ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪೀಠಿಕೆ / ೩೪೭

ಬೇಕಾಗುವುದು. ಮೂರು ಅಕ್ಷರಗಳ ಈ ಎಂಟು ಗಣಗಳಲ್ಲಿ ಇವೆರಡು ಬಗೆಯ ಸಂಕ್ಷೇಪಕ್ಕೂ ಸೌಲಭ್ಯ ಹೆಚ್ಚಿದೆ.

ಹಿಂದೆ ಹೇಳಿದಂತೆ ಅಕ್ಷರಗಳ ಗತಿ ಮತ್ತು ಮಾತ್ರಾಗಣಗಳ ಲಯ ಇವೆರಡು ವಿಧದಿಂದ ಉಂಟಾಗುವ ಪ್ರತ್ಯೇಕ ಶ್ರವ್ಯಗುಣಗಳನ್ನು ಹೊಂದಿಕೊಂಡು ಸಂಸ್ಕೃತ ಛಂದಸ್ಸು, ವೃತ್ತ ಮತ್ತು ಜಾತಿ ಎಂದು ಎರಡು ವಿಧವಾಗಿದೆ. ವೃತ್ತವೆಂಬುದು ಅಕ್ಷರ ಛಂದಸ್ಸು, ಅಕ್ಷರಸಂಖ್ಯಾನಿಯಮ ಮತ್ತು ಗುರುಲಘು ಅಕ್ಷರನಿಯಮದಿಂದ ಕೂಡಿರುವುದು. ಮಾತ್ರಾನಿಯಮ ಹಾಗೂ ಚತುರ್ಮಾತ್ರಾಲಯವಿರುವ ಛಂದಸ್ಸೇ ಜಾತಿ, ಅಕ್ಷರ ಛಂದಸ್ಸೆಂದರೆ ಮೂಲ ವೈದಿಕ ಛಂದಸ್ಸುಗಳಿಂದ ಹುಟ್ಟಿದ ವೃತ್ತಗಳು, ವೈದಿಕ ಛಂದಸ್ಸುಗಳಲ್ಲಿ ಇರುವಂಥವು ಎಂಬುದರಿಂದಲೇ ಇವಕ್ಕೆ 'ವೃತ್ತಗಳು ಎಂದು ಹೆಸರಾಗಿದೆ (ವೈದಿಕೇ ಛಂದಸಿ ವರ್ತತೇ ಇತಿ ವೃತ್ತಂ), ಜಾತಿಗಳು ಲೌಕಿಕ ಸಂಸ್ಕೃತ ಭಾಷೆಯಲ್ಲೇ ಹುಟ್ಟಿದಂಥವು. ಸಂಸ್ಕೃತವು ಆರ್ಯಭಾಷೆಎಂದು ಪ್ರಸಿದ್ಧವಾಗಿರುವುದ ರಿಂದ ಅದರಲ್ಲಿ ಹುಟ್ಟಿದ ಇವು 'ಆರ್ಯಜಾತಿ' ಎಂದು ಕರೆಯಲ್ಪಟ್ಟಿವೆ. ಹೀಗೆ ವೃತ್ತ ಜಾತಿ ಎಂಬ ಹೆಸರುಗಳೂ ಅನ್ವರ್ಥ ಸಂಜ್ಞೆಗಳು,

