ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವಾ.
ನಂಬಿಕೆಯನ್ನು ಕುರಿತು ಅವರು ಹೇಳಿರುವುದೇನೆಂದರೆ :
ನಂಬರು ನೆಚ್ಚರು ಬರಿದೆ ಕರೆವರು
ನಂಬಲರಿಯರೀ ಲೋಕದ ಮನುಜರು.
ನಂಬಿ ಕರೆದೊಡೆ 'ಓ' ಎನ್ನನೆ ಶಿವನು?
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ' ನಮ್ಮ ಕೂಡಲಸಂಗಮದೇವ
ನಮ್ಮ ಪೂಜಾಧ್ಯಾನಗಳು ಒಲವಿನಿಂದ ಮಾಡಲಾಗಬೇಕು. ಒಲವಿಲ್ಲದ
ಪೂಜೆ ಯಾಂತ್ರಿಕವಾದುದು. ಅದು ಫಲಕಾರಿಯಾಗಲರಿಯದು,
ಭಗವಂತನ ಒಲವನ್ನು ಪಡೆಯಲರಿಯದು. ಅದನ್ನು ಕುರಿತು
ಬಸವಣ್ಣನವರು ಈ ರೀತಿ ಹೇಳಿರುವರು.
ಒಲವಿಲ್ಲದ ಪೂಜೆ! ನೇಹವಿಲ್ಲದ ಮಾಟ!
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣಾ
ಚಿತ್ರದ ಕಬ್ಬು ಕಾಣಿರಣ್ಣಾ
ಅಪ್ಪಿದರೆ ಸುಖವಿಲ್ಲ ; ಮೆಲಿದರೆ ರುಚಿಯಿಲ್ಲ
ಕೂಡಲಸಂಗಮದೇವಾ ನಿಜವಿಲ್ಲದವರ ಭಕ್ತಿ!
ಅದೇ ಮೇರೆಗೆ ನಮ್ಮ ಧ್ಯಾನವು ತುಂಬ ಏಕಾಗ್ರವಾಗಿರಬೇಕು ;
ಮನವು ಘನದಲ್ಲಿ ಬೆರೆಯಬೇಕು.
ಮನಕ್ಕೆ ಮನ ಒಂದಾಗಿ, ಧನಕ್ಕೆ ಧನವೊಂದಾಗಿ
ನಚ್ಚಿನ ಮಟ್ಟು ಅಚೊತ್ತಿದಂತಿರಬೇಕು.
ಚಿತ್ರ ಮನ ಬುದ್ದಿ ಒಂದಾದ ಮಚ್ಚು
ಬಿಚ್ಚಿ ಬೇರಾಗದಿದ್ದರೆ ಮೆಚ್ಚುವ
ನಮ್ಮ ಕೂಡಲಸಂಗಮದೇವ!