ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦೦ / ಕುಕ್ಕಿಲ ಸಂಪುಟ

ಸಾಂಪ್ರದಾಯಿಕ ವೈಲಕ್ಷಣ್ಯಗಳನ್ನು ಕೆಲವಂಶ ಉಳಿಸಿಕೊಂಡೇ ಅವರು ಇದನ್ನು ಸಾಧಿಸಿದರೆಂಬುದು ವಿಶೇಷ. ಆಯಾ ರಾಗಗಳ ವಿಶಿಷ್ಟ ಸ್ವರೂಪಕ್ಕೆ ಕಾರಣವಾಗುವ ರಾಗಭಾವಕ ಸ್ವರ ಸಂಚಾರಗಳೊಂದಿಗೆ ಮುಖ್ಯವಾಗಿ ಭಿನ್ನ ಸ್ವರ ಪ್ರಯೋಗ ಇರಬೇಕೆಂಬ ತತ್ವವನ್ನವಲಂಬಿಸಿ ವ್ಯಾಪಕವಾದ ದೃಷ್ಟಿಯಿಂದ ಈ ಹತ್ತು ಮೇಳಗಳನ್ನೂ ಜನ ರಾಗಗಳನ್ನೂ ಅವರು ವರ್ಗೀಕರಿಸಿರುವುದಾಗಿದೆ.

ಪ್ರಸ್ತುತ ಗ್ರಂಥದಲ್ಲಿ ಪ್ರೊ| ಪುರಂದರೆಯವರು ಈ ವಿಚಾರವನ್ನು ಚೆನ್ನಾಗಿ ಗಮನಿಸಿಕೊಂಡಿರುವರೆಂಬುದು ಆಯಾ ರಾಗವಾಚಕ ಸ್ವರಾಕ್ಷಿಪ್ತಿಕೆಗಳ ಸಮೇತ ಶ್ರೀಯುತರು ಕೊಟ್ಟಿರುವ ರಾಗಲಕ್ಷಣಗಳಿಂದ ವ್ಯಕ್ತವಾಗುವುದು. ಹಿಂದೂಸ್ಥಾನೀ ರಾಗಗಳಲ್ಲಿ ಹೆಚ್ಚಾಗಿ ದ್ವಿರೂಪಿ ಸ್ವರಗಳ ಪ್ರಯೋಗವಿರುವುದು ಕಂಡುಬರುತ್ತದೆ. ದಿ. ಭಾತ್‌ ಖಂಡೆಯವರು ಮೇಳರಾಗ ವರ್ಗೀಕರಣದಲ್ಲಿ ಅದಕ್ಕೆ ಪ್ರಾಧಾನ್ಯವನ್ನು ಕೊಟ್ಟಿಲ್ಲ. ಪ್ರಾಯಶಃ ಗಾಯಕರ ವೈಯಕ್ತಿಕ ಪ್ರಭಾವದಿಂದ ರೂಢಿಗೆ ಬಂದಿರುವ ಈ ಪ್ರಯೋಗವು ರಾಗಸಾಂಕರ್ಯಕ್ಕೆ ಕಾರಣವಾಗಿ ಮೇಳವ್ಯವಸ್ಥೆಗೆ ಅಪಾಯವುಂಟಾಗಬಹುದೆಂದು ಅವರ ಅಭಿಪ್ರಾಯವಿದ್ದಂತೆ ಊಹಿಸಬಹುದು. ಈ ವಿಚಾರವನ್ನು ಲಕ್ಷ್ಯಾಭ್ಯಾಸಿಗಳು ಸೂಕ್ಷ್ಮ ಪರಿಶೀಲಿಸಿಕೊಂಡು ತಕ್ಕ ಮಾರ್ಗದಲ್ಲಿ ಮುಂದುವರಿಯುವುದು ಯುಕ್ತವಾಗಿ ಕಾಣುವುದು. ಅದೂ ಅಲ್ಲದೆ ಹಿಂದೂಸ್ಥಾನಿ ಗಾಯಕ ವಾದಕರಲ್ಲಿ ಹೆಚ್ಚಾಗಿ ಯಾವುದೇ ರಾಗ ವಿಸ್ತಾರದಲ್ಲಿ ಆ ರಾಗ ನಿರ್ದಿಷ್ಟವಲ್ಲದ ಅನ್ಯಸ್ವರಗಳನ್ನು ಸ್ಪರ್ಶ ಮಾಡುವ ಪ್ರವೃತ್ತಿಯು ಪ್ರಾಯಶಃ ಪರಂಪರೆಯಿಂದ ನಡೆದು ಬ೦ದಿದೆ. ಮೇಳ ವರ್ಗೀಕರಣದ ಸುಭದ್ರತೆಯ ದೃಷ್ಟಿಯಿಂದ ಇದು ಅಪೇಕ್ಷಣೀಯವೇ ಎಂಬುದನ್ನು ವಿದ್ವಾಂಸರು ಪರಿಶೀಲಿಸತಕ್ಕದ್ದಿದೆ.

