ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
73

ಶತಮಾನದ ಶರಣರ ಕಲ್ಪನೆಯ ನಿರ್ಮಿತಿ” ಎಂಬುದಾಗಿ ಓರ್ವ ಹಿರಿಯ ಸಂಶೋಧಕರ ಅಭಿಪ್ರಾಯವಾಗಿದೆ. ಪುರಾಣಗಳಲ್ಲಿಯ ಅದರ ಅನುಲ್ಲೇಖನವೊಂದೇ ಅದರ ಅಸ್ತಿತ್ವವನ್ನಲ್ಲಗಳೆಯಲರಿಯೆನು. ಅದು ನೆರವೇರಿಸಿದ ಮಹಾಕಾರ್ಯವೇ - ವೀರಶೈವ ಬಾಂಧವ್ಯವೇ ಅದರ ಇರುವಿಕೆಯ ಹಿರಿದಾದ ನಿದರ್ಶನ. ಕಾರ್ಯವು ಇದ್ದಮೇಲೆ ಅದನ್ನು ನೆರವೇರಿಸಿದ ಕಾರಣವು - ಸಂಘಟನೆಯು ಇರಬೇಕಲ್ಲವೇ? ಆ ಸಂಘಟನೆಯು-ಸಂಸ್ಥೆಯು 'ಅನುಭವ ಮಂಟಪ' ಎಂಬ ಹೆಸರಿನಿಂದ ಅಂದು ಮೆರೆದಿರಲಿಕ್ಕಿಲ್ಲ. ಆದರೆ ಹಿರಿಯ ಶರಣರ ಒಂದು ಕೂಟ, ಅದಕ್ಕೆ ಒಬ್ಬ ಹಿರಿಯ ಮಾರ್ಗದರ್ಶಕ, ಕೆಲ ನಿಷ್ಠೆಯುಳ್ಳ ಕಾರ್ಯಕರ್ತರು, ಅವರಿಗೆ ಬೇಕಾದ ಶಿಕ್ಷಣ, ಹಾಗೂ ಪ್ರಚಾರ ಸಾಹಿತ್ಯ - ಇವೆಲ್ಲ ಇರಲೇಬೇಕಲ್ಲವೇ? ಇವೆಲ್ಲವುಗಳ ಸಮುದಾಯವೇ 'ಅನುಭವ ಮಂಟಪ'. ಆದುದರಿಂದ ಅಂಥ ಪ್ರಭಾವಶಾಲಿಯಾದ ಸಂಘಟನೆಯ - ಶಿಕ್ಷಣ ಸಂಸ್ಥೆಯ ಅಸ್ತಿತ್ವದ ಬಗೆಗೆ ಸಂದೇಹಪಡುವ ಕಾರಣವಿಲ್ಲ.
ಬಸವಣ್ಣನವರಿಂದ ಆರಾಧಿಸಲಾದ, ಸತ್ಕರಿಸಲಾದ ಜಂಗಮರು, ತಾವು ಹೋದಲ್ಲೆಲ್ಲ ಬಸವಣ್ಣನವರ ಭಕ್ತಿಯನ್ನೂ ಔದಾರ್ಯವನ್ನೂ ಬಾಯಿತುಂಬ ಹೊಗಳಿದರು. ಅವರ ಭಾವಪೂರ್ಣ ವಚನಗಳನ್ನು ಅಲ್ಲಲ್ಲಿ ಹಾಡಿದರು. ಅದರ ಫಲವಾಗಿ ಬಸವಣ್ಣನವರ ಕೀರ್ತಿಪರಿಮಳವು ಎಲ್ಲೆಡೆ ಪಸರಿಸಿತು. ಸುತ್ತಲಿಂದ ಜಂಗಮರ-ಶರಣರ ಹಿರಿದಾದ ಬಳಗವನ್ನು ಅವರೆಡೆ ಸೆಳೆಯಿತು. ಅದರಲ್ಲಿ ಕಿರಿಯರಂತೆ ಹಿರಿಯ ಶರಣರೂ ಅನೇಕರಿದ್ದರು. ಅವರು ತಮ್ಮೊಡನೆ ತಮ್ಮ ಹಿರಿಯ ವಿಚಾರವಾಹಿನಿಗಳನ್ನೂ ತಂದರು. ಎಲ್ಲ ವಾಹಿನಿಗಳು ಕಲ್ಯಾಣದಲ್ಲಿಯ ಪಾವನ ಪುಷ್ಕರಣಿಯನ್ನು ಸೇರಿದವು. ಅದನ್ನು ಸೇರಿದ ಸರಿತ್ತುಗಳಲ್ಲಿ ಮೂರು ಹಿರಿದೊರೆಗಳಿದ್ದವು. ಪ್ರಭುದೇವರ ಜ್ಞಾನಗಂಗೆಯು ಸಿದ್ಧರಾಮರ ಕರ್ಮಕಾಲಿಂದಿಯೊಡನೆ ಕಲ್ಯಾಣಕ್ಕೆ ಬಂದು ಅಲ್ಲಿಯ ಬಸವಣ್ಣನವರ ಭಕ್ತಿಸರಸ್ವತಿಯಲ್ಲಿ ಬೆರೆತು, ಅಲ್ಲಿ ಒಂದು ಪವಿತ್ರ ಪುಷ್ಕರಿಣಿಯನ್ನು ನಿರ್ಮಿಸಿತು. “ಅನುಭವ ಮಂಟಪ'ವೇ ಆ ಪಾವನಪುಷ್ಕರಿಣಿ, ಆ ಪವಿತ್ರ ತ್ರಿವೇಣಿಸಂಗಮ.