- ಅಲೆ
- ಎರಡು
- ಕಾರಣಿಕ ಶಿಶು
"ಹೆದರದಿರಮ್ಮಾ! ಹಲುಬದಿರು! ಇದು ಕಾರಣಿಕ ಶಿಶು!
ಪರಶಿವನ ಪ್ರಸಾದ! ಇದೀಗ ಎಲ್ಲವೂ ಸರಿಹೋಗುವುದು."
ಬಾಗೇವಾಡಿ ಅಗ್ರಹಾರದಲ್ಲಿಯ ಅಗ್ರೇಶ್ವರರಾದ ಮಾದಿರಾಜನ ಮನೆ. ಸತಿ ಮಾದಲಾಂಬೆಯು, ಇದೀಗ ಹಡೆದ ತನ್ನ ಶಿಶುವನ್ನು ತೊಡೆಯ ಮೇಲೆ ಇರಿಸಿಕೊಂಡು, ನಡುಮನೆಯಲ್ಲಿ ಕಂಬನಿ ಕರೆಯುತ್ತಿದ್ದಳು. ಬಳಿಯಲ್ಲಿಯೇ ಕುಳಿತ ಅವಳ ಮುಪ್ಪಿನ ತಾಯಿ ಹಾಗೂ ಮಗಳು ಇವರ ಕಂಗಳಲ್ಲಿಯೂ ಕಣ್ಣೀರು ಕಾಣುತ್ತಿತ್ತು ಮೊಗಸಾಲೆಯಲ್ಲಿ ಮಾದರಸನೂ ದುಃಖಿತನಾಗಿ ಕುಳಿತಿದ್ದನು. ಅಷ್ಟರಲ್ಲಿ ಕಾವಿಯ ಕೌಪೀನವನ್ನು ಧರಿಸಿದ ಓರ್ವ ಮುನಿಯು ಒಮ್ಮೇಲೆ ಅವರ ಮನೆಯಲ್ಲಿ ಬಂದ. ತಲೆಯ ಮೇಲೆ ವಿಪುಲವಾದ ಜಡೆ, ಭಸಿತದಿಂದ ಒಪ್ಪುವ ವಿಶಾಲವಾದ ಹಣೆ, ಕೊರಳಲ್ಲಿ ರುದ್ರಾಕ್ಷಿಗಳ ಮಾಲೆಗಳು, ಕೈಯಲ್ಲಿ ದಂಡ-ಕಮಂಡಲುಗಳು, ಪಾದಗಳಲ್ಲಿಯ ಪಾದುಗೆಗಳನ್ನು ಮೊಗಸಾಲೆಯಲ್ಲಿರಿಸಿ, ಮುನಿಯು ನೇರವಾಗಿ ತಾಯಿಯ ಬಳಿ ಬಂದ. ಮಗುವನ್ನು ಕರುಣಪೂರ್ಣ ನೋಟದಿಂದ ನೋಡಿ, ಮೇಲ್ಕಾಣಿಸಿದಂತೆ ನುಡಿದ. ತರುವಾಯ ಮಗುವಿನ ಹಣೆಗೆ ಭಸಿತವನ್ನು ಹಚ್ಚಿ ಅದರ ಕಿವಿಯಲ್ಲಿ ಪಂಚಾಕ್ಷರೀ ಮಂತ್ರವನ್ನು ಊದಿದ. ಕೂಡಲೇ ಕೂಸು ಮೆಲ್ಲನೆ ಕಣ್ಣೆರೆಯಿತು. ಮುನಿಯನ್ನು ನೆಟ್ಟನೋಟದಿಂದ ನೋಡಿತು. ಆಗ ಒಂದು ಅಲೌಕಿಕ ನಗು ಅದರ ಮುದ್ದು ಮುಖವನ್ನು ಅಲಂಕರಿಸಿದ್ದಿತು. ಮಗುವು ಚೇತನಗೊಂಡು, ಕಣ್ಣೆರೆದುದನ್ನು ಕಂಡು ಮನೆಯವರಿಗೆಲ್ಲ ಅತೀವ ಆನಂದವಾಯಿತು. ಸಾಕ್ಷಾತ್ ಪರಶಿವನೇ ಮುನಿರೂಪದಿಂದ ಬಂದು ತಮ್ಮ ಮಗುವನ್ನು ಉಳಿಸಿದನು ಎಂದು ಅನಿಸಿತು ತಂದೆತಾಯಂದಿರಿಗೆ.