ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

78

"ಅನುಭವ-ಮಂಟಪ ಎಂಬ ಸಂಸ್ಥೆಯು ಕಲ್ಯಾಣದಲ್ಲಿಯ ಒಂದು ಪವಿತ್ರ ಮಂದಿರವು. ಅಲ್ಲಿ ಮುಮುಕ್ಷುಗಳೂ ಭಕರೂ ನೆರೆದು, ಭಗವಂತನ ನಾಮಮಹಿಮೆಯಿಂದಲೂ ಸ್ತವನದಿಂದಲೂ ವಾತಾವರಣವನ್ನು ತುಂಬಿಬಿಡುತ್ತಿದ್ದರು. ಈ ಪಾರಮಾರ್ಥಿಕ ಸಭೆಯಲ್ಲಿ ಪ್ರತಿಯೊಬ್ಬ ಅನನ್ಯ ಸಾಧಕನು, ಅತ್ಯಂತ ವಿನಯದಿಂದ ತನ್ನ ಪಾರಮಾರ್ಥಿಕ ಅನುಭವವನ್ನು ಅರುಹುತ್ತಿದ್ದನು ಮತ್ತು ತನ್ನ ಅನುಭವಕ್ಕೆ ಅನುಗುಣವಾದ ಸ್ಥಾನವನ್ನು ಆಕ್ರಮಿಸುತ್ತಿದ್ದನು. ಧರ್ಮವನ್ನು ಜನಸಾಮಾನ್ಯರ ಎಡೆಗೆ ಒಯ್ಯುವದೂ ಕರ್ಮಕಾಂಡದಿಂದಲೂ ಕಾಲ್ಪನಿಕ ತತ್ತ್ವಪ್ರಚುರತೆಯಿಂದಲೂ ಅದನ್ನು ಮುಕ್ತಗೊಳಿಸುವದು ಈ ಸಂಸ್ಥೆಯ ಪ್ರಧಾನ ಉದ್ದೇಶಗಳಲ್ಲಿ ಒಂದಾಗಿತ್ತು. ಅದು ಜಾತಿ-ಮತ-ಲಿಂಗಗಳ ವಿಭೇದವನ್ನು ತೊಡೆದು ಹಾಕಿತು. ಹಾಗೂ 'ಕಾಯಕವೇ ಕೈಲಾಸ' ಅರ್ಪಣಯುಕ್ತ ನಿಯತ ಉದ್ಯಮದಿಂದಲೇ ಕೈಲಾಸವನ್ನು ಪಡೆಯಬಹುದು ಎಂಬ ಸಿದ್ಧಾಂತವನ್ನೆತ್ತಿ ಹಿಡಿಯಿತು. ಪರಸ್ಪರ ಪ್ರೇಮವೂ ಸಮಾನವಾದ ಪಾರಮಾರ್ಥಿಕ ಗುರಿಯೂ ಅದರಲ್ಲಿಯ ಸದಸ್ಯರನ್ನು ಒಂದು ಗೂಡಿಸುವ ಬಂಧವಾಗಿತ್ತು ಈ ಸಭೆಯಲ್ಲಿಯೇ ಪರತತ್ತ್ವವನ್ನು ಪಡೆಯುವ ತಾತ್ವಿಕ ಹಾಗೂ ವ್ಯಾವಹಾರಿಕ ಅಂಗಗಳನ್ನು ಕುರಿತು ಮೇಲ್ತರಗತಿಯ ದಾರ್ಶನಿಕ ಚರ್ಚೆಯು ನಡೆಯುತ್ತಿತ್ತು. ಈ ದೃಷ್ಟಿಯಿಂದ ಅನುಭವ ಮಂಟಪ'ವು ಉಪನಿಷತ್ಕಾಲದ ಜನಕರಾಜನ ಓಲಗವನ್ನು ಹೋಲುವದು.”

'ಈ ವಿಶ್ವವಿದ್ಯಾಲಯದಲ್ಲಿ ಎಲ್ಲರೂ ವಿದ್ಯೆ ಕಲಿತರು, ಬುದ್ಧಿ ಕಲಿತರು, ಆತ್ಮೋದ್ಧಾರ ಮಾಡಿಕೊಂಡರು. ಬಸವಣ್ಣನ ಸಂಕಲ್ಪವು ಕಿಡಿ ಹೋಗಿ ಕೆಂಡಾಯ್ತು, ಹತ್ತುಗಡೆಯ ಗಿಡಮರಗಳಲ್ಲಿ ಅಗ್ನಿಯನ್ನು ಎಬ್ಬಿಸುವ ಜ್ವಾಲೆಯಾಯ್ತು, ಆ ಜ್ವಾಲೆಯಲ್ಲಿ ಕುಲಹೀನನು ಕುಲವಂತನಾದನು. ಹೇಡಿಯು ವೀರನಾದನು. ಕೀಳು ಮೇಲಾಯ್ತು ಮಾನವನು ಶರಣನಾದನು. ಭೂಲೋಕವು ಭುವರ್ಲೋಕವಾಯಿತು. ಕಲ್ಯಾಣದ ಅಂಕಿತವು ಅನ್ವರ್ಥಕವಾಯ್ತು ಕಲ್ಲು ಕುಣಿದವು. ಹುಲ್ಲು ಜಿಗಿದವು. ಮುಗಿಲು ಅಗಲವಾಯಿತು. ಚಿಕ್ಕೆ ನಕ್ಕವು. ಕಡಲು ಉಕ್ಕಿದವು.