ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

98
ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ,
ಪಶುವೇನ ಬಲ್ಲುದು? ಹಸುರೆಂದೆಳೆಸುವದು.
ವಿಷಯರಹಿತನ ಮಾಡಿ ಭಕ್ತಿರಸವ ದಣಿಯೆ ಮೇಯಿಸಿ,
ಸುಬುದ್ಧಿಯೆಂಬುದಕವನೆರೆದು,
ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.
ಆದರೆ ಬಸವಣ್ಣನವರ ಮಂಗಮನಸ್ಸು ವಿಷಯವನ್ನು ಬಿಡಲಿಲ್ಲ. ಶಿವನನ್ನು ನಂಬಲಿಲ್ಲ, ನೆಚ್ಚಲಿಲ್ಲ ನೆನೆಯಲಿಲ್ಲ. ಅದು ಕಂಡಕಂಡಲ್ಲಿ ಕಂಡಕಂಡಂತೆ ಕುಣಿಯುವದನ್ನು ಕಂಡು, ಬಸವಣ್ಣನವರು ಕಳವಳಗೊಂಡರು. ಅದರ ಅಲೆದಾಟವನ್ನು ತಡೆಯಲು ಸಂಗನನ್ನು ಬೇಡಿಕೊಂಡರು :
ಕೊಂಬಿನ ಮೇಲಣ ಮರ್ಕಟನಂತೆ ಲಂಘಿಸುವದೆನ್ನ ಮನವು ;
ನಿಂದಲ್ಲಿ ನಿಲ್ಲಿಲೀಯದೆನ್ನ ಮನವು ;
ಹೊಂದಿದಲ್ಲಿ ಹೊಂದಲೀಯದೆನ್ನ ಮನವು,
ಕೂಡಲಸಂಗಮದೇವಾ, ನಿಮ್ಮ ಚರಣಕಮಲದಲ್ಲಿ
ಭ್ರಮರನಾಗಿರಿಸು, ನಿಮ್ಮ ಧರ್ಮ.
ಅಂದಣವನೇರಿದ ಸೊಗಣನಂತೆ
ಕಂಡೊಡೆ ಬಿಡದು ಮುನ್ನಿನ ಸ್ವಭಾವವನು
ಸುಡು ! ಸುಡು ! ಮನವಿದು ವಿಷಯಕ್ಕೆ ಹರಿವುದು ;
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯ ಕೂಡಲಸಂಗಮದೇವಾ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರೆಗೊಡ್ಡಿ ಬೇಡುವೆ, ನಿಮ್ಮ ಧರ್ಮ.
ಸುಚಿತ್ತದಿಂದಲೆನ್ನ ಮನವು
ನಿಮ್ಮ ನೆನೆಯಲೊಲ್ಲದು : ಎಂತಯ್ಯಾ ?
ಎನಗಿನ್ನಾವುದು ಗತಿ ? ಎಂತಯ್ಯಾ ?
ಎನಗಿನ್ನಾವುದು ಮತಿ? ಎಂತಯ್ಯಾ ?
ಹರಹರಾ ! ಕೂಡಲಸಂಗಮದೇವಾ,
ಮನವ ಸಂತೈಸೆನ್ನ.