ಹೇಗಿದ್ದರೂ ಈ ಗ್ರಂಥಕರ್ತರು ಭಾತ್‌ಖಂಡೆಯವರ ಶಾಸ್ತ್ರರಚನೆಯಾದಂದಿನಿಂದ ಇಂದಿನವರೆಗೆ ಲಕ್ಷ್ಯಪ್ರಯೋಗದಲ್ಲಿ ಸಂಭವಿಸಿರುವ ವ್ಯತ್ಯಾಸಗಳನ್ನು ಪ್ರಸ್ತುತ ಗ್ರಂಥದಲ್ಲಿ ಅಳವಡಿಸಿಕೊಂಡಿರುವುದು ಪ್ರಸಕ್ತವೂ ಪ್ರಯೋಜನಕರವೂ ಆಗಿದೆ. ಅಂತೆಯೇ ಮತಭೇದವುಳ್ಳ ಕೆಲವೊಂದು ರಾಗಗಳ ಲಕ್ಷಣ ಸಂದರ್ಭದಲ್ಲಿ ಅಹೋಬಲ ಪಂಡಿತನೇ ಮೊದಲಾದ ಪೂರ್ವಶಾಸ್ತ್ರಕಾರರ ಗ್ರಂಥಗಳಿಂದ ಉದ್ಧರಿಸಿ ಕೊಟ್ಟಿರುವುದೂ ವಿಹಿತವೇ.

ಪ್ರಸ್ತಾವನೆಯಲ್ಲಿ ಗ್ರಂಥಕರ್ತರು ಐತಿಹಾಸಿಕ ದೃಷ್ಟಿಯಿಂದ ಈಗ ನಮ್ಮಲ್ಲಿ ಪ್ರಾಚೀನ ಸ್ವರ ಮತ್ತು ರಾಗ ಸ್ವರೂಪಗಳೆರಡೂ ಉಳಿದಿಲ್ಲ. ಈಗಿನ ನಮ್ಮ ರಾಗಗಳು ಪ್ರಾಚೀನ ರಾಗಗಳೊಂದಿಗೆ ಕೇವಲ ನಾಮಸಾದೃಶ್ಯವನ್ನು ಹೊಂದುತ್ತವೆ. ಶ್ರುತಿಸ್ಥಾನಗಳ ಅನಿಶ್ಚತತೆ ಮತ್ತು ಸ್ವರಸ್ಥಾನಗಳ ವಿಕೃತ ರೂಪದಿಂದ ಈಗ ಪ್ರಚಲಿತವಿರುವ ರಾಗರೂಪಗಳೆಲ್ಲವೂ ಆಧುನಿಕವಾಗಿವೆ.” ಎಂದಿರುವುದು ಪರಮಾರ್ಥ ಸತ್ಯದ ಮಾತು. ಅರ್ವಾಚೀನ ಸಂಸ್ಕೃತ ಶಾಸ್ತ್ರಗ್ರಂಥಗಳಲ್ಲಿ ಹಾಗೂ ಆಧುನಿಕ ಸಂಗೀತವಿದ್ವಾಂಸರಲ್ಲಿ ಸಹ ಈ ಕುರಿತು ಕೇವಲ ಅಂಧ ಪರಂಪರೆಯ ವ್ಯವಹಾರವು ನಡೆದು ಬಂದಿರುವುದರಿಂದ ಈ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮತ್ತು ಸೋದಾಹರಣವಾಗಿ ನಿರೂಪಿಸಿದ್ದರೆ ಹೆಚ್ಚು ಉಪಕಾರವಾಗುತ್ತಿತ್ತು. ದಿ| ಪಂಡಿತ ಭಾತ್‌ಖಂಡೆಯವರು ಸಾಕಷ್ಟು ವಿಸ್ತಾರವಾಗಿಯೇ ಚರ್ಚಿಸಿದ್ದ ವಿಚಾರವಿದು.

ಶ್ರುತಿಗಳ ವಿಚಾರವಾಗಿದ್ದ ಭ್ರಾಮಕವಾದ ಕಲ್ಪನೆಗಳಿಂದಾಗಿ ಪ್ರಯೋಗಿಸಲ್ಪಡುವ ಸ್ವರಗಳ ಕುರಿತಾಗಿಯೂ ಉಂಟಾಗಿದ್ದ ಅಪ್ರತಿಷ್ಠವಾದ ಮತಭೇದಗಳನ್ನೆಲ್ಲ ನಿರಸ್ತಗೊಳಿಸಿ ಲಕ್ಷ್ಯ ಸಂಗೀತದಲ್ಲಿ ಪ್ರಯೋಗಿಸಲ್ಪಡುವ ಸ್ವರಭೇದಗಳು ಹನ್ನೆರಡು ಮಾತ್ರ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದವನು ದಕ್ಷಿಣದ ವೆಂಕಟಮಖಿ. ಅದನ್ನೇ