ಅವರು ತಮ್ಮ ಧನ್ಯವಾದಗಳನ್ನು ಮುನಿಗೆ ಸಲ್ಲಿಸುವ ಪೂರ್ವದಲ್ಲಿಯೇ ಆತನು ಅಲ್ಲಿಂದ ಮಾಯವಾಗಿದ್ದನು. ಆತನನ್ನು ಶೋಧಿಸಿ, ಕರೆತರುವ ಅವರ ಯತ್ನಗಳೆಲ್ಲ ವಿಫಲವಾದವು.
ಮಾದಲಾಂಬಿಕೆಯ ಉದರದಲ್ಲಿ ಅಂದು (ಕ್ರಿ.ಶ.೧೧೦೬) ಜನಿಸಿದುದು ಒಂದು 'ಪುಣ್ಯಶಿಶು', 'ಕಾರಣಿಕ ಶಿಶು', ಮಗಳು ನಾಗಲಾಂಬಿಕೆಯ ತರುವಾಯ ಬಹುದಿನ ಮಕ್ಕಳು ಆಗದ ಮೂಲಕ, ಮಾದಲಾಂಬಿಕೆಯು 'ಪುತ್ರಾರ್ಥಕಾರಣಂ... ವೃಷಭನೋಂಪಿಯ ನೋನುತ' ಇದ್ದಳಂತೆ. ಅವಳು ನಂದಿಕೇಶ್ವರನನ್ನು ಭಕ್ತಿಭಾವದಿಂದ ಆರಾಧಿಸುತ್ತಿದ್ದಳು; ಏಕಾಗ್ರತೆಯಿಂದ ಆತನ ಧ್ಯಾನವನ್ನು ಮಾಡುತ್ತಿದ್ದಳು. ಅದರ ಫಲವಾಗಿ ಅವಳು ಕೆಲ ತಿಂಗಳಲ್ಲಿ ಗರ್ಭವತಿಯಾದಳು.
ಇಂತು ನವಮಾಸವಾಕೆಯೊಳಾಗೆ ಸನ್ನುತಂ
ಅಂತಸ್ಥಳದೆ ಪುಣ್ಯಶಿಶು ತೊಳಗಿ ಹೊಳೆವುತಂ
ಚಿಪ್ಪಿನೊಳ್ ಮುತ್ತು ಕಾಸಾರದೊಳ್ ಪಂಕಜಂ
ಪುಟ್ಟುವಂತಿರೆ ಪುಟ್ಟಿದಂ ಶಿವನ ಶಿಶುವಲ್ಲಿ
ಸುಮುಹೂರ್ತವೇ ಗಂಡುರೂಪಾದ ತೆರನಾಗೆ
ಅಮಮ ಕಾರಣಿಕ ಶಿಶು ಜನಿಯಿಸಿದನನುವಾಗ.
ಆದರೆ ಹುಟ್ಟಿದೊಡನೆ ಮಗು ತನ್ನ ಕಣ್ಣು ಬಾಯಿ ತೆರೆಯಲಿಲ್ಲ, ಅಳಲಿಲ್ಲ, ಅಲೆಯಲಿಲ್ಲ. ಅದು ನಿಶ್ಚಲವಾಗಿ ಒರಗಿಕೊಂಡಿತು. ಅದನ್ನು ಕಂಡ ತಂದೆ ತಾಯಂದಿರು ಭಯಭೀತರಾದರು, ದುಃಖಿತರಾದರು: "ಶಿವನೇ! ಇಂಥ ಕಾಂತಿಯುತ ಕೂಸನ್ನು ನೀಡಿ, ಅದನ್ನು ಈ ಪರಿಯಾಗಿ ಚೇತನಹೀನ ಮಾಡಬೇಕೆ? ಅದನ್ನು ಸರಿಯಾಗಿ ಸಚೇತನಗೊಳಿಸಬಾರದೇ? ಎಂದು ಅತಿಯಾಗಿ ಹಲುಬಿದರು. ಪರಶಿವನನ್ನು ಅನನ್ಯಭಾವದಿಂದ ಪ್ರಾರ್ಥಿಸಿದರು. ಅವರ ಆರ್ತಮೊರೆಯನ್ನು ಕೇಳಿಯೇ ಪರಶಿವನು ಮುನಿಯನು ಕಳುಹಿದನೇನೋ? ಮುನಿಯು ತನ್ನ ಕರುಣಕಟಾಕ್ಷದಿಂದಲೂ ಪರುಷಸ್ಪರ್ಶದಿಂದಲೂ ಮಗುವನ್ನು ಸಚೇತನಗೊಳಿಸಿದ ಮತ್ತು ತಂದೆ-ತಾಯಂದಿರನ್ನು ಸಂತಸಗೊಳಿಸಿದ!