿಸಿ ನಮ್ಮ ಪುರಾತನ ಗ್ರಂಥಗಳ ಕಾಲಗಣನೆಯನ್ನು ಮಾಡುವುದು ಸರಿಯಲ್ಲ.





(ಪ್ರಬುದ್ಧ ಕರ್ನಾಟಕ : ಕಮ್ಮಟ ಕಿಡಿಗಳು)