ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
50

ಆಯಿತು. ಆಗ ಆತನಿಗೆ ಒಂದು ಯೋಚನೆಯು ಹೊಳೆಯಿತು. ಆತನಿಗೆ ಗಂಗಾದೇವಿ೧೯ ಎಂಬ ಒಬ್ಬಳೇ ಮಗಳಿದ್ದಳು. ಅವಳನ್ನು ಬಸವಣ್ಣನಿಗೆ ಕೊಟ್ಟು ಮದುವೆ ಮಾಡಬೇಕೆಂದು ಸಿದ್ಧರಸನು ಬಗೆದನು. ಬಾಚರಸನಿಂದ ಬಸವಣ್ಣನವರ ಕುಲಗೋತ್ರಗಳನ್ನು ತಿಳಿದುಕೊಂಡನು. ಅವು ತನ್ನವುಗಳೊಡನೆ ಚೆನ್ನಾಗಿ ಕೂಡುವುದನ್ನು ಕಂಡು, ಅವನಿಗೆ ಮತ್ತಷ್ಟು ಸಂತೋಷವಾಯಿತು. ತರುವಾಯ ಅವನು ತನ್ನ ಮನೀಷೆಯನ್ನು ಬಾಚರಸನ ಮುಖಾಂತರ ಬಸವಣ್ಣನವರಿಗೆ ತಿಳಿಸಿದನು. ಆಗ ಬಸವಣ್ಣನವರು 'ಗುರುಹಿರಿಯರನ್ನು ಕೇಳೋಣ. ಅವರ ಆಜ್ಞೆಯಂತೆ ಮಾಡೋಣ ಎಂಬುದಾಗಿ ತಮ್ಮ ಅಭಿಮತವನ್ನು ಅರುಹಿದರು. ಆ ಮೇರೆಗೆ ಈಶಾನ್ಯ ಮುನಿಗಳನ್ನು, ಅಕ್ಕ ಭಾವಂದಿರನ್ನು ಕರೆತರಲು ವಾಹನವನ್ನು ಕಳುಹಲಾಯಿತು. ಅವರಿಗೆ ಕಲ್ಯಾಣದಲ್ಲಿ ನಡೆದ ಸಂಗತಿಗಳನ್ನೆಲ್ಲ ತಿಳಿಸಲಾಯಿತು. ಸಂಗನ ಅಪಾರ ಕರುಣದ ಪ್ರತ್ಯಕ್ಷ ಫಲವನ್ನು ಕಂಡು, ಅವರೆಲ್ಲರು ಆನಂದಭರಿತರಾದರು. ತಮ್ಮ ಮನೋರಥವು ಸತ್ಯ ಸೃಷ್ಟಿಯಲ್ಲಿ ಮೂರ್ತಸ್ವರೂಪವನ್ನು ತಳೆಯಲಿರುವದನ್ನು ಕಂಡು, ಗುರುಗಳಿಗೆ ಧನ್ಯತೆಯೆನಿಸಿತು. ಎಲ್ಲರೂ ಸಂಗನನ್ನು ಹೊಗಳುತ್ತ ಕಲ್ಯಾಣಕ್ಕೆ ಪಯಣ ಬೆಳೆಸಿ, ಅಲ್ಲಿ ಬಂದು ಬಾಚರಸನ ಮನೆಯಲ್ಲಿ ಉಳಿದುಕೊಂಡರು.

ತರುವಾಯ ಸಿದ್ಧರಸನು ಅವರೊಡನೆ ಆಪ್ತಾಲೋಚನೆ ಮಾಡಿ, ತನ್ನ ಮಗಳೊಡನೆ ಬಸವಣ್ಣನವರ ವಿವಾಹವನ್ನು ನಿಶ್ಚಯಿಸಿದನು. ಈ ವಿಷಯವು ಬಿಜ್ಜಳರಾಯನಿಗೆ ತಿಳಿಸಲಾಯಿತು. ಅದನ್ನು ಅರಿತು ಅವನಿಗೂ ತುಂಬಾ ಸಂತೋಷವಾಯಿತು. ಬಂಧು ಬಾಚಣ್ಣನಂತೂ ಹಿರಿಹಿರಿ ಹಿಗ್ಗಿದನು. ಮದುವೆಯು ತುಂಬ ರಾಜವೈಭವದಿಂದ ನೆರವೇರಿತು. ಸಿದ್ಧರಸನಿಗೆ ಬಸವಣ್ಣನವರಂಥ ತೇಜಸ್ವಿ ಅಳಿಯನು ಲಭಿಸಿದುದರಿಂದ ಆತನ ಆಪ್ತಸ್ನೇಹಿತರಿಗೂ ಬಹಳ ಹರ್ಷವಾಯಿತು.
————
೧೯. ಧ.ಬ. ಪು. xx
೨೦. ಕ.ಬ.ಜೀ. ಪು. ೧೬