ವೃತ್ತಗಳಲ್ಲಿ ಸಮವೃತ್ತ, ಅರ್ಧಸಮವೃತ್ತ, ವಿಷಮವೃತ್ತಗಳೆಂದು ಮೂರು ವಿಧ. ನಾಲ್ಕು ಪಾದಗಳಲ್ಲಿ ಅಕ್ಷರಸಂಖ್ಯೆಯೂ ಗುರುಲಘು ವಿನ್ಯಾಸವೂ ಒಂದೇ ಸಮನಾಗಿರು ವುದು ಸಮವೃತ್ತ. ಒಂದನೆಯ ಮೂರನೆಯ ಪಾದಗಳಲ್ಲಿಯೂ ಎರಡನೆಯ ನಾಲ್ಕನೆಯ ಪಾದಗಳಲ್ಲಿಯೂ ಪ್ರತ್ಯೇಕ ಸಮಾನತೆ ಇರುವುದು ಅರ್ಧಸಮವೃತ್ತ, ಎಂದರೆ, ಪೂರ್ವಾರ್ಧದ ಎರಡು ಪಾದಗಳಲ್ಲಿ ಸಮಾನತೆ ಇಲ್ಲದೆ ಇದ್ದು, ಅದೇ ರೀತಿ ಉತ್ತರಾರ್ಧ ಎರಡು ಪಾದಗಳು ಕ್ರಮವಾಗಿ ಪೂರ್ವಾರ್ಧದವಕ್ಕೆ ಸಮಾನವಾಗಿರುವುದು ಎಂದರ್ಥ. ವಿಷಮವೃತ್ತವೆಂದರೆ ನಾಲ್ಕು ಪಾದಗಳಲ್ಲಿ ಯಾವುದೊಂದೂ ಇನ್ನೊಂದಕ್ಕೆ ಸಮಾನವಲ್ಲದಿರುವುದು. ಇದಲ್ಲದೆ ಸರ್ವಾಂಗಸಮವೂ ಅಲ್ಲ, ಸಂಪೂರ್ಣ ವಿಷಮವೂ ಅಲ್ಲ ಎನ್ನುವ ಒಂದು ಛಂದಸ್ಸು ವೈದಿಕದಲ್ಲಿದ್ದಂತೆಯೇ ಲೌಕಿಕಕ್ಕೆ ಬಂದಿರುವುದೆಂದರೆ, ಪ್ರಸಿದ್ಧವಾದ ಅನುಷ್ಟುಪ್ ಶ್ಲೋಕವಾಗಿರುತ್ತದೆ. ಇದರ ವಿಶಿಷ್ಟ ಲಕ್ಷಣವನ್ನು ಆದಿಕವಿಯಾದ ವಾಲ್ಮೀಕಿಯೇ ರಾಮಾಯಣಾರಂಭಕ್ಕೆ ಕೊಟ್ಟಿರುತ್ತಾನೆ.

ಪಾದಬದೊಕ್ಷರಸಮ: ತಂತ್ರೀಲಯಸಮನ್ವಿತಃ |
ಶೋಕಾರ್ತಸ್ಯ ಪ್ರವೃತ್ತೋ ಮೇ ಶ್ಲೋಕೋ ಭವತು ನಾನ್ಯಥಾ ||

ಇದಕ್ಕೆ ಶ್ಲೋಕವೆಂಬ ಹೆಸರನ್ನೂ ಪ್ರಾಯಶಃ ಆತನೇ ಕೊಟ್ಟಿರುವುದೆಂದು ತೋರುವುದು ಇದರ ಪ್ರಕಾರ, ನಾಲ್ಕು ಪಾದಗಳಲ್ಲಿಯೂ ಸಮಾನವಾಗಿ ಎಂಟು ಅಕ್ಷರ ಗಳಿರುವುದಲ್ಲದೆ 'ತಂತ್ರೀಲಯ'ವೂ ಕೂಡಿರಬೇಕು. ಈ ತಂತ್ರಿಲಯವೆಂದರೇನೆಂಬು ದನ್ನು ಪುರಾತನ ಸಂಗೀತಶಾಸ್ತ್ರಗ್ರಂಥಗಳಿಂದ ಹೀಗೆ ಊಹಿಸಬಹುದಾಗಿದೆ-

ಅಂದಿನ ವೀಣಾವಾದ್ಯದಲ್ಲಿ ತಂತಿಯನ್ನು ಮಿಡಿಯುವ ಕ್ರಮಕ್ಕೆ 'ಊರ್ಧ್ವಾಧರ ಪ್ರಹಾರ' ಮತ್ತು 'ಅಧರೋತ್ತರಘಾತ'ವೆಂದು ಹೇಳಲಾಗಿದೆ- 'ಲಘುಗುರ್ವಾತ್ಮ ಕೈರ್ಘಾತೈಃ ಕರಣಾವಿಯೋ ಕ್ರಿಯಾ | ವಾಮಾಂಗುಷ್ಕನ ತೂರ್ಧ್ವಾಧೋಘಾತೋ ನಿಮ್ಮೊಟಿತಂ ಮತಂ || ಅಧರೋರಘಾತಂಚ....' (ಸಂ. ರ. ೬-೧೪೫, ೧೫೬), ಇವೆರಡು ಕ್ರಿಯೆಗಳಿಂದ ಕ್ರಮವಾಗಿ 'ತನಾ ತನಾ' ಮತ್ತು 'ತಾನ ತಾನ' ಎಂಬಂತೆ ಲಘುಗುರು ಮತ್ತು ಗುರುಲಸ್ವಾತ್ಮಕವಾದ ಲಯಗಳು ಹೊರಡುವುವು. ಅವು ಕ್ರಮವಾಗಿ