ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

60

ನಾನು ಆರಂಭವ ಮಾಡುವೆನಯ್ಯಾ ಗುರುಪೂಜೆಗೆಂದು !
ನಾನು ಬೆವಹಾರ ಮಾಡುವೆನಯ್ಯಾ ಲಿಂಗಾರ್ಚನೆಗೆಂದು!
ನಾನು ಪರರ ಸೇವೆ ಮಾಡುವೆನಯ್ಯಾ ಜಂಗಮದಾಸೋಹಕ್ಕೆಂದು,
ನಾನಾವ ಕರ್ಮ ಮಾಡಿದರೆಯೂ, ಆ ಕರ್ಮದ ಭೋಗವ
ನೀ ಕೊಡುವೆಯೆಂಬುದ ನಾನು ಬಲ್ಲೆನು !
ನೀ ಕೊಟ್ಟದ್ರವ್ಯವ ನಿಮಗಲ್ಲದೆ ಮತ್ತೊಂದ ಕ್ರಿಯೆ ಮಾಡೆನು.
ನಿಮ್ಮ ಸೊಮ್ಮಿಂಗೆ ಸಲಿಸುವೆನು, ನಿಮ್ಮಾಣೆ, ಕೂಡಲಸಂಗಮದೇವಾ!

ಈ ಬಗೆಯಾಗಿ ಶಿವಾರ್ಪಣ ಭಾವದಿಂದ ನಡೆದ ಬಸವಣ್ಣನವರ ಬಾಳನ್ನು ಪ್ರಭುದೇವರು ತುಂಬ ಕೊಂಡಾಡಿರುವರು. ಅವರ ಹೊಗಳಿಕೆಯು ಬಸವಣ್ಣನವರಿಗೆ ಅವರಿತ್ತ ಒಂದು ಅದ್ಭುತವಾದ ಪ್ರಶಸ್ತಿ ಪತ್ರವೇ ಸರಿ. ಪ್ರಭುದೇವರು ಹೇಳಿರುವುದೇನೆಂದರೆ :

ಕುಂಡಲಿಗನ ಕೀಟದಂತೆ,
ಮೈ ಮಣ್ಣಾಗದೆ ಇರ್ದೆಯಲ್ಲ ಬಸವಣ್ಣ !
ಜಲದೊಳಗಣ ತಾವರೆಯಂತೆ,
ಹೊದ್ದಿ ಹೊದ್ದದಂತೆ ಇರ್ದೆಯಲ್ಲ ಬಸವಣ್ಣ !
ಜಲದಿಂದಾದ ಮೌಕ್ತಿಕದಂತೆ,
ಜಲವು ತಾನಾಗದಂತೆ ಇರ್ದೆಯಲ್ಲ ಬಸವಣ್ಣ !
ಗುಹೇಶ್ವರ ಲಿಂಗದ ಆಣತಿವಿಡಿದು,
ತನುಗುಣಮತ್ತರಾಗಿರ್ಪ, ಐಶ್ವರ್ಯಾಂಧಕರ,
ಮತವನೇನ ಮಾಡಬಂದೆಯಯ್ಯಾ ಸಂಗನಬಸವಣ್ಣಾ !

ಬಸವಣ್ಣನವರು 'ಕಾಯುವ ಹೊದ್ದದೆ, ಮಾಯವ ಸೋಂಕದೆ ನಿರಾಳದಲಿ ನಿಂತಿದ್ದ' ರಂತೆ. ಆದರೆ ಅವರು ಈ ಉಚ್ಚತಮ ನೆಲೆಯನ್ನು ಅಷ್ಟು ಸುಲಭವಾಗಿ ಮುಟ್ಟಲಿಲ್ಲ. ಅದಕ್ಕವರು 'ಅಗ್ನಿದಿವ್ಯ' ದೊಳಗಿಂದ ಹಾದುಹೋಗಬೇಕಾಯಿತು. ಅದರ ವಿವರಗಳನ್ನು ಆರನೆಯ 'ಅಲೆ' ದಲ್ಲಿ ಕಾಣಬಹುದು.