ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
59

ಅದೇ ರೀತಿ ಬಸವಣ್ಣನವರು ತಮ್ಮ ದೃಢನಿಷ್ಠ-ನಿಃಸ್ಪೃಹತೆಗಳನ್ನು ಕುರಿತು ಹೇಳಿರುವುದೇನೆಂದರೆ :

ಊರ ಮುಂದೆ ಹಾಲಹಳ್ಳ ಹರಿಯುತ್ತಿರಲು
ಓರೆಯಾವಿನ ಬೆನ್ನಲ್ಲಿ ಹರಿಯಲದೇಕಯ್ಯಾ ?
ಲಜ್ಜೆಗೆಡಲೇಕೆ ? ನಾಣುಗೆಡಲೇಕೆ ?
ಕೂಡಲಸಂಗಮದೇವಯ್ಯನುಳ್ಳನಕ,
ಬಿಜ್ಜಳನ ಭಂಡಾರವೇನಗೇಕಯ್ಯಾ?

ಬಸವಣ್ಣನವರ ಮನಸ್ಸು ಸದೈವ ಸಂಗನನ್ನು ನೆನೆಯುತ್ತಿತ್ತು ಚಿಂತಿಸುತ್ತಿತ್ತು. ಅವರು ಇನ್ನಾರನ್ನೂ ಇನ್ನಾವುದನ್ನೂ ಚಿಂತಿಸುತ್ತಿರಲಿಲ್ಲ.
ಪರರ ಚಿಂತೆ ಎನಗೇಕಯ್ಯಾ ?
ನಮ್ಮ ಚಿಂತೆ ನಮಗೆ ಸಾಲದೇ ?
“ಕೂಡಲಸಂಗಯ್ಯ ಒಲಿದಾನೊ, ಒಲಿಯನೋ
ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು !

ಎಂದವರು ಅರುಹಿರುವರು. ತಮ್ಮ ಚಿಂತೆಯ ಉತ್ಕಟತೆಯನ್ನು ಅವರು ಈ ಬಗೆಯಾಗಿ ಬಣ್ಣಿಸಿರುವರು. ಅದರ ಮೇಲಿಂದ ಚಿಂತೆಯ ತೀವ್ರತೆಯೂ ಚೆನ್ನಾಗಿ ತಿಳಿದುಬರುವದು :

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ,
ಭ್ರಮರಂಗೆ ಪರಿಮಳದ ಬಂಡನುಂಬ ಚಿಂತೆ,
ಎನಗೆ ಎಮ್ಮ ಕೂಡಲಸಂಗಮದೇವರ ನೆನೆವ ಚಿಂತೆ.

ಕೊನೆಗೆ ತಮ್ಮ ಕೆಲಸಗಳೆಲ್ಲ ಪರಮಾತ್ಮನ ಆರಾಧನೆಗಾಗಿ ನಡೆದಿರುವವು, ತಮ್ಮ ಕರ್ಮಕುಸುಮಗಳಿಂದ ತಾವು ಭಗವಂತನನ್ನು ಅರ್ಚಿಸುವೆವು, ಎಂಬುದನ್ನು ಬಸವಣ್ಣನವರು ಮುಂದಿನ ವಚನದಲ್ಲಿ ಅರುಹಿರುವರು :