ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

152
ಸುಖವನ್ನು ಬಯಸುವವರು ಭಗವಂತನನ್ನು ಭಜಿಸಬೇಕು. ದುಃಖಮೂಲವಾದ ವಿಷಯಗಳನ್ನೆಲ್ಲ ತ್ಯಜಿಸಬೇಕು."
ತರುವಾಯ ಭಕ್ತರು ಆದರಯುತರಾಗಿ ಸಂತರ-ಶರಣರ ಸೇವೆಯಲ್ಲಿ ನಿರತರಾಗಬೇಕು. ಶರಣರು ದೇವಮಾನವರು. ದೇವರನ್ನು ಕಂಡು, ದೇವರ ಆನಂದವನ್ನುಂಡು ದೇವರಲ್ಲಿ ಬೆರೆತವರು. ಅವರೇ ದೇವರನ್ನು ಕಾಣಿಸಬಲ್ಲರು. ಆತನನ್ನು ಕಾಣುವ ದಾರಿಯನ್ನು ತೋರಬಲ್ಲರು. ಶರಣರಿಗೆ ತನು-ಮನ-ಧನವನ್ನು ಅರ್ಪಿಸುವದು ಅವರ ಸೇವೆ. ಅವರು ಬೋಧಿಸಿದಂತೆ ನಡೆಯುವದು ಅವರ ಸೇವೆ. ಈ ಸೇವೆಯನ್ನು ತನು ಉಕ್ಕಿ ಮನ ಉಕ್ಕಿ ಮಾಡಬೇಕು. ಅಂದರೆ ಅವರ ಕರುಣವು ಲಭಿಸಿ, ಭಗವಂತನ ದರುಶನವು ದೊರೆಯುವದು. "ಚಂದಿರನ ಬಳಿ ನಿಲ್ಲುವವನಿಗೆ ಬೆಳದಿಂಗಳು ತಾನಾಗಿಯೇ ದೊರೆಯುವಂತೆ ಶರಣರ ನೆರೆಯಲ್ಲಿ ಭಗವಂತನು ತಾನಾಗಿಯೇ ದೊರೆಯುವನು" ಎಂದು ಬಸವಣ್ಣನವರು ಹೇಳಿರುವರು.
ಶರಣರ ಇಂಥ ದಿವ್ಯ ಸನ್ನಿಧಿಯಲ್ಲಿ ಭಗವಂತನನ್ನು ಅನನ್ಯಭಾವದಿಂದ ನೆನೆಯಬೇಕು. ಚಕೋರನು ಚಂದ್ರಮನನ್ನು ಚಿಂತಿಸುವಂತೆ, ಅಂಬುಜವು ಭಾನುವನ್ನು ಚಿಂತಿಸುವಂತೆ, ಭ್ರಮರವು ಬಂಡನ್ನು ಚಿಂತಿಸುವಂತೆ, ಭಕ್ತನು ಭಗವಂತನನ್ನು ಚಿಂತಿಸಬೇಕು. ಅವನು ತನ್ನ ಭಾವವನ್ನು ಬೆಳೆಸಿ, ತನ್ನ ಜೀವನದಲ್ಲಿ ಭಗವಂತನನ್ನು ತುಂಬಿಕೊಳ್ಳಬೇಕು. ತನ್ನ ವಚನದಲ್ಲಿ ಭಗವಂತನ ನಾಮಾಮೃತವನ್ನು ತುಂಬಿ, ನಯನದಲ್ಲಿ ಆತನ ಮೂರುತಿಯನ್ನು ತುಂಬಿ, ಕಿವಿಯಲ್ಲಿ ಕೀರುತಿಯನ್ನು ತುಂಬಿ, ಮನದಲ್ಲಿ ಆತನ ನೆನಹು ತುಂಬಿ, ಅವನು ಭಗವಂತನ ಚರಣಕಮದಲ್ಲಿ ತುಂಬಿಯಾಗಬೇಕು. ಮನವು ಆತನಲ್ಲಿ ಬೆರೆತು ತನು ಕರಗಬೇಕು. ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮಬೇಕು, ಕಂಗಳಲ್ಲಿ ಅಶ್ರುಜಲಂಗಳು ಸುರಿಯಬೇಕು, ಗದ್ಗದಂಗಳು ಹೊರಹೊಮ್ಮಬೇಕು. ಈ ಬಗೆಯ ಸಾತ್ವಿಕ ಭಾವಗಳು ಆತನಲ್ಲಿ ಮೈದಳೆಯಬೇಕು. ಇಂಥ ಭಕ್ತಿಪರವಶತೆಯಲ್ಲಿ ಮೈಮರೆತಾಗ